ಕೊಳವೆ ಬಾವಿ ದುರಂತ: ಕಾರ್ಯಾಚರಣೆ ಸ್ಥಗಿತಕ್ಕೆ ಬಾಲಕನ ತಂದೆ ಆಗ್ರಹ

ಬಾಗಲಕೋಟೆ: 'ತಿಮ್ಮಣ್ಣ ಬದುಕಿ ಬಾ' ಎಂದು ಇಡೀ ರಾಜ್ಯದ ಜನತೆ ಪ್ರಾರ್ಥನೆ ಮಾಡುತ್ತಿದೆ. ಆದರೆ ಆತನ ತಂದೆ ಹನುಮಂತ ಹಟ್ಟಿ ಮಾತ್ರ ಕೊಳವೆ ಬಾವಿಗೆ ಬಿದ್ದ ತನ್ನ ಮಗನ ರಕ್ಷಣೆಗಾಗಿ ನಡೆಯುತ್ತಿರುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾನೆ.
ನನ್ನ ಮಗು ಕೊಳವೆ ಬಾವಿಗೆ ಬಿದ್ದು 43 ಗಂಟೆ ಆಯಿತು. ಈ ಹಂತದಲ್ಲಿ ಮಗು ಬದುಕಿದೆ ಅಂತ ನನಗೆ ಗ್ಯಾರಂಟಿ ಇಲ್ಲ. ಹೀಗಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿ, ಕಾರ್ಯಾಚರಣೆಯಿಂದ ನನ್ನ ಹೊಲ ಹಾಳಾಗುವುದನ್ನು ತಡೆಯಿರಿ ಎಂದು ಹನುಮಂತ ಒತ್ತಾಯಿಸಿದ್ದಾರೆ.
ಬೋರ್ವೆಲ್ ಕೊರೆಸಲು ನಾನು 12 ಲಕ್ಷ ರುಪಾಯಿ ಸಾಲ ಮಾಡಿದ್ದೇನೆ. ಈಗ ನನ್ನ ಮಗ ಸಹ ಬದುಕಿಲ್ಲ. ಜೊತೆಗೆ ನಾನು ಬೆಳೆದಿದ್ದ ಬೆಳೆಯೂ ರಕ್ಷಣಾ ಕಾರ್ಯಾಚರಣೆಯಿಂದ ಹಾಳಾಗುತ್ತಿದೆ. ಆದ್ದರಿಂದ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಹನುಮಂತ ಹಟ್ಟಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
"ಹೊಲದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯಿಂದಾಗಿ ನನ್ನ ಹೊಲ ಹಾಳಾಗಿದೆ. ನನಗೆ ಇನ್ನು ಎರಡು ಹೆಣ್ಣು ಮಕ್ಕಳಿದ್ದು ಅವರ ಭವಿಷ್ಯಕ್ಕಾಗಿ ಕಾರ್ಯಾಚರಣೆಯನ್ನು ನಿಲ್ಲಿಸಿ" ಎಂದು ತಿಮ್ಮಣ್ಣನ ತಂದೆ ಮನವಿ ಮಾಡಿದ್ದಾರೆ. "ಮಗ ಜೀವಂತವಾಗಿ ನಮ್ಮ ಕೈಗೆ ಸಿಗುವುದಿಲ್ಲ. ಈಗ ಮಗನನ್ನು ಉಳಿಸಲು ನಡೆಯುತ್ತಿರುವ ಕೆಲಸದಿಂದ ಹೊಲದಲ್ಲಿ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಇದನ್ನು ಮುಚ್ಚಲು ನಾನು ಪುನಃ ಸಾಲ ಮಾಡಬೇಕು" ಎಂದು ಹನುಮಂತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್, ನಾವು ಕಾರ್ಯಾಚರಣೆಯನ್ನು ನಿಲ್ಲಿಸುವುದಿಲ್ಲ. ಮಗುವನ್ನು ಜೀವಂತವಾಗಿ ತೆಗೆಯಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಗುವಿನ ಮೇಲೆ ಬಿದ್ದಿರುವ ಮಣ್ಣು ತೆಗೆಯಲು ವ್ಯಾಕ್ಯೂಮ್ ಕ್ಲೀನರ್ ತರಿಸಲಾಗಿದೆ. ಅಲ್ಲದೆ ತಮಿಳುನಾಡಿನಿಂದ ರೋಬೋಟ್ ತಜ್ಞ ಮಣಿಕಂಠನ್ ಅವರನ್ನು ಕರೆಸಲಾಗುತ್ತಿದೆ. ಮಗುವನ್ನು ಜೀವಂತವಾಗಿ ತೆಗೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


