ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ‘'Tips’ ನೀಡುವುದು ತಪ್ಪಲ್ಲ: ಲಂಚಕ್ಕೆ ಹೊಸ ಹೆಸರು ಇಟ್ರಾ ಸಚಿವ ಶಿವಲಿಂಗೇಗೌಡ..?

ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?
K.M Shivalingegowda
ಶಿವಲಿಂಗೇಗೌಡ
Updated on

ಸಕಲೇಶಪುರ: ಸರ್ಕಾರಿ ಅಧಿಕಾರಿಗಳು ಸಕಾಲದಲ್ಲಿ ಕೆಲಸ ಮಾಡಿಕೊಟ್ಟರೆ ಅವರಿಗೆ ಸಾರ್ವಜನಿಕರು ಖುಷಿಯಿಂದ ‘ಟಿಪ್ಸ್’ ಅಥವಾ ‘ಗೌರವಧನ’ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿರುವ ಹೇಳಿಕೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವರ ಈ ವಿವಾದಾತ್ಮಕ ಹೇಳಿಕೆಯಿಂದಾಗಿ ಇಲ್ಲಿನ ‘ಪ್ರಜಾಸೇವಾ ಆಂದೋಲನ’ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಭಾರಿ ಗದ್ದಲ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುವ ಸಂದರ್ಭದಲ್ಲಿ ಸಚಿವರು ಈ ಹೇಳಿಕೆ ನೀಡುತ್ತಿದ್ದಂತೆ ಸಭೆಯಲ್ಲಿದ್ದ ಜನರು ಕೆರಳಿದರು. ಭೂಮಿಗೆ ಸಂಬಂಧಿಸಿದ ಸಮಸ್ಯೆಯನ್ನು ಹೊತ್ತು ಆಲೂರು ತಾಲ್ಲೂಕಿನಿಂದ ಬಂದಿದ್ದ ಪುನೀತ್ ಎಂಬ ರೈತ, ಸಚಿವರ ಹೇಳಿಕೆಯನ್ನು ವೇದಿಕೆಯ ಮುಂದೆಯೇ ತೀವ್ರವಾಗಿ ಖಂಡಿಸಿದರು.

ಅಧಿಕಾರಿಗಳಿಗೆ ಸಂಬಳ ನೀಡಲಾಗುತ್ತಿದೆ, ಹೀಗಿರುವಾಗ ಸಾರ್ವಜನಿಕರು ಯಾಕೆ ಟಿಪ್ಸ್ ಕೊಡಬೇಕು? ಇದು ಲಂಚಕ್ಕೆ ಪ್ರಚೋದನೆ ನೀಡಿದಂತಲ್ಲವೇ?" ಎಂದು ರೈತ ಮತ್ತು ಅಲ್ಲಿದ್ದ ಯುವಕರು ಸಚಿವರನ್ನು ನೇರವಾಗಿ ಪ್ರಶ್ನಿಸಿದರು. ಸಾರ್ವಜನಿಕರ ಬೆಂಬಲ ವ್ಯಕ್ತವಾಗುತ್ತಿದ್ದಂತೆ ಸಭೆಯಲ್ಲಿ ಗದ್ದಲ ತಾರಕಕ್ಕೇರಿತು.

ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಚಿವ ಶಿವಲಿಂಗೇಗೌಡರು ತಕ್ಷಣವೇ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು.

K.M Shivalingegowda
Watch | ಸಮಸ್ಯೆ ಹೇಳಿಕೊಂಡ ಬಾಲಕಿ; ತಾಳ್ಮೆ ಕಳೆದುಕೊಂಡ ಸಚಿವ ಶಿವಲಿಂಗೇಗೌಡ

ಅಧಿಕಾರಿಗಳು ಬಲವಂತವಾಗಿ ಹಣ ವಸೂಲಿ ಮಾಡಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ಗೌರವ ಸಲ್ಲಿಸಬೇಕು ಎಂಬ ಅರ್ಥದಲ್ಲಿ ನಾನು ಹೇಳಿದ್ದೇನೆ ಹೊರತು, ಲಂಚ ನೀಡುವುದನ್ನು ಪ್ರೋತ್ಸಾಹಿಸಿಲ್ಲ" ಎಂದು ಸ್ಪಷ್ಟನೆ ನೀಡಿದರು.

ಬಳಿಕ ಮಧ್ಯಪ್ರವೇಶಿಸಿದ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಪ್ರತಿಭಟನಾ ನಿರತ ಯುವಕರನ್ನು ಸಮಾಧಾನಪಡಿಸಿದರು.

ಸಚಿವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಸರ್ಕಾರಿ ಅಧಿಕಾರಿಯು ಕೆಲಸ ಮಾಡಲು ಸಾರ್ವಜನಿಕರಿಂದ ಲಂಚ ಅಥವಾ ಹಣಕ್ಕೆ ಬೇಡಿಕೆಯಿಟ್ಟರೆ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ಭರವಸೆ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com