ರಮೇಶ್ ಕುಮಾರ್ ಚುನಾವಣೆಗೆ ಖರ್ಚು ಮಾಡಿದ್ದು ಎಷ್ಟು ಕೋಟಿ?

ಬೆಂಗಳೂರು: ಮೇಲ್ಮನೆ ಸದಸ್ಯನಾಗಲು ಕೋಟಿ ಕೋಟಿ ಹಣ ಕೊಡಬೇಕು ಎಂಬ ಸಂಗತಿ ಬಹಿರಂಗಗೊಂಡ ಬೆನ್ನಲ್ಲೇ ಈಗ ಶಾಸಕನಾಗಲೂ ಕೋಟಿ ಕೋಟಿ ಖರ್ಚು ಮಾಡಬೇಕು ಎಂಬ ಸಂಗತಿಯನ್ನು ಸ್ವತಃ ಕೋಲಾರ ಜಿಲ್ಲೆ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು ಸೋಮವಾರ ವಿಧಾಸಭೆಯಲ್ಲೇ ಬಹಿರಂಗಪಡಿಸಿದ್ದಾರೆ.
ಮುಂಗಾರು ಅಧಿವೇಶನದ 16ನೇ ದಿನವಾದ ಇಂದು ವಿಧಾಸಭೆಯಲ್ಲಿ ಬಗೆ-ಬಗೆಯ ಭ್ರಷ್ಟಾಚಾರದ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ರಮೇಶ್ ಕುಮಾರ್, ಇಂದು ರಾಜಕಾರಣ ವ್ಯಾಪಾರವಾಗಿಬಿಟ್ಟಿದೆ. ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾಗ ಕೇವಲ 35 ಸಾವಿರ ರುಪಾಯಿ ಖರ್ಚು ಮಾಡಿದ್ದೆ. ಆದರೆ ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 3.5ಕೋಟಿ ಖರ್ಚು ಮಾಡಿ ಗೆದ್ದು ಬಂದೆ ಎಂದು ಹೇಳಿದರು.
ರಮೇಶ್ ಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ನೀವು ಚುನಾವಣೆಯಲ್ಲಿ ನಿಗದಿಗಿಂತ ಹೆಚ್ಚು ಖರ್ಚು ಮಾಡಿರುವುದರಿಂದ ನಿಮ್ಮನ್ನು ಚುನಾವಣಾ ಆಯೋಗಕ್ಕೆ ಹಿಡಿದು ಕೊಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಉತ್ತರಿಸಿದ ರಮೇಶ್ ಕುಮಾರ್, ಪರವಾಗಿಲ್ಲ ಹಿಡಿದುಕೊಡಿ, ಚುನಾವಣಾ ಆಯೋಗ ನನ್ನ ಸದಸ್ಯತ್ವವನ್ನು ಅನರ್ಹಗೊಳಿಸಲಿ. ನನಗೂ ಅದೇ ಬೇಕಾಗಿದೆ. ಆದರೆ ಆ ರೀತಿ ಹೋಗುವುದಾದರೆ ನಾನೊಬ್ಬನೇ ಹೋಗಲ್ಲ. ಇಡೀ ಸದನವನ್ನೇ ಎಳೆದುಕೊಂಡು ಹೋಗುತ್ತೇನೆ ಎಂದು ಹೇಳುವ ಮೂಲಕ ಎಲ್ಲರೂ ನನಗಿಂತ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಪರೋಕ್ಷವಾಗಿ ಹೇಳಿದರು.
ಈ ವೇಳೆ ಮಾತನಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು, ಲಂಚದ ಹಾವಳಿ ಇನ್ನೂ ನಿಂತಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


