ಈಗಿನ ಸುದ್ದಿ

ಮೋದಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ

ಮೋದಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ
Published On :

ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಪ್ರತಿಜ್ಞಾವಿಧಿ ಸಮಾರಂಭಕ್ಕೆ ನವವಧುವಿನಂತೆ ಸಿಂಗಾರಕೊಳ್ಳುತ್ತಿದ್ದೆ ರಾಷ್ಟ್ರಪತಿ ಭವನ.

ನಾಳೆ ಸಂಜೆ 6 ಗಂಟೆಗೆ ಭಾರತದ 14ನೇ ಪ್ರಧಾನಿಯಾಗಿ ಮೋದಿ ಪ್ರಮಾನವಚನ ಸ್ವೀಕರಿಸುತ್ತಿದ್ದು, ದೇಶದ ಪ್ರಥಮ ಪ್ರಜೆಯಾಗಿರುವ ಪ್ರಣಬ್ ಮುಖರ್ಜಿ ಅವರು ನೂತನ ಪ್ರಧಾನಿಗೆ ಅಧಿಕಾರದ ಗೌಪ್ಯತೆ ಬೋಧಿಸಲಿದ್ದಾರೆ. ಸಮಾರಂಭಕ್ಕೆ ದೇಶ ವಿದೇಶಗಳಿಂದ ರಾಷ್ಟ್ರಧ್ಯಕ್ಷರು, ಪ್ರಧಾನ ಮಂತ್ರಿಗಳು, ರಾಯಭಾರಿ ಅಧಿಕಾರಿಗಳು ಸೇರಿದಂತೆ ಉನ್ನತ ನಿಯೋಗ ಆಗಮಿಸುತ್ತಿರುವುದರಿಂದ ದೆಹಲಿಯ ರಾಷ್ಟ್ರಪತಿ ಭವನ ಮುಂದೆ ಸುಮಾರು 3 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಸಮಾರಂಭಕ್ಕೆ ಮಳೆಯಾರ ಅಡ್ಡಿಪಡಿಸಿದರೆ ರಾಷ್ಟ್ರಪತಿ ಭವನದಲ್ಲಿರುವ ಐತಿಹಾಸಿ ದರ್ಬಾರ್ ಸಭಾಂಗಣದಲ್ಲಿ ಸಮಾರಂಭ ನಡೆಯಲಿದೆ ಎಂದು ರಾಷ್ಟ್ರಪತಿ ಭವನದ ಕಾರ್ಯದರ್ಶಿ ಹೇಳಿದ್ದಾರೆ. ಇಲ್ಲಿ ಸುಮಾರು 500 ಜನರಿಗಾಗುವಷ್ಟು ಮಾತ್ರವೇ ಸ್ಥಳಾವಕಾಶವಿರುವುದು ಪ್ರಮುಖರಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದರು.

ದೆಹಲಿಯಾದ್ಯಂತ ಹೈ ಅಲರ್ಟ್
ಮೋದಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಇಂಡಿಯಾನ್ ಮುಜಾಹಿದ್ದೀನ್, ಹಿಜ್ಬುಲ್ ಮುಜಾಹಿದ್ದೀನ್, ಲಷ್ಕರ್-ಇ-ತೊಯ್ಬಾ ಸೇರಿದಂತೆ ವಿವಿಧ ಸಂಘಟನೆಗಳ ಬೆದರಿಕೆ ಹಿನ್ನೆಲೆಯಲ್ಲಿ ಹಿಂದೆಂದೂ ಕಾಣದಷ್ಟು ಭದ್ರತೆಯನ್ನು ದೆಹಲಿಗೆ ನೀಡಲಾಗಿದೆ. ಜೊತೆಗೆ ಒಟ್ಟು ಆರು ಸಾವಿರ ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಕಳೆದ ಮೂರು ದಿನಗಳಿಂದಲೇ ದೆಹಲಿಯಲ್ಲಿ ತಮ್ಮ ಸುಪರ್ದಿಗೆ ತೆಗೆದುಕೊಂಡಿರುವ ಸೇನಾಪಡೆ ಆಯಕಟ್ಟಿನಲ್ಲಿ ಹದ್ದಿನ ಕಣ್ಣಿಟ್ಟಿದ್ದಾರೆ. ವಾಯುಸೇನೆ, ಭೂಸೇನೆ ಮತ್ತು ನೌಕಾ ಸೇನಾ ಪಡೆಯನ್ನು ಇದೇ ಮೊದಲ ಬಾರಿಗೆ ನಿಯೋಜಿಲಾಗಿದೆ. ಜತೆಗೆ ಬಿಎಸ್‌ಎಫ್, ಸಿಐಎಸ್‌ಎಫ್, ಸಿಆರ್‌ಪಿಎಫ್ ಎನ್‌ಎಸ್‌ಜಿಯನ್ನು ಸಹ ಭದ್ರತೆಗೆ ನಿಯೋಜಿಲಾಗಿದ್ದು, ಶಂಕಾಸ್ಪದನಾಗಿ ತಿರುಗಾಡುವವರ ಚಲನ-ವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

