ಯುದ್ಧ ನೌಕೆಯಲ್ಲಿ ಪ್ರಧಾನಿ: ಐಎನ್ಎಸ್ ವಿಕ್ರಮಾದಿತ್ಯ ದೇಶಕ್ಕೆ ಸಮರ್ಪಣೆ

ಪಣಜಿ: ದೇಶದ ಅತಿ ದೊಡ್ಡ ಯುದ್ಧ ನೌಕೆ ಐಎನ್ಎಸ್ ವಿಕ್ರಮಾದಿತ್ಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ನೌಕಾಪಡೆಗೆ ಅಧಿಕೃತವಾಗಿ ಹಸ್ತಾಂತರ ಮಾಡಿದರು. ಇದರೊಂದಿಗೆ ನಮ್ಮ ನೌಕಾಪಡೆಗೆ ಆನೆ ಬಲ ಬಂದಂತಾಗಿದೆ.
ವಿಕ್ರಮಾದಿತ್ಯವನ್ನು ದೇಶಕ್ಕೆ ಸಮರ್ಪಣೆ ಮಾಡಿ ಮಾತನಾಡಿದ ಮೋದಿ, ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು. ಅಲ್ಲದೆ ದೇಶದ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಸೇನಾ ಸಿಬ್ಬಂದಿಗಾಗಿ ಶೀಘ್ರದಲ್ಲೇ 'ಒನ್ ರ್ಯಾಂಕ್ ಒನ್ ಪೆನ್ಷನ್' ಜಾರಿಗೊಳಿಸಲಾಗುವುದು ಎಂದರು.
ಪ್ರಧಾನಿಯಾದ ನಂತರ ಮೊದಲ ಬಾರಿಗೆ ಇಂದು ಗೋವಾಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್.ಆರ್.ಧೂವನ್ ಅವರು ಸ್ವಾಗತಿಸಿದರು. ಬಳಿಕ ಐಎನ್ಎಸ್ ಹಂಸಾ ಹೆಲಿಕಾಪ್ಟರ್ ಮೂಲಕ ವಿಕ್ರಮಾದಿತ್ಯ ನೌಕೆಯ ಮೇಲೆ ಬಂದಿಳಿದರು. ಈ ವೇಳೆ ನೌಕಾಪಡೆ ಸಿಬ್ಬಂದಿಯಿಂದ ಮೋದಿ ಗೌರವ ವಂದನೆ ಸ್ವೀಕರಿಸಿದರು.
ವಿಕ್ರಮಾದಿತ್ಯ ನೌಕೆಯಲ್ಲಿರುವ ಮಿಗ್ 29ಕೆ ವಿಮಾನದ ಪೈಲಟ್ ಸೀಟ್ನಲ್ಲಿ ಕುಳಿತು ಮೋದಿ ವಿಮಾನದ ಕಾರ್ಯನಿರ್ವಹಣೆಯ ಬಗ್ಗೆ ವಿವರ ಪಡೆದರು. ನೌಕಾಪಡೆಯ ಅಧಿಕಾರಿಗಳು ವಿಕ್ರಮಾದಿತ್ಯದ ಕಾರ್ಯನಿರ್ವಹಣೆಯ ಬಗ್ಗೆ ವಿವರ ನೀಡಿದರು.
4500 ಟನ್ ಭಾರದ ಐಎನ್ಎಸ್ ವಿಕ್ರಮಾದಿತ್ಯವನ್ನು 15000 ಕೋಟಿ ರುಪಾಯಿ ನೀಡಿ ರಷ್ಯಾದಿಂದ ಖರೀದಿಸಲಾಗಿದೆ.
ಸುಮಾರು ನಾಲ್ಕು ಗಂಟೆಗಳ ಕಾಲ ವಿಕ್ರಮಾದಿತ್ಯ ನೌಕೆಯಲ್ಲಿ ಕಾಲ ಕಳೆಯಲಿರುವ ಪ್ರಧಾನಿ ಮೋದಿ ಅವರು ಮಿಗ್ 29ಕೆ, ಸೀ ಹಾರಿಯರ್, ಪಿ 8ಐ ವಿಮಾನಗಳು, ಟಿಯು 142 ಎಂ ಮತ್ತು ಐಎಲ್ 38ಎಸ್ಡಿ ಕರಾವಳಿ ವಿಮಾನಗಳು, ಕಾಮೋವ್ ಮತ್ತು ಸೀ ಕಿಂಗ್ ಹೆಲಿಕಾಪ್ಟರ್ಗಳ ಸಾಹಸವನ್ನು ವೀಕ್ಷಿಸಲಿದ್ದಾರೆ. ಬಳಿಕ ಸೇನಾ ಅಧಿಕಾರಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


