ಈಗಿನ ಸುದ್ದಿ

ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಾಂತರಕ್ಕೆ ಆಗ್ರಹ

Published On :

ಹಾಸನ: ತಾಲೂಕಿನ ಕಸಬಾ ಹೋಬಳಿಯ ಎರೇಬೋರೇಕಾವಲಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸ್ಥಳಾಂತರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ಹಾಗೂ ಬಗರ್ ಹುಕುಂ ಸಾಗುವಳಿದಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ಗೆ ಮನವಿ ನೀಡಿದರು.
ತಾಲೂಕಿನ ಕಸಬಾ ಹೋಬಳಿಯ ಎರೇ ಬೋರೇಕಾವಲಿನ ಸರ್ವೇ ನಂ. 83 ರಲ್ಲಿ 3.35 ಎಕರೆಯ ವಿಸ್ತೀರ್ಣದಲ್ಲಿ ಒಟ್ಟು 75 ಕುಟುಂಬಗಳು ಮನೆಗಳನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. ಈ ಕುಟುಂಬಗಳು 1956 ರಿಂದಲೂ ಇದೇ ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದು, ಬಹುತೇಕ ಎಲ್ಲರೂ ಬಡ ಕುಟುಂಬಗಳ ಹಿನ್ನೆಲೆಯವರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.
 ಈ ಪ್ರದೇಶದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕಲ್ಲುಗಣಿಗಾರಿಕೆ (ಕ್ರಷರ್) ನಡೆಯುತ್ತಿದ್ದು, ಇದರಿಂದ ಸಿಡಿಯುವ ಡೈನಾಮೆಂಟ್ ಮತ್ತು ಧೂಳಿನಿಂದ ಆರೋಗ್ಯ ತೀವ್ರವಾಗಿ ಹದಗೆಡುತ್ತಿದೆ. ಇದರ ಪರಿಣಾಮ ನಾಗರಿಕರು ಆಸ್ಪತ್ರೆಗೂ ಮನೆಗೂ ಅಲೆದಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ವೈದ್ಯರ ವೆಚ್ಚಕ್ಕಾಗಿ ಅಪಾರ ಹಣ ಬೇಕಾಗುತ್ತದೆ. ಇದರಿಂದ ಅಲ್ಲಿ ವಾಸಮಾಡುತ್ತಿರುವ ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಅಲ್ಲಿ ವಾಸಮಾಡುತ್ತಿರುವ ಎಲ್ಲರ ಮನೆಗಳನ್ನು ಖಾಲಿಮಾಡಿ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಮಾಡಿ ಗಣಿಗಾರಿಕೆಯಿಂದ ಅಲ್ಲಿಯ ನಿವಾಸಿಗಳನ್ನು ರಕ್ಷಿಸಬೇಕು ಮತ್ತು ಸರ್ಕಾರಿ ಜಾಗಗಳಲ್ಲಿ ಕಳೆದ 50 ವರ್ಷ ವಾಸ ಮಾಡುತ್ತಿರುವ ಎಲ್ಲರಿಗೂ ಆ ಜಾಗವನ್ನು ಸರ್ಕಾರದ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಸಮಿತಿಯ ಜಿಲ್ಲಾ ಸಂಚಾಲಕ ಎಚ್.ಆರ್. ನವೀನ್ ಕುಮಾರ್, ಪೃಥ್ವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.