

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ರಾತ್ರಿ ಪೂರ್ತಿ ಧಾರಾಕಾರ ಮಳೆಯಾಗಿದ್ದು, ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ಮಳೆಯ ಪರಿಣಾಮ ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿಧಾನಗೊಂಡಿದ್ದು, ಕೆಲವೆಡೆ ಭಾರಿ ವಾಹನ ದಟ್ಟಣೆ ಉಂಟಾಗಿದೆ.
ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಕಾರ್ಪೋರೇಷನ್, ಮಾರ್ಕೆಟ್, ಲಾಲ್‌ಬಾಗ್ ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ರಾತ್ರಿ ಭಾರಿ ಮಳೆಯಾಗಿದೆ. ಮಳೆಯ ನೀರು ರಸ್ತೆಯಲ್ಲಿ ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ವೈಟ್‌ಫೀಲ್ಡ್, ಮಾರತ್ತಹಳ್ಳಿ, ಹೊರ ವರ್ತುಲ ರಸ್ತೆ, ಬಳಗೆರೆ ಹಾಗೂ ಬೆಳ್ಳಂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಮಳೆಯಾಗಿದ್ದು, ಹಲವು ಕಡೆ ಸಂಚಾರ ದಟ್ಟಣೆ ಕಂಡುಬಂದಿದೆ. ಮಳೆಯ ನಡುವೆಯೇ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಇತ್ತ ನೆಲಮಂಗಲದ ಹಲವು ಭಾಗಗಳಲ್ಲಿ ರಾತ್ರಿಯಿಡೀ ಮಳೆಯಾಗಿದ್ದು, ಬೆಳಗ್ಗೆಯೂ ಮಳೆ ಮುಂದುವರಿದಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಜಾವ ಲಾರಿಯೊಂದು 108 ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಮಾಹಿತಿ ತಿಳಿದು ಚಿಕ್ಕಬಾಣಾವಾರ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಇಂದು ಕೂಡ ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ ಸಂಜೆ ವೇಳೆ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ರಾಜ್ಯದಲ್ಲಿ ಇಂದು ಕೂಡ ಹಲವೆಡೆ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ಮೈಸೂರು ಹಾಗೂ ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲವು ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದ ಗಾಳಿ, ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಬಹುತೇಕ ಒಣಹವೆ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಇಂದು ಕೂಡ ಮಳೆಯ ಮುನ್ಸೂಚನೆಯಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ.