

ಬೆಂಗಳೂರು: ಕರ್ನಾಟಕದ ಸಹಕಾರ ಹಾಲು ಉತ್ಪಾದಕರ ಸಂಘಗಳ ನಿಯೋಗ ನಿನ್ನೆ ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ನಂದಿನಿ ಹಾಲಿನ ಖರೀದಿ ಹಾಗೂ ಚಿಲ್ಲರೆ ದರವನ್ನು ಪ್ರತಿ ಲೀಟರ್‌ಗೆ 8-10 ರೂಪಾಯಿ ಹೆಚ್ಚಿಸುವಂತೆ ಮನವಿ ಮಾಡಿತು.
ಸಿಎಂ ಡಿ ಕೆ ಶಿವಕುಮಾರ್ ಅವರು ಕಳೆದ 10 ವರ್ಷಗಳಲ್ಲಿ ಪಶು ಆಹಾರದ ಬೆಲೆಯಲ್ಲಿ ಆಗಿರುವ ಏರಿಕೆ, ಒಂದು ಲೀಟರ್ ಹಾಲು ಉತ್ಪಾದಿಸಲು ತಗಲುವ ವೆಚ್ಚ, ಪ್ರತಿ ಜಿಲ್ಲೆಯಲ್ಲಿ ಉತ್ಪಾದನೆಯಾಗುವ ಹಾಲಿನ ಪ್ರಮಾಣ, ಸಹಕಾರ ಸಂಘಗಳ ಹೊರಗೆ ಮಾರಾಟವಾಗುವ ಹಾಲಿನ ಪ್ರಮಾಣ ಹಾಗೂ ಸಂಘಗಳು ಖರೀದಿಸುವ ಹಾಲಿನ ಪ್ರಮಾಣದ ಕುರಿತು ಸಮಗ್ರ ಮಾಹಿತಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನೆರೆ ರಾಜ್ಯಗಳಲ್ಲಿ ಹಾಲಿನ ಖರೀದಿ ಮತ್ತು ಚಿಲ್ಲರೆ ದರಗಳ ಬಗ್ಗೆಯೂ ಮಾಹಿತಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ನಿಯೋಗದ ಪರವಾಗಿ ಮಾತನಾಡಿದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ (BAMUL) ಅಧ್ಯಕ್ಷ ಹಾಗೂ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್, ಪಶು ಆಹಾರ, ಮೇವು, ಔಷಧಿಗಳು ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ಇತರ ವೆಚ್ಚಗಳು ಹೆಚ್ಚಾಗಿರುವುದರಿಂದ ಹಾಲು ಉತ್ಪಾದನಾ ವೆಚ್ಚ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ಬರ ಪರಿಸ್ಥಿತಿಯಿಂದಾಗಿ ಬೆಳೆ ಇಳುವರಿ ಮತ್ತು ಮೇವಿನ ಲಭ್ಯತೆ ಕಡಿಮೆಯಾಗಿದ್ದು, ಇದರಿಂದ ಹೈನುಗಾರರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ವಿವಿಧ ರಾಜ್ಯಗಳ ಸಹಕಾರ ಸಂಸ್ಥೆಗಳು ಮತ್ತು ಖಾಸಗಿ ಡೇರಿಗಳು ನಿರಂತರವಾಗಿ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸುತ್ತಿವೆ. ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಳೆದ ಒಂದೂವರೆ ವರ್ಷದಿಂದ ನಾವು ಹಾಲಿನ ಬೆಲೆಯನ್ನು ಹೆಚ್ಚಿಸಿಲ್ಲ. ಖಾಸಗಿ ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ಖರೀದಿಸಲು ಮುಂದಾಗುತ್ತಿದ್ದು, ಇದರಿಂದ ಹಾಲು ಖರೀದಿ ವಿಚಾರದಲ್ಲಿ ಸಹಕಾರ ಸಂಘಗಳ ನಡುವೆ ತೀವ್ರ ಪೈಪೋಟಿ ಉಂಟಾಗಿದೆ ಎಂದು ಡಿ ಕೆ ಸುರೇಶ್ ಹೇಳಿದರು.
ಕರ್ನಾಟಕದಲ್ಲಿ ಸಹಕಾರ ಸಂಘಗಳು ಪ್ರಸ್ತುತ ಉತ್ಪಾದಕರಿಂದ ಟೋನ್ಡ್ ಹಾಲನ್ನು ಪ್ರತಿ ಲೀಟರ್‌ಗೆ 35 ರೂಪಾಯಿಗೆ ಖರೀದಿಸುತ್ತಿವೆ. ಆದರೆ ಆಂಧ್ರಪ್ರದೇಶದಲ್ಲಿ 41.50 ರೂ, ಕೇರಳದಲ್ಲಿ 41.80 ರೂ, ಮಹಾರಾಷ್ಟ್ರದಲ್ಲಿ 41 ರೂ ಮತ್ತು ತಮಿಳುನಾಡಿನಲ್ಲಿ 42.24 ರೂ ದರದಲ್ಲಿ ಖರೀದಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಅದೇ ರೀತಿ, ಕರ್ನಾಟಕದಲ್ಲಿ ಹಾಲಿನ ಗರಿಷ್ಠ ಚಿಲ್ಲರೆ ದರವು ನೆರೆ ರಾಜ್ಯಗಳಿಗೆ ಹೋಲಿಸಿದರೆ ಪ್ರತಿ ಲೀಟರ್‌ಗೆ ಕನಿಷ್ಠ 12 ರೂಪಾಯಿಗಳಷ್ಟು ಕಡಿಮೆಯಿದೆ ಎಂದು ಹೇಳಿದರು.