ಈಗಿನ ಸುದ್ದಿ

ಮರುಭೂಮಿಯ ಹೂ ಓದಲೇಬೇಕಾದ ಕಾದಂಬರಿ

ಮರುಭೂಮಿಯ ಹೂ ಓದಲೇಬೇಕಾದ ಕಾದಂಬರಿ
Published On :

ಇತ್ತೀಚಿಗಿನ ಕನ್ನಡದ ಬೆಸ್ಟ್ ಸೆಲ್ಲರ್ ಕೃತಿ 'ಸಖಿ' ಪಾಕ್ಷಿಕದಲ್ಲಿ ಪ್ರಕಟವಾದ ಡಾ. ಜಗದೀಶ್ ಕೊಪ್ಪ ಅವರ 'ಮರುಭೂಮಿಯ ಹೂ' ಕಾದಂಬರಿ. ಈ ಕುರಿತು ಬರೆದಿದ್ದಾರೆ, ಲೇಖಕಿ ಭಾರತಿ ಬಿ.ವಿ.  'ಮರುಭೂಮಿಯ ಹೂ' ಪ್ರತಿಗಳಿಗಾಗಿ ಸಂಪರ್ಕಿಸಿ. ಮಣಿ ಪ್ರಕಾಶನ: 96865 35465    

