ಅರ್ಕಾವತಿ ಡಿನೋಟಿಫಿಕೇಶನ್ ಹಗರಣ: ನ್ಯಾಯಾಂಗ ತನಿಖೆಗೆ ಸರ್ಕಾರ ನಿರ್ಧಾರ

ಬೆಂಗಳೂರು: ಅರ್ಕಾವತಿ ಬಡಾವಣೆಯ 541 ಎಕರೆ ಡಿನೋಟಿಫಿಕೇಶನ್ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದರೆ ಇದಕ್ಕೆ ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಪಟ್ಟು ಹಿಡಿದಿದೆ.
ತನ್ನ ಪಟ್ಟು ಸಡಿಲಿಸಿದ ಬಿಜೆಪಿ, ಇಂದು ಸಹ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಅರ್ಕಾವತಿ ಡಿನೋಟಿಫಿಕೇಶನ್ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿ ಸದನದ ಬಾವಿಗಿಳಿದು ಧರಣಿ ನಡೆಸುತ್ತಿದೆ.
ಪ್ರತಿಪಕ್ಷಗಳ ಗದ್ದಲದ ನಡುವೆಯೂ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದು, ನ್ಯಾಯಾಂಗ ತನಿಖೆಗೆಯಿಂದ ನಿಮ್ಮ ಲೂಟಿ ಬಹಿರಂಗವಾಗಲಿದೆ ಎಂದು ಪ್ರತಿಪಕ್ಷಗಳ ವಿರುದ್ಧ ಗುಡುಗಿದ್ದಾರೆ.
ಆಗಿದ್ದೇನು? ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ 20-6-2014ರಂದು ನ್ಯಾಯಾಲಯಕ್ಕೆ ರಾಜ್ಯಪತ್ರ ಸಲ್ಲಿಸಿ ಅರ್ಕಾವತಿ ಬಡಾವಣೆಯ 541 ಎಕರೆಯನ್ನು ಡಿನೋಟಿಫೈ ಮಾಡಿದ್ದಾರೆ ಎಂದು ಆರೋಪಿಸಿ ಜಗದೀಶ್ ಶೆಟ್ಟರ್ ಕಳೆದ ಶುಕ್ರವಾರ ನಿಲುವಳಿ ಸೂಚನೆ ಮಂಡಿಸಿದ್ದರು. ಆದರೆ ನಿಯಮ 69ರ ಅನ್ವಯ ಚರ್ಚೆಗೆ ಸ್ಪೀಕರ್ ಅನುಮತಿ ನೀಡಿದ್ದರು. ಶೆಟ್ಟರ್ ಪ್ರಸ್ತಾಪಕ್ಕೆ ಉತ್ತರ ನೀಡುವ ಸಂದರ್ಭದಲ್ಲಿ ಸಿಎಂ 2003ರಿಂದ ಇಲ್ಲಿಯವರೆಗೆ ನಡೆದ ಅರ್ಕಾವತಿ ಡಿನೋಟಿಫಿಕೇಶನ್ನ ಸಂಪೂರ್ಣ ವಿವರ ನೀಡಿದರು.
'ನಾನು ಅಧಿಕಾರಕ್ಕೆ ಬಂದ ನಂತರ ಒಂದು ಗುಂಟೆ ಜಾಗವನ್ನೂ ಡಿನೋಟಿಫೈ ಮಾಡಿಲ್ಲ. ಮಾಡುವುದೂ ಇಲ್ಲ.' ಎಂದು ಮಾತಿಗಾರಂಭಿಸಿದ ಸಿಎಂ, 'ಶೆಟ್ಟರ್ ಕಾಲದಲ್ಲಿ ಭೂಸ್ವಾಧೀನ ಅಧಿಕಾರಿಗಳ ವರದಿ ಆಧರಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ ಕೋರ್ಟ್ ಆದೇಶದ ಪ್ರಕಾರ ರಾಜ್ಯಪತ್ರ ಹೊರಡಿಸಿ ಅರ್ಕಾವತಿ ಬಡಾವಣೆಗೆ ಮರು ಯೋಜನೆ ಸಲ್ಲಿಸಿದ್ದೇವೆ. ಇದರಿಂದ 1766 ಎಕರೆ ಜಾಗದಲ್ಲಿ 11 ಸಾವಿರ ಜನರಿಗೆ ನಿವೇಶನ ಒದಗಿಸಲು ಸಾಧ್ಯ. ನಾವು ಮಾಡಿದ ರಿ ಮಾಡಿಫಿಕೇಶನ್ನಲ್ಲಿ ಅಕ್ರಮ ಆಗಿಲ್ಲ. ಕೋರ್ಟ್ ರೂಪಿಸಿದ 6 ಮಾರ್ಗಸೂಚಿಗೆ ವಿರುದ್ಧ ಡಿನೋಟಿಫಿಕೇಶನ್ ನಡೆದಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ' ಎಂದರು.