ನಾಳೆ ಬೆಳಿಗ್ಗೆಯಿಂದಲೇ ರಾಷ್ಟ್ರಪತಿ ಭವನದ ಸುತ್ತಮುತ್ತ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಮಧ್ಯಾಹ್ನ ಎರಡು ಗಂಟೆ ನಂತರ ರಾಷ್ಟ್ರಪತಿ ಭವನದ ಸುತ್ತಮುತ್ತ ಯಾವುದೇ ರೀತಿಯ ಹೆಲಿಕಾಫ್ಟರ್ ಇಲ್ಲವೆ ವಿಮಾನಗಳ ಹಾರಾಟವನ್ನು ನಿಷೇಧಗೊಳಿಸಿ ದೆಹಲಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಒಂದು ವೇಳೆ ಯಾವುದೇ ಹೆಲಿಕಾಫ್ಟರ್ ಇಲ್ಲವೆ ವಿಮಾನ ಹಾರಾಟ ನಡೆಸಿದರೆ ತಕ್ಷಣವೇ ಅದನ್ನು ಹೊಡೆದುರುಳಿಸುವ ಕಟ್ಟಪ್ಪಣೆ ಮಾಡಲಾಗಿದೆ. ಜತೆಗೆ ಆಯಕಟ್ಟಿನ ಸ್ಥಳಗಳಲ್ಲಿ ಎನ್‌ಎಸ್‌ಡಿ ಕಮಾಂಡೋ ಮತ್ತು ಶಾರ್ಪ್ ಶೂಟರ್ಸ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಸಮಾರಂಭಕ್ಕೆ ಪ್ರಮುಖ ಗಣ್ಯರ ದಂಡು
ಪಾಕಿಸ್ತಾನದ ಅಧ್ಯಕ್ಷ ನವಾಜ್ ಷರೀಫ್ ಹಾಗೂ ರಾಜಪಕ್ಸೆ ಮಾತ್ರವಲ್ಲದೇ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್‌ ಕರ್ಜೈ, ಭೂತಾನ್‌ ಪ್ರಧಾನಿ ಶೇರಿಂಗ್‌ ತೊಬ್ಗಾಯ್‌, ನೇಪಾಳ ಪ್ರಧಾನಿ ಸುಶೀಲ್‌ ಕೊಯಿರಾಲಾ ಹಾಗೂ ಮಾಲ್ಡೀವ್ಸ್‌ ಅಧ್ಯಕ್ಷ ಅಬ್ದುಲ್ಲಾ ಯಾಮೀನ್‌ ಅಬ್ದುಲ್ಲಾ ಗಯೂಮ್‌ ಅವರು ಸೇರಿದಂತೆ ವಿದೇಶಿ ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದು,  ದೇಶದ ನಿರ್ಗಮನ ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಸೇರಿದಂತೆ ಇತರ ಪಕ್ಷಗಳ ಮುಖಂಡರು, ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸಮಾರಂಭಕ್ಕೆ ದೇಶದ ವಿವಿಧ ಬಗೆಯ ಖಾದ್ಯಗಳು:
ಮೋದಿ ಪ್ರತಿಜ್ಞಾವಿಧಿ ಸಮಾರಂಭಕ್ಕೆ ದೇಶದ ವಿವಿಧ ಬಗೆಯ 6 ಖಾದ್ಯಗಳನ್ನು ತಯಾರಿಸಲಾಗುತ್ತಿದ್ದು, ಇದರಲ್ಲಿ ಗುಜರಾತಿ ಡೋಕ್ಲಾ ಸೇರಿಂದತೆ ವಿವಿಧ ಬಗೆಯ ಚಿಕನ್ ಖಾದ್ಯಗಳು ಭೋಜನಕೂಟಕ್ಕೆ ಸಿದ್ಧಗೊಳ್ಳುತ್ತಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.