ಈಗಿನ ಸುದ್ದಿ

ಆಸ್ತಿ ಮಾರಾಟ ಚರ್ಚೆಗೆ ಸುಬ್ರತಾ ರಾಯ್‌ಗೆ 10 ದಿನಗಳ ಕಾಲಾವಕಾಶ

ಆಸ್ತಿ ಮಾರಾಟ ಚರ್ಚೆಗೆ ಸುಬ್ರತಾ ರಾಯ್‌ಗೆ 10 ದಿನಗಳ ಕಾಲಾವಕಾಶ
Published On :

ನವದೆಹಲಿ: ಹೂಡಿಕೆದಾರರಿಗೆ ವಂಚಿಸಿದ ಆರೋಪದ ಮೇಲೆ ಕಳೆದ ಐದು ತಿಂಗಳಿನಿಂದ ಜೈಲು ಪಾಲಾಗಿರುವ ಸಹರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್‌ಗೆ ಆಸ್ತಿ ಮಾರಾಟ ಪ್ರಕ್ರಿಯೆಗಾಗಿ 10 ದಿನಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ.

ನೂಯಾರ್ಕ ಮತ್ತು ಲಂಡನ್‌ನಲ್ಲಿರುವ ಪ್ರತಿಷ್ಠಿತ ಹೋಟೆಲ್‌ಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸಂಭವನೀಯ ಖರೀದಿದಾರರೊಂದಿಗೆ ಚೌಕಾಸಿ ಮಾಡಲು 10 ದಿನಗಳ ಕಾಲ ಕಾಲಾವಕಾಶ ನೀಡಿದ್ದು, ಇದಕ್ಕಾಗಿ ತಿಹಾರ್ ಜೈಲಿನ ಕೊಠಡಿಯೊಂದನ್ನು ನೀಡಲಾಗಿದೆ.

ತಿಹಾರ್ ಜೈಲಿನಲ್ಲಿ ಮಾತುಕತೆಗಾಗಿ ಕಾನ್ಫಿರೆನ್ಸ್ ಕೊಠಡಿಯೊಂದನ್ನು ನಿಯೋಜಿಸಲಾಗಿದೆ. ಆಗಸ್ಟ್ 5 ರಿಂದ 10 ದಿನಗಳ ಕಾಲ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯೊರಗೆ ಖರೀದಿದಾರರೊಂದಿಗೆ ವಿಡಿಯೋ ಕಾನ್ಫಿರೆನ್ಸ್ ಮೂಲಕ ಮಾತುಕತೆಗೆ ನಡೆಸಲು ಅವಕಾಶ ನೀಡಿದೆ. ಸುಬ್ರತಾ ರಾಯ್‌ರೊಂದಿಗೆ ಸಹಾಯಕರಾಗಿ ಇಬ್ಬರು ಕಾರ್ಯದರ್ಶಿಗಳನ್ನು ಹಾಗೂ ಓರ್ವ ತಂತ್ರಜ್ಞನನ್ನು ನಿಯೋಜಿಸಿದೆ.

ಇದಕ್ಕಾಗಿ ಆಗಸ್ಟ್ 4ರೊಳಗೆ ತಿಹಾರ್ ಜೈಲಿನಲ್ಲಿ ಚರ್ಚಾ ಕೊಠಡಿಯೊಂದನ್ನು ನಿರ್ಮಿಸುವಂತೆ ಸೂಚಿಸಿ ದೆಹಲಿ ಸರ್ಕಾರಕ್ಕೆ ಆದೇಶಿಸಲಾಗಿದೆ ಎಂದು ಕೋರ್ಟ್ ಹೇಳಿದೆ.

ಏನಿದು ವಂಚನೆ ಪ್ರಕರಣ?

ಸಹಾರಾ ಸಮೂಹ ಕಂಪನಿಯ ಅಂಗಸಂಸ್ಥೆಗಳಾದ ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಷನ್ ಮತ್ತು ಸಹಾರಾ ಇಂಡಿಯಾ ಹೌಸಿಂಗ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ಗಳು ವಸತಿ ಯೋಜನೆಯ ಹೆಸರಿನಲ್ಲಿ ಸುಮಾರು 3 ಕೋಟಿ ಸಾರ್ವಜನಿಕ ಹೂಡಿಕೆದಾರರಿಂದ ಸುಮಾರು 24 ಸಾವಿರ ಕೋಟಿ ರು. ಹಣ ಸಂಗ್ರಹಿಸಿದ್ದವು.

ಆದರೆ, ಹೂಡಿಕೆದಾರರಿಗೆ ನೀಡಿದ್ದ ಭರವಸೆಯಂತೆ ವಸತಿ ಕಲ್ಪಿಸದೆ ವಂಚಿಸಿದ್ದವು. ಇದರಿಂದ ಮನನೊಂದ ಹೂಡಿಕೆದಾರರು ಕೋರ್ಟ್ ಮೆಟ್ಟಿಲೆರಿದ್ದರು. ಮಾರುಕಟ್ಟೆ ನಿಯಂತ್ರಣ ಸಂಸ್ಥೆ 'ಸೆಬಿ' ಈ ವಸತಿ ಹೂಡಿಕೆ ಪ್ರಕರಣದ ವಿಚಾರಣೆ ನಡೆಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕರ 24 ಸಾವಿರ ಕೋಟಿ ರು. ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಹಣ ಹಿಂದಿರುಗಿಸುವಂತೆ ಸಹಾರಾ ಸಮೂಹಕ್ಕೆ ನಿರ್ದೇಶನ ನೀಡಿತ್ತು. ಹೂಡಿಕೆ ಹಣವನ್ನು ಸೆಬಿಯಲ್ಲಿ ಠೇವಣಿಯಾಗಿ ಇಡಬೇಕು ಎಂದು ಸೂಚಿಸಿತ್ತು.

ನ್ಯಾಯಾಲಯದ ಈ ನಿರ್ದೇಶನದ ಅನ್ವಯ, ಸಹಾರಾ ಕಂಪನಿ ಮೊದಲ ಕಂತಿನಲ್ಲಿ ಸೆಬಿಗೆ ಹೂಡಿಕೆ ಹಣಕ್ಕೆ ಬಡ್ಡಿ ಸೇರಿಸಿ, ಸುಮಾರು 5,120 ಕೋಟಿ ರು. ಪಾವತಿಸಿತ್ತು. ಇನ್ನುಳಿದ 20 ಸಾವಿರ ಕೋಟಿ ರು. ಪಾವತಿಸುವಲ್ಲಿ ವಿಫಲವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.