ಈಗಿನ ಸುದ್ದಿ

ದೆಹಲಿ: ಬಾಲಕಿ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರ

Published On :

ನವದೆಹಲಿ: ದೆಹಲಿಯಲ್ಲಿ ಯುವತಿಯೊಬ್ಬಳನ್ನು ಸಾಮೂಹಿಕ ಅತ್ಯಾಚಾರಕ್ಕೊಳಪಡಿಸಿದ ಪ್ರಕರಣ ನಡೆದ ನಾಲ್ಕು ತಿಂಗಳಲ್ಲೇ, ಇದೀಗ ಬಾಲಕಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ದೇಶವನ್ನೇ ನಡುಗಿಸಿದೆ. ಇಲ್ಲಿನ ಗಾಂಧೀನಗರ ಪ್ರದೇಶದಲ್ಲಿ 5ರ ಹರೆಯದ ಬಾಲಕಿಯೊಬ್ಬಳನ್ನು ನೆರೆಮನೆಯಾತ ಎರಡು ದಿನಗಳ ಕಾಲ ನಿರಂತರವಾಗಿ ಲೈಂಗಿಕ ಶೋಷಣೆಗೊಳಪಡಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಮಾಧ್ಯಮಗಳ ವರದಿಗಳ ಪ್ರಕಾರ ಈ ಬಾಲಕಿ ಏಪ್ರಿಲ್ 15ರಂದು ಅಪಹರಣಕ್ಕೊಳಗಾಗಿದ್ದಳು. ಈಕೆಯನ್ನು ಅಪಹರಿಸಿದ ನೆರೆಮನೆಯಾತ ಎರಡು ದಿನಗಳ ಕಾಲ ಆಕೆಯನ್ನು ಅತ್ಯಾಚಾರಕ್ಕೊಳಪಡಿಸಿದ್ದಾನೆ.

ಬಾಲಕಿಯ ಮೇಲೆ ಅತ್ಯಾಚಾರವೆಸಗಿದ 30ರ ಹರೆಯದ ವ್ಯಕ್ತಿ ಬಾಲಕಿಯ ಮನೆಯಿರುವ ಕಟ್ಟಡದ ಗ್ರೌಂಡ್ ಫ್ಲೋರ್‌ನಲ್ಲೇ ವಾಸವಾಗಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ. ಆದಾಗ್ಯೂ, ಈತನ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಬುಧವಾರ ರಾತ್ರಿ ಪಕ್ಕದ ಮನೆಯಿಂದ ಬಾಲಕಿಯ ಅಳು ಕೇಳಿಸಿದ್ದು, ಬಾಲಕಿಯ ಹೆತ್ತವರು ಆಕೆಯನ್ನು ದುಷ್ಕರ್ಮಿಯ ಕೈಯಿಂದ ರಕ್ಷಿಸಿದ್ದಾರೆ.

ಕೆಲವೊಂದು ಮೂಲಗಳ ಪ್ರಕಾರ ಅತ್ಯಾಚಾರಕ್ಕೊಳಾದ ಬಾಲಕಿಯ ಕತ್ತು ಸೀಳಿದ್ದು, ಆಕೆಯ ಗುಪ್ತಾಂಗಗಳನ್ನೂ ಗಾಯಗೊಳಿಸಲಾಗಿದೆ.

ತೀವ್ರ ಅಸ್ವಸ್ಥಳಾಗಿರುವ ಬಾಲಕಿಯನ್ನು ಶಹ್‌ದಾರಾದಲ್ಲಿರುವ ಸ್ವಾಮಿ ದಯಾನಂದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಬಾಲಕಿಯ ಗುಪ್ತಾಂಗಕ್ಕೆ ಹೊರಗಿನಿಂದ ಕೆಲ ವಸ್ತುಗಳನ್ನು ತಳ್ಳಲಾಗಿದೆ. ಬಾಲಕಿಯನ್ನು ಚಿಕಿತ್ಸೆಗೊಳಪಡಿಸಿದಾಗ ಆಕೆಯ ಜನನಾಂಗದೊಳಗೆ 200 ಮಿಲಿಯಷ್ಟು ಕೂದಲೆಣ್ಣೆ ಮತ್ತು ಕ್ಯಾಂಡಲ್ ತುಂಡುಗಳು ಇರುವುದು ಪತ್ತೆಯಾಗಿದೆ. 5ರ ಹರೆಯದ ಬಾಲಕಿಯ ಮೇಲೆ ಇಷ್ಟೊಂದು ತೀವ್ರವಾದ ಪೈಶಾಚಿಕ ಕೃತ್ಯ ನಡೆದಿರುವುದನ್ನು ನಾವು ಇದೇ ಮೊದಲ ಬಾರಿ ನೋಡಿದ್ದು ಎಂದು ಬಾಲಕಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಾದ ಆರ್. ಕೆ ಬನ್ಸಾಲ್ ಹೇಳಿದ್ದಾರೆ.

ಆಕೆಯ ತುಟಿ, ಕೆನ್ನೆ ಹಾಗು ಕುತ್ತಿಗೆಯಲ್ಲಿರುವ ಗಂಭೀರವಾದ ಗಾಯಗಳನ್ನು ನೋಡಿದರೆ ಆಕೆಯನ್ನು ಹತ್ಯೆಗೈಯ್ಯಲು ಯತ್ನಿಸಲಾಗಿತ್ತು ಎಂದು ತಿಳಿಯುತ್ತದೆ. ಆಕೆಯ ರಕ್ತದೊತ್ತಡವೂ ಕಡಿಮೆಯಾಗಿದ್ದು, ಆಸ್ಪತ್ರೆಗೆ ದಾಖಲಿಸುವಾಗ ಆಕೆಗೆ ಜ್ವರವಿತ್ತು.

ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಆಕೆಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಏತನ್ಮಧ್ಯೆ, ಈ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ, ಕೇಸು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ. ಮಾತ್ರವಲ್ಲದೆ ಈ ಪ್ರಕರಣದ ಬಗ್ಗೆ ಚಕಾರವೆತ್ತದಂತೆ 2000 ರು. ಗಳ ಆಮಿಷ ನೀಡಲು ಪೊಲೀಸರು ಯತ್ನಿಸಿದ್ದಾರೆ ಎಂದು ಬಾಲಕಿಯ ಅಪ್ಪ ಆರೋಪಿಸಿದ್ದಾರೆ.

ಈ ಪೈಶಾಚಿಕ ಕೃತ್ಯವನ್ನು ಖಂಡಿಸಿ ಪೂರ್ವ ದೆಹಲಿಯಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಕೆಲವು ಮಂದಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಅತ್ಯಾಚಾರವೆಸಗಿದ ದುಷ್ಕರ್ಮಿಗಾಗಿ ದೆಹಲಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಈವರೆಗೆ ಯಾರನ್ನೂ ಬಂಧಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.