ಅಕ್ರಮ ಭೂ ಹಂಚಿಕೆ: ಜಗದೀಶ್ ಶೆಟ್ಟರ್ ವಿರುದ್ಧ ಎಫ್ಐಆರ್

ಬೆಂಗಳೂರು: ಅಕ್ರಮ ಭೂ ಹಂಚಿಕೆ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಬಿಎಂಟಿಎಫ್ ಗುರುವಾರ ಎಫ್ಐಆರ್ ದಾಖಲಿಸಿದೆ.
ಶ್ರೀಗಂಧದ ಕಾವಲ್ ಬಳಿ 4 ಎಕರೆ ಕೃಷಿ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದ ಆರೋಪದ ಮೇಲೆ ಜಗದೀಶ್ ಶೆಟ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅಕ್ರಮ ಭೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಬಿಎಂಟಿಎಫ್ ಇಂದು ಎಫ್ಐಆರ್ ದಾಖಲಿಸಿದೆ. ಎಫ್ಐಆರ್ನಲ್ಲಿ ಜಗದೀಶ್ ಶೆಟ್ಟರ್ ಮೊದಲ ಆರೋಪಿಯಾಗಿದ್ದು, ಎರಡನೇ ಆರೋಪಿಯಾಗಿ ಸುಂದರೇಶ್ ಹಾಗೂ ಮೂರನೇ ಆರೋಪಿಯಾನ್ನಾಗಿ ಅಂದಿನ ಜಿಲ್ಲಾಧಿಕಾರಿ ಪ್ರಕಾಶ್ ಅವರನ್ನು ಮಾಡಿದೆ.
ಪ್ರಕರಣದ ಹಿನ್ನಲೆ:
ಸ್ವಾತಂತ್ರ್ಯ ಹೋರಾಟಗಾರರಿಗೆ ಕೃಷಿ ಭೂಮಿ ನೀಡುವ ನೆಪದಲ್ಲಿ ಕೋಟ್ಯಂತರ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ರಾಜ್ಯ ಒಕ್ಕಲಿಗರ ಸಂಘ ಆರೋಪ ಮಾಡಿತ್ತು. ಕೃಷಿ ಉದ್ದೇಶಕ್ಕೆ ಜಮೀನು ನೀಡುವ ನೆಪದಲ್ಲಿ ನಗರದ ಕೇಂದ್ರ ಭಾಗದಲ್ಲಿ ಜಮೀನು ಹಂಚಿಕೆ ಮಾಡಿ. ಸಮಗ್ರ ನಗರ ಯೋಜನೆಯನ್ನೇ ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು.
ಸೂರ್ಯನಾರಾಯಣ ರಾವ್ ಎಂಬ ಸ್ವಾತಂತ್ರ್ಯ ಹೋರಾಟಗಾರರಿಗೆ ನೆರವು ನೀಡಬೇಕೆಂದು ಕೆಲ ದಶಕಗಳ ಹಿಂದೆ ಅಂದಿನ ರಾಜ್ಯ ಸರ್ಕಾರ 4 ಎಕರೆ ಕೃಷಿ ಜಮೀನು ನೀಡಲು ನಿರ್ಧರಿಸಿತ್ತು. ಅದರಂತೆ 16-3-1967ರಲ್ಲಿ ಕಂದಾಯ ಇಲಾಖೆ ಬೆಂಗಳೂರಿನಲ್ಲಿ 4 ಎಕರೆ ಜಮೀನನ್ನು ನೇರವಾಗಿ ಮಂಜೂರು ಮಾಡಿತು. ಆದರೆ, ಕಂದಾಯ ಇಲಾಖೆ ನೇರವಾಗಿ ಫಲಾನುಭವಿಗೆ ಸರ್ಕಾರಿ ಜಮೀನು ನೀಡುವುದು ತಪ್ಪು. ಅದು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಮೂಲಕ ಹಂಚಿಕೆಯಾಗಬೇಕೆಂದು ಸರ್ಕಾರಕ್ಕೆ ತಕ್ಷಣ ತಿಳಿಯಿತು. ಹೀಗಾಗಿ ಸೂರ್ಯನಾರಾಯಣ ರಾವ್ ಅವರಿಗೆ ನೀಡಿದ್ದ ಜಮೀನನ್ನು ತಕ್ಷಣವೇ ವಾಪಸ್ ಪಡೆದಿತ್ತು.
