ದೆಹಲಿಯಲ್ಲಿ ಸರ್ಕಾರ ರಚಿಸಲು ಬಿಜೆಪಿ-ಉಪ ರಾಜ್ಯಪಾಲರ ನಡುವೆ ಡೀಲ್: ಎಎಪಿ

ನವದೆಹಲಿ: ಚುನಾವಣೆ ಎದುರಿಸಲು ಒಲ್ಲದ ಕಾಂಗ್ರೆಸ್ ಶಾಸಕರ ಬೆಂಬಲ ಪಡೆದು ದೆಹಲಿಯಲ್ಲಿ ಸರ್ಕಾರ ರಚಿಸಲು ಮುಂದಾಗಿರುವ ಬಿಜೆಪಿಗೆ ದೆಹಲಿ ಉಪ ರಾಜ್ಯಪಾಲ ನಜೀಬ್ ಜಂಗ್ ಅವರು ಪಕ್ಷಪಾತಿಯಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ.
ದೆಹಲಿಯಲ್ಲಿ ನೂತನ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಮತ್ತು ಈ ಕೂಡಲೇ ದೆಹಲಿ ವಿಧಾಸಭೆಯನ್ನು ವಿಸರ್ಜಿಸಬೇಕು ಎಂದು ಎಎಪಿ ವಕ್ತಾರ ಆಶುತೋಷ್ ಅವರು ಒತ್ತಾಯಿಸಿದ್ದಾರೆ. ಅಲ್ಲದೆ ಬಿಜೆಪಿಗೆ ನೈತಿಕತೆ ಎಲ್ಲಿದೆ? ಸರ್ಕಾರ ರಚನೆ ಸಂಬಂಧ ಬಿಜೆಪಿ ಮತ್ತು ಉಪ ರಾಜ್ಯಪಾಲರ ನಡುವೆ ಒಪ್ಪಂದ ನಡೆದಿದೆ ಎಂದು ಆರೋಪಿಸಿದ್ದಾರೆ.
ಇದಕ್ಕು ಮುಂಚೆ ಟ್ವಿಟ್ ಮಾಡಿದ್ದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು, ಬಿಜೆಪಿ ಶಾಸಕರ ಕುದುರೆ ವ್ಯಾಪಾರ ನಡೆಸುತ್ತಿದ್ದು, ಬಹಮತ ಇಲ್ಲದ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡುವ ಮೂಲಕ ಉಪ ರಾಜ್ಯಪಾಲರು ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಈ ಮಧ್ಯೆ ಎಎಪಿ ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ನಮ್ಮ ಪಕ್ಷ ಕುದುರೆ ವ್ಯಾಪಾರ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಎಎಪಿ ಆರೋಪದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಂಗ್, ನಮ್ಮ ಪಕ್ಷ ಯಾವತ್ತೂ ಕುದುರೆ ವ್ಯಾಪಾರ ಮಾಡಿಲ್ಲ ಮತ್ತು ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದಾರೆ.
48 ದಿನಗಳ ರಾಜ್ಯಭಾರದ ಬಳಿಕ ಆಪ್ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಶಸ್ತ್ರತ್ಯಾಗ ಮಾಡಿದ್ದರಿಂದ ದೆಹಲಿಯಲ್ಲಿ ಫೆ.17ರಿಂದ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಲೆಫ್ಟಿನೆಂಟ್ ಗವರ್ನರ್ ಸದ್ಯದ ರಾಜಕೀಯ ಸ್ಥಿತಿ ಕುರಿತು ಕೇಂದ್ರಕ್ಕೆ ವರದಿ ಕಳುಹಿಸಬೇಕು. ಇನ್ನಾರು ತಿಂಗಳು ರಾಷ್ಟ್ರಪತಿ ಆಡಳಿತ ವಿಸ್ತರಣೆ ಅಥವಾ ಸರ್ಕಾರ ರಚನೆ ಕುರಿತು ಕೇಂದ್ರ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲಿದೆ.
70 ಸದಸ್ಯ ಬಲದ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ 31 ಮತ್ತು ಮಿತ್ರಪಕ್ಷ ಅಕಾಲಿದಳ ಒಬ್ಬ ಶಾಸಕರನ್ನು ಹೊಂದಿತ್ತು. ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸೇರಿದಂತೆ ಮೂವರು ಸಂಸದರಾಗಿ ಆಯ್ಕೆಯಾದ್ದರಿಂದ ವಿಧಾನಸಭೆ ಬಲ 67ಕ್ಕೂ, ಬಿಜೆಪಿ ಮೈತ್ರಿಕೂಟದ ಸಂಖ್ಯಾಬಲ 29ಕ್ಕೂ ಕುಸಿದಿದೆ. ಸರ್ಕಾರ ರಚನೆಗೆ ಪಕ್ಷಕ್ಕೆ ಇನ್ನೂ ಐವರು ಶಾಸಕರ ಬೆಂಬಲ ಅಗತ್ಯವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


