

ಬೆಂಗಳೂರು: ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 5 ರೂ. ಹೆಚ್ಚಿಸಲು ಸರ್ಕಾರ ಸಮ್ಮತಿ ನೀಡಿರುವ ಬೆನ್ನಲ್ಲೇ ಇದೀಗ ಬಸ್ ಪ್ರಯಾಣ ದರ ಏರಿಕೆ ಯಾಗುವ ಸಾಧ್ಯತೆ ಹೆಚ್ಚಾಗಿದೆ.
ಈ ಕುರಿತು ವಿಧಾನಪರಿಷತ್ ನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್, ಗುರುವಾರ ಹೇಳಿಕೆ ನೀಡಿದ್ದು, ಬಸ್ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆ ಮಾಡುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.
ಬರ ಪರಿಸ್ಥಿತಿ ಕುರಿತು ಚರ್ಚೆ ನಡೆಯುವ ವೇಳೆ ಹಾಲಿನ ದರ ಏರಿಕೆ ಪ್ರಸ್ತಾಪ ಬಂದಾಗ ಮಾತನಾಡಿದ ಸಚಿವರು, ಡೀಸೆಲ್ ದರ ನಾಲ್ಕು ಬಾರಿ ಏರಿಕೆಯಾಗಿದೆ. ವಿರೋಧ ಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿರಲಿಲ್ಲ. ಆದರೆ, ಈಗ ಏರಿಕೆ ಅನಿವಾರ್ಯವಾಗಿದೆ ಎಂದರು.
ಸಾರಿಗೆ ನಿಗಮಗಳು ಸುಮಾರು 8,000 ಕೋಟಿ ನಷ್ಟದಲ್ಲಿವೆ. ಸಿಬ್ಬಂದಿಗೆ ವೇತನ ನೀಡುವುದೇ ಕಷ್ಟವಾಗಿದೆ. ನಿಗಮಗಳ ನಷ್ಟದ ಪ್ರಮಾಣದ ಹೆಚ್ಚಳದಿಂದಾಗಿ ಹೊಸ ನೇಮಕಾತಿ ಪ್ರಕ್ರಿಯೆಗಳಿಗೂ ತೊಡಕಾಗಿದೆ ಎಂದು ಹೇಳಿದರು.