ಈಗಿನ ಸುದ್ದಿ

ಮಲೇಷ್ಯಾ ವಿಮಾನ ದಾಳಿಯ ಸಾಕ್ಷ್ಯ ನಾಶಕ್ಕೆ ರಷ್ಯಾ ಸಹಕಾರ: ಉಕ್ರೇನ್

ಮಲೇಷ್ಯಾ ವಿಮಾನ ದಾಳಿಯ ಸಾಕ್ಷ್ಯ ನಾಶಕ್ಕೆ ರಷ್ಯಾ ಸಹಕಾರ: ಉಕ್ರೇನ್
Published On :

ಕೀವ್: ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷಕ್ಕೆ ಮಲೇಷ್ಯಾ ವಿಮಾನ ಬಲಿಯಾಗಿದ್ದು, ಈಗ ಪರಸ್ಪರ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.

ಕ್ಷಿಪಣಿ ಮೂಲಕ ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ಎಂಎಚ್ 17 ವಿಮಾನವನ್ನು ಹೊಡೆದು ಉರುಳಿಸಿದ ಉಗ್ರರಿಗೆ ರಷ್ಯಾ ಬೆಂಬಲ ನೀಡುತ್ತಿದೆ ಎಂದು ಉಕ್ರೇನ್ ಶನಿವಾರ ಆರೋಪಿಸಿದೆ. ಅಲ್ಲದೆ ವಿಮಾನ ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಲು ಉಗ್ರರಿಗೆ ರಷ್ಯಾ ಸಹಕಾರ ನೀಡುತ್ತಿದೆ ಎಂದು ದೂರಿದೆ.

ಈ ಬಗ್ಗೆ ಉಕ್ರೇನ್ ಸರ್ಕಾರ ಅಧಿಕೃತ ಪ್ರಕಟಣೆ ನೀಡಿದ್ದು, ರಷ್ಯಾ ಸಹಕಾರದೊಂದಿಗೆ ಉಗ್ರರು ಸಾಕ್ಷ್ಯಗಳನ್ನು ನಾಶಪಡಿಸುತ್ತಿದ್ದಾರೆ ಮತ್ತು ಘಟನೆ ನಡೆದ ಸ್ಥಳದಿಂದ 38 ಮೃತದೇಹಗಳನ್ನು ಸಾಗಿಸಿದ್ದಾರೆ. ಅಲ್ಲದೆ ಘಟನಾ ಸ್ಥಳಕ್ಕೆ ಉಕ್ರೇನಿಯನ್ ತನಿಖಾ ಅಧಿಕಾರಿಗಳಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ತಿಳಿಸಲಾಗಿದೆ.

ಗುರುವಾರ ಆ್ಯಮ್‌ಸ್ಟರ್‌ಡ್ಯಾಂನಿಂದ ಮಲೇಷ್ಯಾದ ರಾಜಧಾನಿ ಕೌಲಾಲಂಪುರಕ್ಕೆ ಹೊರಟಿದ್ದ ವಿಮಾನವು ರಷ್ಯಾ ಗಡಿ ಸಮೀಪದ ಪೂರ್ವ ಉಕ್ರೇನ್‌ನಲ್ಲಿ ಪತನಗೊಂಡಿದ್ದು, ಈ ದುರಂತಕ್ಕೆ ಕಾರಣ ಯಾರು ಎಂಬುದೇ ಈಗ ಯಕ್ಷಪ್ರಶ್ನೆಯಾಗಿ ಉಳಿದಿದೆ.  ಸೋವಿಯತ್ ನಿರ್ಮಿತ ಬಕ್ ಕ್ಷಿಪಣಿ ಉಡಾವಣೆ ವಾಹನದ ಮೂಲಕ ಹಾರಿಸಿದ ಕ್ಷಿಪಣಿಯಿಂದ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಲಾಗುತ್ತಿದೆ.

ರಷ್ಯಾ ಮತ್ತು ಉಕ್ರೇನ್ ಪರಸ್ಪರರ ಮೇಲೆ ಆರೋಪ ಹೊರಿಸುತ್ತಿವೆ. 33 ಸಾವಿರ ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದ ವಿಮಾನವನ್ನು ಹೊಡೆದುರುಳಿಸುವಂತಹ ಸಾಮರ್ಥ್ಯ ಸಾಮಾನ್ಯ ಉಗ್ರ ಸಂಘಟನೆಗಳಿಗಿಲ್ಲ. ಹಾಗಾಗಿ ಇದರ ಹಿಂದೆ ಯಾವುದಾದರೂ ರಾಷ್ಟ್ರದ ಸೇನಾ ಪಡೆಯ ಕೈವಾಡವಿರಬಹುದು ಎನ್ನುವುದು ತಜ್ಞರ ಅಭಿಪ್ರಾಯ. ರಷ್ಯಾ ಮತ್ತು ಉಕ್ರೇನ್ ನಡುವೆ ಕ್ರಿಮಿಯಾ ಪ್ರದೇಶಕ್ಕೆ ಸಂಬಂಧಿಸಿ ಬಿಕ್ಕಟ್ಟಿದ್ದರೂ ಮಲೇಷ್ಯಾ ವಿಮಾನವನ್ನು ಹೊಡೆದುರುಳಿಸಲು ಕಾರಣವೇನು? ಅವರ ಗುರಿ ಬೇರೆ ಯಾವುದಾದರೂ ವಿಮಾನ ಆಗಿತ್ತಾ ಎಂಬ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.

ಏನಿದು ಉಕ್ರೇನ್ ಬಿಕ್ಕಟ್ಟು?
ಉಕ್ರೇನಿನ ದಕ್ಷಿಣ ಭಾಗದಲ್ಲಿನ ಕ್ರಿಮಾ ಪ್ರದೇಶದ ಒಂದು ಭಾಗ ಐರೋಪ್ಯ ಒಕ್ಕೂಟಕ್ಕೆ ಸೇರಬೇಕು, ಮತ್ತೊಂದು ಪ್ರದೇಶ ರಷ್ಯ ಜತೆಯೇ ಇರಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ.  ಅಲ್ಲಿನ ಸರ್ಕಾರಕ್ಕೆ ರಷ್ಯಾದ ನಿರ್ಧಾರ ಕೋಪ ತಂದಿದೆ. ಈ ಭಾಗದಲ್ಲಿ ಉಂಟಾಗಿರುವ ಹೋರಾಟಕ್ಕೆ ರಷ್ಯಾ ಸೇನೆಯೇ ಶಸ್ತ್ರಾಸ್ತ್ರ ಪೂರೈಸುತ್ತಿದೆ ಎಂದು ಆರೋಪಿಸುತ್ತಿದೆ. ರಷ್ಯಾ ಬೆಂಬಲಿತ ಉಗ್ರರು ಇತ್ತೀಚಿನ ದಿನಗಳಲ್ಲಿ ಉಕ್ರೇನ್‌ನ ಹಲವು ವಿಮಾನಗಳನ್ನು ಹೊಡೆದು ಹಾಕಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.