10 ವರ್ಷಗಳೇ ಕಳೆದರೂ ಜಮೀನು ಸಿಗದಿದ್ದರಿಂದ ಸೂರ್ಯನಾರಾಯಣ ರಾವ್ ಹೈಕೋರ್ಟ್ ಮೆಟ್ಟಿಲೇರಿದರು. ಅದು ವಿಚಾರಣೆ ನಡೆದು ತೀರ್ಪು ಬರುವಷ್ಟರಲ್ಲಿ ಸೂರ್ಯನಾರಾಯಣ ರಾವ್ (1989)ತೀರಿಕೊಂಡರು. ಆದರೆ 2010ರಲ್ಲಿ ಈ ಬಗ್ಗೆ ಅಂತಿಮ ತೀರ್ಪು ನೀಡಿದ ಕೋರ್ಟ್, ಸೂರ್ಯನಾರಾಯಣ ರಾವ್ ಅವರಿಗೆ ಎಲ್ಲಾದರೂ ಜಮೀನು ನೀಡಬೇಕೆಂದು ಸೂಚಿಸಿತು. ನಂತರ ಸೂರ್ಯನಾರಾಯಣ ರಾವ್ ಪುತ್ರ ಸುಂದರೇಶ್ ಕಾನೂನು ಹೋರಾಟ ಮುಂದುವರಿಸಿದರು. ಆಗ ಕಂದಾಯ ಇಲಾಖೆ ಜಮೀನು ನೀಡುವುದಾಗಿ ಒಪ್ಪಿಕೊಂಡಿತ್ತು. ಆದರೆ ನೀಡಿದ್ದು ಕೃಷಿ ಜಮೀನಲ್ಲ. ಪರಿವರ್ತನೆಯಾದ ಬೆಲೆ ಬಾಳುವ ಜಮೀನು. ಅದೂ ಶ್ರೀಗಂಧ ಕಾವಲ್ನಲ್ಲಿ ನೀಡಿತ್ತು.
ಸರ್ಕಾರದ ಜಮೀನು ಹಂಚಿಕೆ ಮಾಡಿರುವುದು ಕಾನೂನು ಮತ್ತು ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ. ಹೇಗೆಂದರೆ, ಸರ್ಕಾರ ಸಾಗುವಳಿಗಾಗಿ ಕೃಷಿ ಭೂಮಿ ನೀಡುವಾಗ ರಾಜ್ಯ ಲ್ಯಾಂಡ್ ಗ್ರ್ಯಾಂಟ್ ಆ್ಯಕ್ಟ್ ಪ್ರಕಾರ, ಬಿಬಿಎಂಪಿ ಗಡಿಯಿಂದ 16 ಕಿ.ಮೀ. ದೂರದಲ್ಲಿ ನೀಡಬೇಕು. ಆದರೆ ಶೆಟ್ಟರ್ ಸರ್ಕಾರ ವಿಧಾನಸೌಧಕ್ಕೆ 12 ಕಿ.ಮೀ. ದೂರದ ಶ್ರೀಗಂಧ ಕಾವಲ್ನಲ್ಲಿ ಜಮೀನು ನೀಡಿದೆ. ಹೀಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜಮೀನು ನೀಡುವ ನೆಪದಲ್ಲಿ ಅವರ ಪುತ್ರ ಸುಂದರೇಶ್ಗೆ ಜಮೀನು ಮಂಜೂರು ಮಾಡಲಾಗಿದೆ. ಇದರಿಂದ ಶ್ರೀಮಂತ ಬಿಲ್ಡರ್ ಒಬ್ಬರಿಗೆ ನೆರವಾಗಿದೆ ಎಂದು ಅವರು ವಿವರಿಸಿದರು.
ಮತ್ತೊಂದು ಅಕ್ರಮ: ಹಿಂದಿನ ಸರ್ಕಾರದ ಮತ್ತೊಂದು ಅಕ್ರಮ ಎಂದರೆ, ಕೋರ್ಟ್ನಲ್ಲಿ ಕೇಸು ನಡೆಯುತ್ತಿರುವ ಜಾಗವನ್ನೇ ಮಂಜೂರು ಮಾಡಿರುವುದು. ಅಂದರೆ, ಗೋಲ್ಡನ್ ವ್ಯಾಲಿ ಎಜುಕೇಷನ್ ಟ್ರಸ್ಟ್ ವಿದ್ಯಾಸಂಸ್ಥೆ ನಡೆಸುತ್ತಿದ್ದ ಜಾಗವನ್ನು ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಪುತ್ರ ಸುಂದರೇಶ್ಗೆ ನೀಡಿದೆ. ಆದರೆ, ಆ ಜಾಗದ ಗುತ್ತಿಗೆ ವಿಚಾರದಲ್ಲಿ ಸರ್ಕಾರ ಮತ್ತು ಟ್ರಸ್ಟ್ ನಡುವೆ ಕೋರ್ಟ್ನಲ್ಲಿ ವ್ಯಾಜ್ಯ ನಡೆಯುತ್ತಿದೆ. ಅಲ್ಲದೆ, 24.5ಕೋಟಿ ಬೆಲೆ ಬಾಳುವ ವಾಣಿಜ್ಯ ಜಾಗವನ್ನು ಕೇವಲ 6 ಕೋಟಿಗೆ ಹಂಚಿಕೆ ಮಾಡಿದೆ. ವಿಚಿತ್ರವೆಂದರೆ, ಈ ಹಣವನ್ನು ಸುಂದರೇಶ್ ಬದಲು ಬೇರೊಬ್ಬ ಬಿಲ್ಡರ್ ಪಾವತಿಸಿದ್ದಾರೆ. ಹೀಗಾಗೆ ತನಿಖೆ ನಡೆಯಬೇಕೆಂದು ಪ್ರಸಾದ್ ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


