

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ದಸರಾ ಗಜಪಡೆ ಮಾವುತರು, ಕಾವಾಡಿಗಳಿಗೆ ಉಪಾಹಾರ ಮತ್ತು ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ತಡವಾಗಿ ಬಂದ ಘಟನೆ ಸೋಮವಾರ ನಡೆದಿದೆ.
ಯತೀಂದ್ರ ತಡವಾಗಿ ಬಂದಿದ್ದಕ್ಕೆ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅವರು, ಸಮಯ ಪ್ರಜ್ಞೆ ಇಲ್ವೇನ್ರೀ? ಎಂದು ಸಚಿವರನ್ನೇ ಪ್ರಶ್ನಿಸಿದ್ದಾರೆ.
ಇಂದು ಬೆಳಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಉಪಹಾರ ಕಾರ್ಯಕ್ರಮಕ್ಕೆ ಯತೀಂದ್ರ ಸಿದ್ದರಾಮಯ್ಯ ಒಂದು ತಾಸು ತಡವಾಗಿ, ಅಂದರೆ 10 ಗಂಟೆಗೆ ಆಗಮಿಸಿದರು. ಇದರಿಂದ ಮಾವುತರು ಮತ್ತು ಕಾವಾಡಿಗರು ಒಂದು ಗಂಟೆ ಕಾಲ ಕಾಯುವಂತಾಯಿತು.
ಬೆಳಗ್ಗೆಯಿಂದ ಕಾಯುತ್ತಿದ್ದ ಮಾವುತರಿಗೆ ಗೌರವ ನೀಡಬೇಕು, ಸಮಯಕ್ಕೆ ಸರಿಯಾಗಿ ಉಪಹಾರ ನೀಡಬೇಕು, ಅವರನ್ನು ಊಟಕ್ಕಾಗಿ ಕಾಯಿಸುವುದು ಸರಿಯಲ್ಲ ಎಂದು ಶಾಸಕ ತನ್ವೀರ್ ಸೇಠ್ ಬೇಸರ ವ್ಯಕ್ತಪಡಿಸಿ, ಕೂಡಲೇ ಅಧಿಕಾರಿಗಳಿಗೆ ಕಾರ್ಯಕ್ರಮ ಆರಂಭಿಸುವಂತೆ ಸೂಚಿಸಿದರು. ಆದರೆ ಅಧಿಕಾರಿಗಳು ಸಹ ಕಾರ್ಯಕ್ರಮವನ್ನು ಆರಂಭಿಸಲು ವಿಳಂಬ ಮಾಡಿದ್ದಕ್ಕೆ ಮತ್ತಷ್ಟು ಸಿಡಿಮಿಡಿಗೊಂಡು ಸ್ಥಳದಿಂದ ಹೊರನಡೆದರು.
ಇನ್ನು ತಾವು ತಡವಾಗಿ ಬಂದಿದ್ದಕ್ಕೆ ಸಮಜಾಯಿಷಿ ನೀಡಿದ ಸಚಿವ ಯತೀಂದ್ರ ಅವರು, ನಮ್ಮದು ಹೊಸ ಮನೆ, ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಮನೆಯಲ್ಲಿ ಅಮ್ಮ ಇರಲಿಲ್ಲ, ಕೆಲಸಗಾರರೂ ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆ ಮಾಡಿ ಬರುವುದರಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ತಡಮಾಡಿ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.