ಈಗಿನ ಸುದ್ದಿ

ರಾಜಿನಾಮೆ ಅಂಗೀಕಾರಕ್ಕೆ ಸ್ಪೀಕರ್ ನಕಾರ

ರಾಜಿನಾಮೆ ಅಂಗೀಕಾರಕ್ಕೆ ಸ್ಪೀಕರ್ ನಕಾರ
Published On :

ಬೆಂಗಳೂರು: ಬಿಜೆಪಿ ತೊರೆದು ಕೆಜೆಪಿ ಸೇರಲು ಮುಂದಾಗಿರುವ 13 ಬಿಜೆಪಿ ಶಾಸಕರ ರಾಜಿನಾಮೆಯನ್ನು ತಕ್ಷಣವೇ ಅಂಗೀಕರಿಸುವುದಿಲ್ಲ ಎಂದು ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಹಲವು ನಾಟಕೀಯ ಬೆಳವಣಿಗೆಗಳ ಬಳಿಕ ಯಡಿಯೂರಪ್ಪ ಬೆಂಬಲಿತ 13 ಶಾಸಕರು ಇಂದು ಬೆಳಗ್ಗೆ ಸ್ಪೀಕರ್ ಬೋಪಯ್ಯ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರಗಳನ್ನು ನೀಡಿದರು.

ಶಾಸಕರ ರಾಜಿನಾಮೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೋಪಯ್ಯ, ರಾಜಿನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ, ತಕ್ಷಣಕ್ಕೆ ರಾಜಿನಾಮೆಯನ್ನು ಅಂಗೀಕರಿಸುವುದಿಲ್ಲ. ಪ್ರತಿಯೊಬ್ಬ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಈ ಮೂಲಕ ತಮ್ಮ ಬೆಂಬಲಿಗ ಶಾಸಕರಿಂದ ರಾಜಿನಾಮೆ ಕೊಡಿಸಿ ಸರ್ಕಾರ ಉರುಳಿಸಬೇಕು ಎಂಬ ಹಠಕ್ಕೆ ಬಿದ್ದಿರುವ ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಭಾರಿ ಹಿನ್ನೆಡೆಯಾಗಿದೆ.

ರಾಜಿನಾಮೆ ನೀಡಲು ಮುಂದಾಗಿರುವ 12 ಶಾಸಕರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅನರ್ಹಗೊಳಿಸಬೇಕು ಎಂದು ಕೋರಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಎಂ.ವಿ.ನಾಗರಾಜ್ ಅವರು ನಿನ್ನೆ ವಿಧಾಸಭೆ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರು.

ಜ.23ರಂದು 13 ಶಾಸಕರು ರಾಜಿನಾಮೆ ನೀಡಲು ವಿಧಾನಸೌಧಕ್ಕೆ ಆಗಮಿಸಿದ್ದರಾದರೂ ಸ್ಪೀಕರ್ ಇಲ್ಲದ ಕಾರಣ ವಾಪಸಾಗಿದ್ದರು. ಇವರೊಂದಿಗೆ ತಾವು ಕೂಡ ರಾಜಿನಾಮೆ ನೀಡುವುದಾಗಿ ಮಾಜಿ ಸಚಿವರೂ ಆಗಿರುವ ಸುನೀಲ್ ವಲ್ಯಾಪುರೆ ಅವರು ಹೇಳಿದ್ದರಿಂದ ರಾಜಿನಾಮೆ ನೀಡುವ ಶಾಸಕರ ಸಂಖ್ಯೆ 14ಕ್ಕೆ ತಲುಪಿತ್ತು.ಆದರೆ, ರಾಜಿನಾಮೆ ನೀಡಲು ಮುಂದಾಗಿರುವ 12 ಶಾಸಕರನ್ನು ಅನರ್ಹಗೊಳಿಸುವಂತೆ ವಿಧಾನಸಭೆ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನಲ್ಲಿ 14 ಮಂದಿಯ ಪೈಕಿ ಚಳ್ಳಕೆರೆ ಶಾಸಕ ತಿಪ್ಪೇಸ್ವಾಮಿ ಮತ್ತು ನಾಗಠಾಣಾ ಶಾಸಕ ವಿಠಲ ಕಟಕದೊಂಡ ಅವರ ಹೆಸರನ್ನು ದೂರುದಾರರು ಕೈಬಿಟ್ಟಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.