ಈಗಿನ ಸುದ್ದಿ

ಕ್ಯಾಂಪಾಕೋಲಾ: ಅಕ್ರಮ ಪ್ಲಾಟ್‌ಗಳ ತೆರವು ಕಾರ್ಯಾಚರಣೆ ಆರಂಭ

ಕ್ಯಾಂಪಾಕೋಲಾ: ಅಕ್ರಮ ಪ್ಲಾಟ್‌ಗಳ ತೆರವು ಕಾರ್ಯಾಚರಣೆ ಆರಂಭ
Published On :

ಮುಂಬೈ: ದಕ್ಷಿಣ ಮುಂಬೈನಲ್ಲಿರುವ ಕ್ಯಾಂಪಾಕೋಲಾ ಅಪಾರ್ಟ್‌ಮೆಂಟ್‌ನ 96 ಅಕ್ರಮ ಪ್ಲಾಟ್‌ಗಳ ತೆರವು ಕಾರ್ಯಾಚರಣೆ ಸೋಮವಾರ ಆರಂಭಗೊಂಡಿದೆ.

ಕ್ಯಾಂಪಾಕೋಲಾ ಅಪಾರ್ಟ್‌ಮೆಂಟ್‌ನಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡಲಾಗಿದ್ದ 96 ಅಕ್ರಮ ಪ್ಲಾಟ್‌ಗಳಿಗೆ ಕಲ್ಪಿಸಲಾಗಿದ್ದ ವಿದ್ಯುತ್, ನೀರು ಹಾಗೂ ಗ್ಯಾಸ್ ಪೈಪ್‌ಲೈನ್‌ಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಮುಂಬೈ ಉಪ ನಗರಾಯುಕ್ತ ಆನಂದ್ ವಾಗ್ರಾಲ್ಕರ್ ಹೇಳಿದ್ದಾರೆ.

ಅಕ್ರಮ ಫ್ಲಾಟ್‌ಗಳ ತೆರವು ಕಾರ್ಯಾಚರಣೆಗೆ ಕ್ಯಾಂಪಾಕೋಲಾ ವಸತಿ ಸಮುಚ್ಚಯದ ನಿವಾಸಿಗಳು ಒಪ್ಪಿಗೆ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ 12 ತಂಡಗಳು ಇಂದು ಬೆಳಗ್ಗೆ 11 ಗಂಟೆಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಸಂಜೆವರೆಗೂ ಕಾರ್ಯಾಚರಣೆ ನಡೆಯಲಿದೆ ಎಂದು ಉಪ ನಗರಾಯುಕ್ತರು ತಿಳಿಸಿದ್ದಾರೆ.

ಇದೇ ವೇಳೆ, ಸುಪ್ರೀಂಕೋರ್ಟ್‌ನ ಆದೇಶದ ಮೇರೆಗೆ ನಾವು ಶಾಂತಿಯುತ ಕಾರ್ಯಾಚರಣೆ ನಡೆಸುತ್ತೇವೆ ಎಂದು ನಿವಾಸಿಗಳಿಗೆ ತಿಳಿಸಿದ್ದಾರೆ.

2005ರಿಂದಲೂ ನ್ಯಾಯಾಲಯದಲ್ಲಿ 'ಕ್ಯಾಂಪಾಕೋಲಾ' ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಸೊಸೈಟಿಯ ಅಧಿಕಾರಿಗಳು ಪಾಲಿಕೆಗೆ ನೀಡಿದ್ದ ಮೂಲನಕ್ಷೆಯನ್ನು ತಿರುಚಿ ಹೆಚ್ಚುವರಿ ಫ್ಲಾಟ್‌ಗಳನ್ನು ನಿರ್ಮಿಸಿದ್ದರು. ಇದರಲ್ಲಿ ಮುಂಬೈ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೂಡ ಶಾಮೀಲಾಗಿದ್ದರು ಎಂದು ಹೇಳಲಾಗುತ್ತಿದೆ.

1989ರಲ್ಲಿ ನಿರ್ಮಿಸಲ್ಪಟ್ಟಿದ್ದ ಈ ವಸತಿ ಸಮುಚ್ಚಯಕ್ಕೆ ಮುಂಬೈ ಮಹಾನಗರ ಪಾಲಿಕೆ ಕೇವಲ 5 ಅಂತಸ್ತುಗಳಿಗೆ ಮಾತ್ರ ಅನುಮತಿ ನೀಡಿತ್ತು. ಆದರೆ 'ಕ್ಯಾಂಪಾಕೋಲಾ' ಸೊಸೈಟಿ ಅಧಿಕಾರಿಗಳು ಮೂಲನಕ್ಷೆಯನ್ನು ತಿರುಚಿ ಅಕ್ರಮವಾಗಿ 35 ಅಂತಸ್ತುಗಳನ್ನು ನಿರ್ಮಿಸಿದ್ದರು.

ಇದೀಗ ಈ ವಸತಿ ಸಮುಚ್ಚಯದಲ್ಲಿರುವ 2ಕಟ್ಟಡಗಳಲ್ಲಿ ಒಟ್ಟು 45 ಅಂತಸ್ತುಗಳಿದ್ದು, ಹೆಚ್ಚುವರಿಯಾಗಿ ಸುಮಾರು 107 ಫ್ಲಾಟ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲಿ ಈಗ ಸುಮಾರು 500 ಕ್ಕೂ ಅಧಿಕ ನಿವಾಸಿಗಳು ವಾಸವಾಗಿದ್ದಾರೆ.

ನ್ಯಾಯಾಲಯದ ಮೆಟ್ಟಿಲೇರಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿ 17ರಂದು ತೀರ್ಪು ನೀಡಿದ್ದು, ಮೇ 31ರೊಳಗೆ ಜಾಗ ಖಾಲಿ ಮಾಡುವಂತೆ ನಿವಾಸಿಗಳಿಗೆ ಗಡುವು ನೀಡಿತ್ತು. ಹೀಗಾಗಿ ನ್ಯಾಯಾಲಯ ನೀಡಿದ್ದ ಗಡುವು ಮುಗಿದ ಹಿನ್ನಲೆಯಲ್ಲಿ ಬಿಎಂಸಿ ಅಧಿಕಾರಿಗಳು ಕಟ್ಟಡ ತೆರವಿಗೆ ಮುಂದಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.