ಇಂದಿನಿಂದ ವಿಧಾನಮಂಡಲ ವಿಶೇಷ ಅಧಿವೇಶನ: ಕಸ್ತೂರಿರಂಗನ್ ವರದಿ ತಿರಸ್ಕರಿಸಲು ಒಕ್ಕೊರಲ ತೀರ್ಮಾನ ಸಾಧ್ಯತೆ, ಕೇಂದ್ರಕ್ಕೆ ಶಾಕ್ ಕೊಡಲು ರಾಜ್ಯ ಸರ್ಕಾರ ಸಜ್ಜು..!

ಅಧಿವೇಶನದ ಮೊದಲ ದಿನ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
DK Shivakumar
ಡಿ.ಕೆ.ಶಿವಕುಮಾರ್
Updated on

ಬೆಂಗಳೂರು: ಪಶ್ಚಿಮ ಘಟ್ಟಗಳ ರಕ್ಷಣೆ ಕುರಿತಾದ ಡಾ. ಕೆ. ಕಸ್ತೂರಿರಂಗನ್ ಸಮಿತಿ ವರದಿಯ ವಿರುದ್ಧ ಧ್ವನಿ ಎತ್ತಲು ಕರ್ನಾಟಕ ಸರ್ಕಾರ ಸಂಪೂರ್ಣ ಸಜ್ಜಾಗಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಇಂದಿನಿಂದ (ಸೆಪ್ಟೆಂಬರ್ 21) ಮೂರು ದಿನಗಳ ಕಾಲ ವಿಧಾನಮಂಡಲದ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯನ್ನು ಒಕ್ಕೊರಲಿನಿಂದ ತಿರಸ್ಕರಿಸಿ, ಸದನದಲ್ಲಿ ಐತಿಹಾಸಿಕ ಜಂಟಿ ನಿರ್ಣಯವನ್ನು ಅಂಗೀಕರಿಸುವುದು ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ.

ಕೇಂದ್ರ ಪರಿಸರ ಸಚಿವಾಲಯವು ಜುಲೈ 27 ರಂದು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯಕ್ಕೆ (ESA) ಸಂಬಂಧಿಸಿದಂತೆ 7ನೇ ಕರಡು ಅಧಿಸೂಚನೆಯನ್ನು ಪ್ರಕಟಿಸಿತ್ತು. ಇದಕ್ಕೆ ಅಧಿಕೃತ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 27 ಕೊನೆಯ ದಿನವಾಗಿದೆ. ಈ ಗಡುವಿನ ಒಳಗಾಗಿ ರಾಜ್ಯದ ಕಠಿಣ ನಿಲುವನ್ನು ಕೇಂದ್ರಕ್ಕೆ ತಲುಪಿಸಲು ಸರ್ಕಾರ ಈ ತುರ್ತು ಜಂಟಿ ಅಧಿವೇಶನವನ್ನು ಹಮ್ಮಿಕೊಂಡಿದೆ.

ಅಧಿವೇಶನದ ಮೊದಲ ದಿನ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಹೊರಡಿಸಿರುವ ಏಳನೇ ಕರಡು ಅಧಿಸೂಚನೆ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಕಸ್ತೂರಿರಂಗನ್ ವರದಿಯ ಆಧಾರದ ಮೇಲೆ ಪಶ್ಚಿಮ ಘಟ್ಟಗಳ ಕೆಲವು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಪ್ರಸ್ತಾವನೆಯನ್ನು ಈ ಕರಡು ಅಧಿಸೂಚನೆ ಒಳಗೊಂಡಿದೆ.

ರೈತರು ಹಾಗೂ ಸ್ಥಳೀಯ ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಏಳನೇ ಕರಡು ಅಧಿಸೂಚನೆಯನ್ನು ಬಹುತೇಕ ವಿರೋಧಿಸುತ್ತಿವೆ. ಹೀಗಾಗಿ ಅದರ ವಿರುದ್ಧ ವಿಧಾನಮಂಡಲದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸುವ ಸಾಧ್ಯತೆಯಿದೆ.

ಕೇಂದ್ರ ಸಚಿವಾಲಯದ ಕರಡು ಅಧಿಸೂಚನೆಯ ಪ್ರಕಾರ, 10 ಜಿಲ್ಲೆಗಳ 33 ತಾಲೂಕುಗಳ 1,576 ಗ್ರಾಮಗಳನ್ನು ಒಳಗೊಂಡ ಸುಮಾರು 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಪ್ರಸ್ತಾಪಿಸಲಾಗಿದೆ. ಚಾಮರಾಜನಗರ, ಕೊಡಗು, ಮೈಸೂರು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಬೆಳಗಾವಿ ಜಿಲ್ಲೆಗಳು ಇದರಲ್ಲಿ ಸೇರಿವೆ.

DK Shivakumar
ಕಸ್ತೂರಿ ರಂಗನ್‌ ವರದಿ: ಎಲ್ಲಾ ರಾಜಕೀಯ ಪಕ್ಷಗಳ ನಿಲುವು ಒಂದೇ; 'ಟೂರಿಂಗ್ ಟಾಕೀಸ್' ಕ್ಯಾಬಿನೆಟ್ ಸಂಸ್ಕೃತಿಯ ವಿರುದ್ಧ HDK ಆಕ್ರೋಶ

ಅಧಿವೇಶನಕ್ಕೂ ಮುನ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳ ರೈತರು ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಮಾತುಕತೆ ನಡೆಸಿದ್ದಾರೆ.