ತಮ್ಮ ಉತ್ತರದ ಸಂದರ್ಭದಲ್ಲಿ 2003ರಲ್ಲಿ ಪ್ರಾಥಮಿಕ ಅಧಿಸೂಚನೆ ಆದ ನಂತರ 3839 ಎಕರೆ ಪೈಕಿ ಬಿಡಿಎ ಮತ್ತು ಅಂದಿನ ಸರ್ಕಾರ 1089.12 ಎಕರೆ ಡಿನೋಟಿಫೈ ಮಾಡಿತ್ತು. ನ್ಯಾಯಾಲಯದ ಸೂಚನೆ ಮೇರೆಗೆ 80. 8 ಎಕರೆ ಡಿನೋಟಿಫೈ ಮಾಡಲಾಗಿತ್ತು. 2006ರಲ್ಲಿ 140 ಎಕರೆ ಡಿನೋಟಿಫಿಕೇಶನ್ ಆಗಿತ್ತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಡಿಎ ಹಾಗೂ ಸಕ್ಷಮ ಪ್ರಾಧಿಕಾರಗಳ ಶಿಫಾರಸು ಇಲ್ಲದೇ 198.20 ಎಕರೆ ಡಿನೋಟಿಫಿಕೇಶನ್ ಆಗಿತ್ತು ಎಂದರು.
ಯಡಿಯೂರಪ್ಪ ಕಾಲದಲ್ಲಿ ಆದ ಡಿನೋಟಿಫಿಕೇಶನ್ ಪ್ರಕರಣವನ್ನು ಮತ್ತೆ ಮತ್ತೆ ಪ್ರಸ್ತಾಪಿಸಿದ ಅವರು ಇದಕ್ಕೆ ನೀವೇ ಹೊಣೆ ಎಂದು ಬಿಜೆಪಿಯವರನ್ನು ಛೇಡಿಸಿದರು.
ಶೆಟ್ಟರ್ ಕೋಪ: ಇದು ಶೆಟ್ಟರ್ ಕೋಪಕ್ಕೆ ಕಾರಣವಾಯ್ತು. 'ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಪ್ರಸ್ತಾಪ ಬಂದಿದ್ದು ನಿಜ. ಆದರೆ ಕಾನೂನು ಬಾಹಿರವಾಗಿದೆ ಎಂದು ನಾನು ಮಾಡಿರಲಿಲ್ಲ. ಇವರು ಮುಖ್ಯಮಂತ್ರಿಯಾದ ನಂತರ ನ್ಯಾಯಾಲಯ ಆದೇಶದ ನೆಪ ಮಾಡಿಕೊಂಡು ಡಿನೋಟಿಫಿಕೇಶನ್ನ್ನು ರಿ ಮಾಡಿಫಿಕೇಶನ್ ಹೆಸರಿನಲ್ಲಿ ನಡೆಸಿದ್ದಾರೆ' ಎಂದು ಆರೋಪಿಸಿದರು. ಇದಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ, ಸುರೇಶ್ಕುಮಾರ್, ಕೆ.ಜಿ.ಬೋಪಯ್ಯ, ಡಾ.ಅಶ್ವತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್ ಧ್ವನಿಗೂಡಿಸಿದರು. 'ಸಿಎಂ ಸದನವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಫಂಡ್ಗೆ ಈ ಅಕ್ರಮ ಎಸಗಿದ್ದಾರೆ. ಹಗರಣ ಬಯಲಾಗಲು ಸಿಬಿಐ ತನಿಖೆ ನಡೆಸಬೇಕು' ಎಂದು ಆಗ್ರಹಿಸಿ ಸ್ಪೀಕರ್ ಮುಂದಿನ ಆವರಣದಲ್ಲಿ ಬಿಜೆಪಿ ಸದಸ್ಯರು ಪ್ರತಿಭಟಿಸಿದ್ದರು. ಶನಿವಾರವೂ ಸಹ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದೂವರೆಸಿದ್ದರಿಂದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪವನ್ನು ಇಂದಿಗೆ ಮುಂದೂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


