ಗೌರವಯುತವಾಗಿ ಶಾಸಕರ ರಾಜಿನಾಮೆ ಸ್ವೀಕರಿಸಿ: ಬಿಎಸ್‌ವೈ

ಬೆಂಗಳೂರು: ತಮ್ಮ ಬೆಂಬಲಗ ಶಾಸಕರು, ಶಾಸಕ ಸ್ಥಾನಕ್ಕೆ ನೀಡುತ್ತಿರುವ ರಾಜಿನಾಮೆಯನ್ನು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಗೌರವಯುತವಾಗಿ ಸ್ವೀಕರಿಸಲಿ ಎಂದು ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.
ಯಡಿಯೂರಪ್ಪ ಬೆಂಬಲಿತ 13 ಶಾಸಕರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದು, ರಾಜಿನಾಮೆ ಪತ್ರವನ್ನು ಸ್ಪೀಕರ್ ಅವರಿಗೆ ಸಲ್ಲಿಸುವ ಸಂಬಂಧ ವಿಧಾನಸೌಧದಲ್ಲಿರುವ ಬೋಪಯ್ಯ ಅವರ ಕಚೇರಿಯಲ್ಲಿ ಕಾಯುತ್ತಿದ್ದಾರೆ.
ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದ ಯಡಿಯೂರಪ್ಪ, ಬಿಜೆಪಿ ಲಜ್ಜೆಗೆಟ್ಟ ಸರ್ಕಾರ. ಬಿಜೆಪಿ ಸರ್ಕಾರ ಬಹುಮತ ಕಳೆದುಕರೊಂಡಿದೆ. ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ ತಮ್ಮ ಬೆಂಬಲಿಗ ಶಾಸಕರ ರಾಜಿನಾಮೆ ಪತ್ರ ಸ್ವೀಕರಿಸಲು ಸ್ಪೀಕರ್ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಾಸಕರ ರಾಜಿನಾಮೆ ಬಗ್ಗೆ ಮೊದಲೇ ಮಾಹಿತಿ ನೀಡಲಾಗಿತ್ತು. ಹೀಗಾಗಿ ಬಿಜೆಪಿ ಸರ್ಕಾರ ಸ್ಪೀಕರ್ ಅವರನ್ನು ರಾತ್ರೋರಾತ್ರಿ ವಿದೇಶ ಪ್ರವಾಸಕ್ಕೆ ಕಳುಹಿಸಿದೆ ಎಂದು ಆರೋಪಿಸಿದ ಯಡಿಯೂರಪ್ಪ, ಅವರಿಗೆ(ಸ್ಪೀಕರ್) ಮಾನ-ಮಾರ್ಯಾದೆ ಇದ್ದರೆ ಈ ಕೂಡಲೇ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ವಾಪಸ್ ಬಂದು, ಗೌರವಯುತವಾಗಿ ರಾಜಿನಾಮೆ ಸ್ವೀಕರಿಸಲಿ ಎಂದು ಒತ್ತಾಯಿಸಿದರು.
ಸಚಿವರಾದ ಸಿ.ಎಂ ಉದಾಸಿ, ಶೋಭಾ ಕರಂದ್ಲಾಜೆ, ಹರಿಹರ ಶಾಸಕ ಬಿ.ಪಿ.ಹರೀಶ್, ಹಾವೇರಿ ಶಾಸಕ ನೇಹರು ಓಲೆಕಾರ್, ಸೊರಬ ಶಾಸಕ ಹರತಾಳು ಹಾಲಪ್ಪ, ಬಸವಕಲ್ಯಾಣ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್, ರಾಣೆಬೆನ್ನೂರ್ ಶಾಸಕ ಜಿ.ಶಿವಣ್ಣ, ಕುಂದಗೋಳ ಶಾಸಕ ಚಿಕ್ಕನಗೌಡರ್, ಚಳ್ಳಿಕೆರೆ ಶಾಸಕ ತಿಪ್ಪೇಸ್ವಾಮಿ, ಹೊಳಲ್ಕೆರೆ ಶಾಸಕ ಚಂದ್ರಪ್ಪ, ಯಲ್ಲಾಪುರ ಶಾಸಕ ವಿ.ಎಸ್ ಪಾಟೀಲ್ ಬ್ಯಾಡಗಿ ಶಾಸಕ ಸುರೇಶ್‌ಗೌಡ್ ಪಾಟೀಲ್ ಹಾಗೂ ತರೀಕೆರೆ ಶಾಸಕ ಸುರೇಶ್ ಅವರು ತಮ್ಮ ರಾಜಿನಾಮೆ ಪತ್ರದೊಂದಿಗೆ ಸ್ಪೀಕರ್ ಕಚೇರಿಯಲ್ಲಿ ಕಾಯುತ್ತಿದ್ದಾರೆ. ಸ್ಪೀಕರ್ ಅವರಿಗೆ ರಾಜಿನಾಮೆ ಸಲ್ಲಿಸಿದ ಬಳಿಕ ಈ ಎಲ್ಲ ಶಾಸಕರು ರಾಜಭವನಕ್ಕೆ ತೆರಳುವ ಸಾಧ್ಯತೆ ಇದೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


