ರಾಜುಗೌಡ ಜೆಡಿಎಸ್ ಸೇರ್ಪಡೆ

ಬೆಂಗಳೂರು: ನಿನ್ನೆಯಷ್ಟೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಮಾಜಿ ಸಚಿವ ರಾಜುಗೌಡ(ನರಸಿಂಹನಾಯಕ್) ಅವರು ಶುಕ್ರವಾರ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ರಾಜುಗೌಡ ಅವರಿಗೆ ಕೊನೆ ಗಳಿಗೆಯಲ್ಲಿ 'ಕೈ'ಯಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರಲು ನಿರ್ಧರಿಸಿದ್ದರು. ಈ ಸಂಬಂಧ ನಿನ್ನೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದರು.
ರಾಜುಗೌಡ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ತೆನೆ ಹೊತ್ತ ಮಹಿಳೆಯನ್ನು ಅಪ್ಪಿಕೊಂಡರು.
2004ರ ಚುನಾವಣೆಯಲ್ಲಿ ರಾಜುಗೌಡ ಅವರು ಕನ್ನಡ ನಾಡು ಪಕ್ಷದ ಮೂಲಕ ತಮ್ಮ ಚೊಚ್ಚಲ ವಿಧಾನಸಭೆ ಚುನಾವಣೆಯನ್ನು ಎದುರಿಸಿದ್ದರು. ಮೊದಲ ಯತ್ನದಲ್ಲೇ ಯಶಸ್ಸು ಗಳಿಸಿ ವಿಧಾನಸಭೆ ಪ್ರವೇಶಿಸಿದ್ದರು. ಅಲ್ಲದೇ ಅತಿ ಕಿರಿಯ ವಯಸ್ಸಿನಲ್ಲೇ ಶಾಸಕರಾದ ಹೆಗ್ಗಳಿಕೆಯನ್ನೂ ಪಡೆದರು. ಜತೆಗೆ ಕನ್ನಡನಾಡು ಪಕ್ಷದಿಂದ ಆಯ್ಕೆಯಾದ ಏಕೈಕ ಅಭ್ಯರ್ಥಿಯೂ ಆಗಿ ಅವರು ಗಮನ ಸೆಳೆದಿದ್ದರು.
ನಂತರ ಜೆಡಿಎಸ್ ಸೇರಿದ್ದ ಅವರು, 2008ರ ಚುನಾವಣೆ ವೇಳೆಗೆ ಬಿಜೆಪಿಗೆ ಬಂದರು. ಸುರಪುರ ಎಸ್ಟಿ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಆಯ್ಕೆಯಾದರು. ನಂತರ ಯಡಿಯೂರಪ್ಪನವರಿಗೆ ಹತ್ತಿರವಾಗಿ ಸರ್ಕಾರದಲ್ಲಿ ಸಣ್ಣ ಕೈಗಾರಿಕಾ ಸಚಿವರೂ ಆದರು.
ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಲು ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿ ಟಿಕೆಟ್ಗಾಗಿ ತೀವ್ರ ಕಸರತ್ತು ನಡೆಸಿದರು. ಆದರೆ ಕೈ ಟಿಕೆಟ್ ಸಿಗದೇ ವಾಪಸಾಗಿದ್ದ ಅವರು, ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯ ಪಡೆದು ಇದೀಗ ಮತ್ತೆ ಜೆಡಿಎಸ್ ಸೇರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