ಭಾನುವಾರ ಸಕಲೇಶಪುರದಲ್ಲಿ ನಡೆದ ಸಂವಾದದಲ್ಲಿ ಅವರು, “ಸ್ಥಳೀಯ ಜನರು ಮತ್ತು ರೈತರ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ” ಎಂದು ಹೇಳಿದ್ದಾರೆ.

ಬಗರ್ ಹುಕುಂ ಜಮೀನುಗಳಲ್ಲಿ ಕೃಷಿ ಮಾಡುತ್ತಿರುವ ರೈತರನ್ನು ಒಕ್ಕಲೆಬ್ಬಿಸದಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸುವ ಮೂಲಕ ರೈತರ ಆತಂಕವನ್ನು ನಿವಾರಿಸಲು ಶಿವಕುಮಾರ್ ಪ್ರಯತ್ನಿಸಿದ್ದಾರೆ.

ಶೃಂಗೇರಿಯಲ್ಲಿ ಬಂದ್‌ಗೆ ರೈತರ ಕರೆ

ಅಧಿವೇಶನಕ್ಕೂ ಮುನ್ನ ಸರ್ಕಾರದ ಈ ಜನಸಂಪರ್ಕ ಪ್ರಯತ್ನವನ್ನು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ. ಅಂತಿಮ ನಿಲುವು ಕೈಗೊಳ್ಳುವ ಮೊದಲು ಪರಿಣಾಮಕ್ಕೊಳಗಾಗಬಹುದಾದ ಸಮುದಾಯಗಳ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ. ಆದರೆ, ಕಸ್ತೂರಿರಂಗನ್ ವರದಿ ಜಾರಿಯನ್ನು ವಿರೋಧಿಸಿ ಶೃಂಗೇರಿಯ ರೈತರು ಸೋಮವಾರ ಬಂದ್‌ಗೆ ಕರೆ ನೀಡಿದ್ದಾರೆ.

ಅಧಿವೇಶನದ ಉಳಿದ ಎರಡು ದಿನಗಳಲ್ಲಿ ಬರ ಪರಿಸ್ಥಿತಿ ಹಾಗೂ ಕೃಷಿ ಸಂಬಂಧಿತ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ ನಡೆಯುವ ಸಾಧ್ಯತೆಯಿದೆ.

ರಾಜ್ಯದ ಹಲವು ಭಾಗಗಳಲ್ಲಿ ಮಳೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ತಮ್ಮ ಕ್ಷೇತ್ರಗಳಲ್ಲಿನ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕೆಂದು ಪಕ್ಷಭೇದ ಮರೆತು ಶಾಸಕರು ಒತ್ತಾಯಿಸುವ ನಿರೀಕ್ಷೆಯಿದೆ.

ಈ ನಡುವೆ ಅರ್ಥಪೂರ್ಣ ಚರ್ಚೆಗೆ ಸಹಕರಿಸುವಂತೆ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಮನವಿ ಮಾಡಿದ್ದಾರೆ.

ಬರದಿಂದ ರೈತರು, ಗ್ರಾಮೀಣ ಸಮುದಾಯಗಳು ಹಾಗೂ ಜಾನುವಾರುಗಳ ಮೇಲಾಗಿರುವ ಪರಿಣಾಮ, ಕುಡಿಯುವ ನೀರಿನ ಕೊರತೆ, ಬೆಳೆ ನಷ್ಟ, ಪರಿಹಾರ ಕ್ರಮಗಳು, ಕೇಂದ್ರದಿಂದ ಕರ್ನಾಟಕಕ್ಕೆ ದೊರೆಯಬೇಕಾದ ನೆರವು ಹಾಗೂ ಕಸ್ತೂರಿರಂಗನ್ ವರದಿ ಸೇರಿದಂತೆ ಹಲವು ವಿಷಯಗಳು ಚರ್ಚೆಯಲ್ಲಿ ಒಳಗೊಳ್ಳಬೇಕು ಎಂದು ಹೇಳಿದ್ದಾರೆ.

ಸ್ಥಳ ಪರಿಶೀಲನೆಗಳ ಬಳಿಕ ಸರ್ಕಾರ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 224 ವಿಧಾನಸಭಾ ಕ್ಷೇತ್ರಗಳಿಗೂ ತಲಾ 1 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬರಪೀಡಿತ ಪ್ರದೇಶಗಳ ರೈತರಿಗೆ ಸಾಲ ಮರುಪಾವತಿಗೆ ತಡೆ ಹಾಗೂ ಮರುಪಾವತಿ ಅವಧಿ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ಘೋಷಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರತಿಪಕ್ಷಗಳು ಅಂದಿನ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಹುತೇಕ ಗದ್ದಲದಿಂದಲೇ ಸಾಗಿದ್ದ 10 ದಿನಗಳ ಮುಂಗಾರು ಅಧಿವೇಶನದ ಬಳಿಕ ಈ ವಿಶೇಷ ಅಧಿವೇಶನ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com