ಕ್ರೆಡಿಟ್ ನೀವೇ ಪಡೆದುಕೊಳ್ಳಿ, ರೈತರ ಸಾಲ ಮನ್ನಾ ಮಾಡಿ: ಕೇಂದ್ರಕ್ಕೆ ರಾಜ್ಯ ಸರ್ಕಾರ ಒತ್ತಾಯ

ರಾಜ್ಯಾದ್ಯಂತ ಬಡ ಕುಟುಂಬಗಳಿಗೆ 30x40 ಅಡಿ ಅಳತೆಯ 15 ಲಕ್ಷ ವಸತಿ ನಿವೇಶನಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಡಿಸೆಂಬರ್ ವೇಳೆಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದೆ.
Parameshwar
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ
Updated on

ತುಮಕೂರು/ಬೆಂಗಳೂರು: ಕರ್ನಾಟಕ ಸರ್ಕಾರ ಈಗಾಗಲೇ ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಿದ್ದು, ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಪರಿಹಾರ ಒದಗಿಸಲು ಪ್ರಯತ್ನಿಸುತ್ತಿದೆ. ಇದೀಗ ಕೇಂದ್ರ ಸರ್ಕಾರ ದೇಶಾದ್ಯಂತ ರೈತರ ಸಾಲ ಮನ್ನಾ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗದಲ್ಲಿ ನಡೆದ ‘ಪ್ರಜಾ ಸೇವಾ ಆಂದೋಲನ’ ಸಭೆಯಲ್ಲಿ ಮಾತನಾಡಿದ ಅವರು, ದೇಶದಾದ್ಯಂತ ರೈತರ ಸಾಲವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಬೇಕು. ಈ ನಿರ್ಧಾರದ ಸಂಪೂರ್ಣ ಶ್ರೇಯಸ್ಸನ್ನು ಕೇಂದ್ರವೇ ಪಡೆದುಕೊಳ್ಳಲಿ, ನಾವು ಯಾವುದೇ ಶ್ರೇಯಸ್ಸು ಕೇಳುವುದಿಲ್ಲ ಎಂದು ಹೇಳಿದರು.

ಇದೇ ವೇಳೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಅಂದಿನ ಯುಪಿಎ ಸರ್ಕಾರ ಘೋಷಿಸಿದ್ದ ರೂ. 72,000 ಕೋಟಿ ರೈತರ ಸಾಲ ಮನ್ನಾವನ್ನು ಸ್ಮರಿಸಿದರು.

ರೈತರ ಸಮಸ್ಯೆಗಳು ಮತ್ತು ಬರ ಪರಿಸ್ಥಿತಿ ಕುರಿತು ಚರ್ಚಿಸಲು ಸೆಪ್ಟೆಂಬರ್ 21ರಿಂದ 23ರವರೆಗೆ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಲಾಗಿದೆ. ಏಳು ಜಿಲ್ಲೆಗಳ ಹಸಿರು ಪ್ರದೇಶಗಳು ಹಾಗೂ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ಸಮಿತಿ ವರದಿಯ ಪರಿಣಾಮಗಳ ಬಗ್ಗೆಯೂ ಅಧಿವೇಶನದಲ್ಲಿ ಚರ್ಚಿಸಲಾಗುವುದು.

ರಾಜ್ಯಾದ್ಯಂತ ಬಡ ಕುಟುಂಬಗಳಿಗೆ 30x40 ಅಡಿ ಅಳತೆಯ 15 ಲಕ್ಷ ವಸತಿ ನಿವೇಶನಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು, ಡಿಸೆಂಬರ್ ವೇಳೆಗೆ ಐದು ಲಕ್ಷ ನಿವೇಶನಗಳನ್ನು ಹಂಚಿಕೆ ಮಾಡುವ ಗುರಿ ಹೊಂದಿದೆ ಎಂದು ಹೇಳಿದರು.

ತುಮಕೂರು ಜಿಲ್ಲೆಯಲ್ಲಿ ಸುಮಾರು 20,000 ನಿವೇಶನಗಳನ್ನು ಅಭಿವೃದ್ಧಿಪಡಿಸಲು ಸಿದ್ಧತೆ ನಡೆಯುತ್ತಿದ್ದು, ಕುಣಿಗಲ್‌ಗೆ 10,000 ನಿವೇಶನಗಳನ್ನು ಕೋರಲಾಗಿದೆ ಎಂದರು.

