ಈಗಿನ ಸುದ್ದಿ

ಕಾರು ಅಪಘಾತ: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ವಿಧಿವಶ

ಕಾರು ಅಪಘಾತ: ಕೇಂದ್ರ ಸಚಿವ ಗೋಪಿನಾಥ್ ಮುಂಡೆ ವಿಧಿವಶ
Published On :

ನವದೆಹಲಿ: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗೋಪಿನಾಥ್ ಮುಂಡೆ ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಇಂದು ಬೆಳಿಗ್ಗೆ 6.30ರ ಸುಮಾರಿನಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಮೋತಿಬಾಗ್ ಪ್ರದೇಶದಲ್ಲಿ ಕಾರು ಅಪಘಾತಕ್ಕೀಡಾಗಿದೆ. ರಸ್ತೆ ಅಫಘಾತದಿಂದ ಗಾಯಗೊಂಡಿದ್ದ ಗೋಪಿನಾಥ್ ಮುಂಡೆ(65) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ.

ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ 7.45ಕ್ಕೆ ಮುಂಡೆ ಅವರು ನಿಧನರಾಗಿದ್ದಾರೆ. ಸಚಿವರು ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಬಂದ ಇಂಡಿಕಾ ಕಾರು ಡಿಕ್ಕಿ ಹೊಡೆದಿದೆ. ಸಚಿವರು ತೀವ್ರವಾಗಿ ಗಾಯಗೊಂಡಿದ್ದು, ಬೆನ್ನು ಮೂಳೆ ಮುರಿದಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು, ಮುಂಡೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಳೆ ಮುಂಡೆ ಅವರ ಸ್ವಗ್ರಾಮ ಪರ್ಲಿಯಲ್ಲಿ ಅಂತಿಮ ಸಂಸ್ಕಾರ ನಡೆಸಲಾಗುವುದು.

ಕಾರಿನಲ್ಲಿ ಸಚಿವ ಮುಂಡೆ ಮತ್ತು ಆಪ್ತ ಕಾರ್ಯದರ್ಶಿ, ಡ್ರೈವರ್ ಇದ್ದರು. ಮುಂಡೆ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದ್ದು, ಇಂಡಿಕಾ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಡೆ ಅವರ ಸಾವು ಅನುಮಾನಸ್ಪದವಾಗಿದೆ ಎಂದು ಮಹಾರಾಷ್ಟ್ರದ ಬಿಜೆಪಿ ವಕ್ತಾರ ಅವಧೂತ್ ವಾಘ್ ಹೇಳಿದ್ದಾರೆ.

1949 ಡಿಸೆಂಬರ್ 12ರಂದು ಮಹಾರಾಷ್ಟ್ರದ ಪರ್ಲಿಯ ನಾತ್ರ ಎಂಬಲ್ಲಿ ಜನಿಸಿದ ಮುಂಡೆ ಅವರು ಐದು ಬಾರಿ ಶಾಸಕರಾಗಿದ್ದರು. ಬೀಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 1992 ರಿಂದ 95ರವರೆಗೆ ಮಹಾರಾಷ್ಟ್ರದ ವಿಧಾನಸಭೆಯ ಪ್ರತಿಪಕ್ಷನಾಯಕರಾಗಿ ಸೇವೆ ಸಲ್ಲಿಸಿದ್ದರು.

1980ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 1995-99ರವರೆಗೆ ಉಪಮುಖ್ಯಮಂತ್ರಿಯಾಗಿದ್ದರು. ಮೋದಿ ಸಂಪುಟದಲ್ಲಿ ಗ್ರಾಮೀಣಾಭೀವೃದ್ಧಿ ಸಚಿವರಾಗಿದ್ದರು.

ಕಾಲೇಜು ಗೆಳೆಯ ಪ್ರಮೋದಿ ಮಹಾಜನ್ ಮೂಲಕ ರಾಜಕೀಯ ಪ್ರವೇಶಿದ ಮುಂಡೆ ಅವರು ಪತ್ನಿ ಪ್ರಜ್ಞಾ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ದೆಹಲಿಯಿಂದ ಮುಂಡೆ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಮುಂಬೈಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.