ಈಗಿನ ಸುದ್ದಿ

ಭಾರತೀಯ ದೂತಾವಾಸ ಮೇಲಿನ ದಾಳಿಗೆ ಮೋದಿ ಖಂಡನೆ

ಭಾರತೀಯ ದೂತಾವಾಸ ಮೇಲಿನ ದಾಳಿಗೆ ಮೋದಿ ಖಂಡನೆ
Published On :

ನವದೆಹಲಿ: ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲಿನ ಭಯೋತ್ಪಾದಕರ ದಾಳಿಯನ್ನು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಭಾರತೀಯ ರಾಯಭಾರಿ ಕಚೇರಿ ಮೇಲಿನ ಉಗ್ರರ ದಾಳಿಯನ್ನು ಖಂಡಿಸಿರುವ ಮೋದಿ ಇದೊಂದು ದುಷ್ಕೃತ್ಯ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ ಅಮರ್ ಸಿನ್ಹಾಗೆ ಅವರಿಗೆ ಕರೆ ಮಾಡಿದ ಮೋದಿ, ಅಲ್ಲಿನ ಸದ್ಯದ ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಎಲ್ಲಾ ಅಧಿಕಾರಿಗಳ ಸುರಕ್ಷತೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಮೋದಿ ಭರವಸೆ ನೀಡಿದ್ದಾರೆ. ಸದ್ಯ ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿಯ ಎಲ್ಲಾ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರ ಪ್ರತಿಜ್ಞಾವಿಧಿಗೆ ಅಫ್ಘಾನಿಸ್ಥಾನದ ಅಧ್ಯಕ್ಷ ಹಮೀದ್ ಕರ್ಜೈ ಅವರಿಗೆ ಬಿಜೆಪಿ ಆಹ್ವಾನ ನೀಡಿತ್ತು. ಸಮಾರಂಭಕ್ಕೆ ಬರಲು ಹಮೀದ್ ಅವರು ಒಲವು ತೋರಿದ ಹಿನ್ನೆಲೆಯಲ್ಲಿ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ನಾಲ್ವರು ಶಸ್ತ್ರಸರ್ಜಿತ ಉಗ್ರರು ಇಂದು ಬೆಳಗ್ಗೆ ಭಾರತೀಯ ರಾಯಭಾರಿ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ರಾಯಭಾರಿ ಕಚೇರಿಯನ್ನು ಸುತ್ತುವರೆದ ಅಫ್ಘಾನ್ ಸೇನೆ ಮತ್ತು ಐಟಿಬಿಎಫ್ ಯೋಧರು ಸುಮಾರು 5 ಗಂಟೆಗಳ ನಿರಂತರ ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಉಗ್ರರ ದಾಳಿಯ ಹಿನ್ನೆಲೆಯಲ್ಲಿ ನರೇಂದ್ರ ಮೋದಿಗೆ ದೂರವಾಣಿ ಕರೆ ಮಾಡಿದ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಅವರು ಘಟನೆ ಬಗ್ಗೆ ಚರ್ಚಿಸಿದ್ದಾರೆ.

ಏತನ್ಮಧ್ಯೆ, ಅಫ್ಘಾನಿಸ್ತಾನದ ಭಾರತೀಯ ರಾಯಭಾರಿ ಕಚೇರಿ ಮೇಲಿನ ಉಗ್ರರ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದ್ದು, ಭಯೋತ್ಪಾದಕರ ದಾಳಿ ದುರದೃಷ್ಟಕರ ಎಂದು ಹೇಳಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.