ಡಿವೈಎಸ್‌ಪಿಯನ್ನು ನಾನೇ ಹತ್ಯೆ ಮಾಡಿದೆ: ಬಬ್ಲೂ ಯಾದವ್

ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಡಿವೈಎಸ್ಪಿ ಜಿಯಾ ಉಲ್ ಹಕ್ ಅವರ ಹತ್ಯೆಯನ್ನು ತಾನೇ ಮಾಡಿರುವುದಾಗಿ ನನ್ಹೆ ಯಾದವ್ ಪುತ್ರ ಬಬ್ಲೂ ಯಾದವ್ ಒಪ್ಪಿಕೊಂಡಿದ್ದಾನೆ.
ಕಳೆದ ಮಾರ್ಚ್ 2ರಂದು ಉತ್ತರ ಪ್ರದೇಶದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣ ಹೊಸದೊಂದು ತಿರುವುಪಡೆದಿದೆ. ಡಿವೈಎಸ್‌ಪಿ ಜಿಯಾ ಉಲ್ ಹಕ್‌ರನ್ನು ತಾನೇ ಹತ್ಯೆ ಮಾಡಿರುವುದಾಗಿ ಅಂದು ಮೃತಪಟ್ಟ ಕುಂದಾ ಗ್ರಾಮದ ಮುಖಂಡ ನನ್ಹೆ ಯಾದವ್ ಅವರ ಪುತ್ರ ಬಬ್ಲೂ ಯಾದವ್ ಸಿಬಿಐ ಅಧಿಕಾರಿಗಳ ಬಳಿ ಹೇಳಿಕೆ ನೀಡಿದ್ದಾನೆ. ಇದೀಗ ಬಬ್ಲೂ ಯಾದವ್‌ನನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದು, ಆತನಿಂದ ಜಿಯಾ ಉಲ್ ಹಕ್ ಅವರ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 2ರಂದು ಉತ್ತರ ಪ್ರದೇಶದ ಬಲಿಪುರ ಜಿಲ್ಲೆಯ ಕುಂದಾ ಗ್ರಾಮದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಗ್ರಾಮದ ಮುಖಂಡ ನನ್ಹೆ ಯಾದವ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಡಿವೈಎಸ್‌ಪಿ ಜಿಯಾ ಉಲ್ ಹಕ್ ಅವರನ್ನು, ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದರು.
ಟೀ ಅಂಗಡಿ ಮುಂದೆ ಡಿವೈಎಸ್‌ಪಿ ಹಕ್ ಅವರು ನಿಂತಿದ್ದ ಸಂದರ್ಭದಲ್ಲಿ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಅದೇ ಗ್ರಾಮದ ಅಜಯ್ ಪಾಲ್ ಹಾಗು ವಿಜಯ್ ಪಾಲ್ ಎಂಬ ಸಹೋದರರನ್ನು ಬಂಧಿಸಿದ್ದರು. ಪ್ರಕರಣದ ಮತ್ತೋರ್ವ ಆರೋಪಿಯಾಗಿರುವ ಬಂಧಿತ ಸಹೋದರರ ತಂದೆ ಕಮತಾ ಪಾಲ್ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಸಿಬಿಐ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಉತ್ತರ ಪ್ರದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಈ ಪ್ರಕರಣದ ಹಿಂದೆ ಪ್ರಮುಖ ರಾಜಕಾರಣಿ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾಭಯ್ಯಾ ಅವರ ಹಸ್ತಕ್ಷೇಪವಿದೆ. ಅವರೇ ತಮ್ಮ ಬೆಂಬಲಿಗರ ಮೂಲಕ ತನ್ನ ಪತಿಯನ್ನು ಕೊಲ್ಲಿಸಿದ್ದಾರೆ ಎಂದು ಜಿಯಾ ಉಲ್ ಹಕ್ ಪತ್ನಿ ಪರ್ವೀನ್ ಆಜಾದ್ ಆರೋಪಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅಂದು ಸಚಿವರಾಗಿದ್ದ ರಾಜಾಭಯ್ಯಾ ಅವರ ರಾಜಿನಾಮೆ ಪಡೆದು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದರು. ಅಲ್ಲದೆ ಸ್ವತಃ ರಾಜಾಭಯ್ಯಾ ಅವರೇ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅಖಿಲೇಶ್ ಯಾದವ್ ಅವರ ಬಳಿ ಹೇಳಿಕೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