ರಾಜ್ಯದಲ್ಲಿ ಹಣದ ಕೊರತೆ ಇಲ್ಲ. 10,000 ನಿವೇಶನಗಳನ್ನು ಸಿದ್ಧಪಡಿಸಿ ಹಂಚಿಕೆ ಮಾಡಿ,” ಎಂದು ಪರಮೇಶ್ವರ ಅವರು ಕುಣಿಗಲ್ ಶಾಸಕ ಎಚ್.ಡಿ. ರಂಗನಾಥ್ ಅವರಿಗೆ ಸೂಚಿಸಿದರು.

Parameshwar
ಬರ: ರಾಜ್ಯದ 17 ಜಿಲ್ಲೆಗಳ 53 ತಾಲೂಕುಗಳಲ್ಲಿ ಬೆಳೆ ಹಾನಿ ಖುದ್ದು ಪರಿಶೀಲನೆಗೆ ಸರ್ಕಾರದ ಆದೇಶ

ಇದೇ ವೇಳೆ ಕುಣಿಗಲ್‌ಗೆ ಮಂಜೂರಾಗಿರುವ ಎಂಜಿನಿಯರಿಂಗ್ ಕಾಲೇಜು ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ ಅವರು, ತುಮಕೂರಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಲು ಪ್ರಯತ್ನಿಸಲಾಗುತ್ತಿದೆ ಎಂದೂ ತಿಳಿಸಿದರು.

ಬಳಿಕ ‘ಪ್ರಜಾ ಸೇವಾ ಆಂದೋಲನ’ದಲ್ಲಿ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಯಾವುದೇ ವಿಳಂಬವಿಲ್ಲದೆ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಸಾರ್ವಜನಿಕರ ಅಹವಾಲುಗಳನ್ನು ಬಾಕಿ ಉಳಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಜನರ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕಾರ್ಯಕ್ರಮವನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಬರ ಪರಿಸ್ಥಿತಿ ಕುರಿತು ಅಧಿವೇಶನದಲ್ಲಿ ಸಮಗ್ರ ಚರ್ಚೆ

ಇದಕ್ಕೂ ಮುನ್ನ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಇಡೀ ರಾಜ್ಯ ಬರದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸೋಮವಾರದಿಂದ ಆರಂಭವಾಗಲಿರುವ ಮೂರು ದಿನಗಳ ವಿಶೇಷ ವಿಧಾನಮಂಡಲ ಅಧಿವೇಶನದಲ್ಲಿ ಪರಿಹಾರ ಕ್ರಮಗಳು ಹಾಗೂ ಕೇಂದ್ರ ಸರ್ಕಾರದಿಂದ ಕೋರಬೇಕಾದ ನೆರವಿನ ಕುರಿತು ಸಮಗ್ರ ಚರ್ಚೆ ಅಗತ್ಯವಿದೆ ಎಂದು ಹೇಳಿದರು.

ಬರ ಪರಿಹಾರಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೆರವು ಕೋರಬೇಕು ಎಂಬುದರ ಕುರಿತು ವಿಧಾನಮಂಡಲ ಅಧಿವೇಶನದಲ್ಲಿ ಸಮಗ್ರ ಚರ್ಚೆ ನಡೆಯಬೇಕು. ಈ ವಿಚಾರಗಳನ್ನು ಒಟ್ಟಾಗಿ ಚರ್ಚಿಸಬೇಕಿದೆ ಎಂದು ತಿಳಿಸಿದರು.

ಜನರಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನಡೆಯುವ ಚರ್ಚೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಬೇಕು. ಪ್ರತಿಯೊಂದು ವಿಚಾರವನ್ನೂ ರಾಜಕೀಯ ದೃಷ್ಟಿಕೋನದಿಂದ ನೋಡುವ ಬದಲು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದಕ್ಕೆ ಸರ್ಕಾರದ ಯಾವುದೇ ಆಕ್ಷೇಪವಿಲ್ಲ. ಆದರೆ ಪ್ರತಿಯೊಂದು ವಿಚಾರಕ್ಕೂ ಸೂಕ್ತ ಸಮಯ ಮತ್ತು ಸಂದರ್ಭ ಇರುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com