ಜಗತ್ತಿನ ಯಾವುದೇ ಮೂಲೆಯದ್ದಿರಲಿ, ಹೋರಾಟದ ಬದುಕು ಯಾವಾಗಲೂ ನಮಗೆ ಯಾಕೆ ಇಷ್ಟವಾಗುತ್ತವೆ? ಅಲ್ಲೆಲ್ಲೋ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತೇವಾ? ಆಗಾಗ ಕುಸಿದು ಬೀಳುವ ಕಾಲು, ಎದೆಗೆ ಇಂಥ ಕಥೆಗಳು ಒಂದಿಷ್ಟು ಕಸುವು ನೀಡುತ್ತವೆ. ನಡೆ ನಡೆದು ದಣಿವಾಗಿ ಗೋಡೆಗೊರಗಿ ನಿಂತ ನಂತರ ಮತ್ತೆ ನಡೆಯಬೇಕು ಅನ್ನುವ ಛಲ ಹುಟ್ಟಿಸುವ ಕಥೆಗಳು ತುಂಬ ಕಾಲ ಕಾಡಿಸುತ್ತವೆ. ಅಂಥದ್ದೊಂದು ಕಥೆ ಡಾ. ಎನ್. ಜಗದೀಶ್ ಕೊಪ್ಪ ಅವರು ಅನುವಾದಿಸಿರುವ, ಸೋಮಾಲಿಯಾ ಮೂಲದ ಜಗದ್ವಿಖ್ಯಾತ ರೂಪದರ್ಶಿ ವಾರಿಸ್ ಡೆರಿಸ್‌ಳ ಜೀವನ ಕಥೆ 'ಮರುಭೂಮಿಯ ಹೂ...'
ಈ ಕಥಾನಕವನ್ನು ಓದಿ ಮುಗಿಸಿದಾಗ ಮೊತ್ತ ಮೊದಲಿಗೆ ನನಗೆ ಅನ್ನಿಸಿದ್ದು 'ನಿಜಕ್ಕೂ ಇವೆಲ್ಲ ಒಬ್ಬಳು ವ್ಯಕ್ತಿಯ, ಒಂದೇ ಜನ್ಮದ ಕಥೆಯಾ?' ಎಂದು. ಎಲ್ಲೋ ಹುಟ್ಟಿ, ಎಲ್ಲೋ ಅಲೆದಾಡಿ, ಎಲ್ಲೋ ತಲುಪುವ ಆ ಕಥೆ ನನ್ನನ್ನು ಮೊದಲಿನ ನಾಲ್ಕು ಪೇಜು ಓದುವುದರಷ್ಟರಲ್ಲಿ ಒಳಕ್ಕೆ ಎಳೆದುಕೊಂಡು ಬಿಟ್ಟಿತು. ಅಲ್ಲಿಂದ ಮುಂದೆ ಕೊನೆಯ ಪೇಜಿನವರೆಗೆ ವಾರಿಸ್ ಅವಳ ಕಥೆ ಹೇಳುತ್ತ ಹೋದಳು ಮತ್ತು ನಾನು ಕೇಳುತ್ತಾ ಕೂತೆ. ಡಾ. ಕೊಪ್ಪ ಅವರ ಅನುವಾದ ಎಷ್ಟು ಚೆಂದಕ್ಕಿದೆ ಅಂದರೆ, ಸ್ವತಃ ವಾರಿಸ್ ಕನ್ನಡದಲ್ಲೇ ಕಥೆ ಹೇಳುತ್ತಿದ್ದಾಳೇನೋ ಅಂತ ಭ್ರಮಿಸುವಷ್ಟು!! ಅಲ್ಲಲ್ಲಿ ಕಥೆಯಲ್ಲಿನ ಪಾತ್ರಗಳು ಕನ್ನಡದ ನೆಲದವರಂತೆ ಮಾತಾಡಿಕೊಳ್ಳುವಾಗ ಆ ಭ್ರಮೆ ಹುಟ್ಟುವುದು ತೀರಾ ಅಸಹಜವೂ ಅಲ್ಲ. ಉದಾಹರಣೆಗೆ ಒಂದು ಕಡೆ ವಾರಿಸ್‌ಳ ಗೆಳತಿಯೊಬ್ಬಳು ಮಾತಾಡುವಾಗ 'ಅಲ್ಲ ಕಣೇ...' ಅಂತ ಮಾತು ಶುರು ಮಾಡುತ್ತಾಳೆ. ಈ 'ಕಣೇ' ಮತ್ತು 'ಕಣೋ' ಅನ್ನುವ ಎರಡು ತೀರ ಆತ್ಮೀಯವಾದಂಥ, ಆದರೆ ಅರ್ಥವೇ ಇಲ್ಲದಂಥ ಪದಗಳನ್ನು ನಾವು ಕನ್ನಡದ ಜನ ಹುಟ್ಟಿದಾಗಿನಿಂದ ಆಡುತ್ತಲೇ ಬಂದಿದ್ದೇವೆ. ಅದನ್ನು ಆಡುವಾಗ ನನಗೆ ಎಂದೂ ಆ ಪದಕ್ಕೆ ತುಂಬ ಸೌಂದರ್ಯವಿದೆ ಅಂತಲಾಗಲೀ, ನನ್ನವು ಅನ್ನುವಷ್ಟು ಪ್ರೀತಿಯಾಗಲೀ ಮೂಡಿರಲಿಲ್ಲ. ಆದರೆ, ಆಫ್ರಿಕನ್ ಬುಡಕಟ್ಟು ಜನಾಂಗದ ವಾರಿಸ್ ಆ ರೀತಿ ಮಾತಾಡುತ್ತಾಳೆ ಅನ್ನುವ ರೀತಿ ಡಾ. ಕೊಪ್ಪ ಅವರು ಬರೆದಾಗ, ನನಗೆ ಆ ಪದ ಎಂದಿಗಿಂತ ಮುದ್ದಾಗಿ ಕಂಡಿತು ಮತ್ತು 'ಮರುಭೂಮಿಯ ಹೂ' ನನ್ನ ದೇಶದ್ದೇ ಒಬ್ಬ ಹೆಣ್ಣಿನ ಚಿತ್ರಣವೆನ್ನುವಷ್ಟು ಹತ್ತಿರವೆನ್ನಿಸಿಬಿಟ್ಟಿತು. ಮತ್ತೊಂದೆರಡು ಕಡೆ ಒಂದೆರಡು ಪಾತ್ರಗಳು ಕತ್ತೆ ಮುಂಡೆ, ಹಲ್ಕಾ ರಂಡೆ, ಭೋಸುಡಿ ಅಂತ ಬಯ್ದಾಡಿಕೊಳ್ಳುತ್ತವೆ. ಆ ರೀತಿಯಾಗಿ ಮಾತಾಡಿಕೊಳ್ಳುವಾಗ ನನ್ನ ಹುಟ್ಟೂರಾದ ಕೊಳ್ಳೆಗಾಲದಲ್ಲೋ, ನಾನು ಬೆಳೆದ ಮೈಸೂರಿನ ಸುತ್ತ ಮುತ್ತಲ ಹಳ್ಳಿಯಲ್ಲೋ ಈ ಕಥೆ ನಡೆಯುತ್ತಿದೆ ಅನ್ನಿಸಿಬಿಡುತ್ತದೆ. ವಾರಿಸ್‌ಳ ಕಥೆ ನನಗೆ ತುಂಬ ಹತ್ತಿರವೆಂದು ಅನ್ನಿಸುವುದಕ್ಕೆ ಇದೂ ಒಂದು ಕಾರಣವಿರವಿರಬಹುದು. ಎಲ್ಲೂ ಈ ಕಾದಂಬರಿ 'ನನ್ನ ಜಗತ್ತಿಗೆ ಸೇರಿದ್ದಲ್ಲ' ಅನ್ನಿಸದಷ್ಟು ಅದ್ಭುತವಾದ ಅನುವಾದ ಮಾಡಿದ್ದಾರೆ ಡಾ. ಜಗದೀಶ್‌ಕೊಪ್ಪ ಅವರು. ಕಥೆ ನಮ್ಮದೆಂದು ಅನ್ನಿಸುವುದಕ್ಕೆ ಮತ್ತೂ ಒಂದು ಕಾರಣವಿದೆ... ಜಗತ್ತಿನ ಯಾವುದೇ ಮೂಲೆಯಲ್ಲಿನ ಹೆಣ್ಣುಮಕ್ಕಳಾದರೂ ಅತ್ಯಾಚಾರ, ದೈಹಿಕ ಹಿಂಸೆ, ಅಸಡ್ಡೆ, ದುರುಪಯೋಗಕ್ಕೊಳಗಾಗುವುದು ಮಾತ್ರ ಅದೇ ಅದೇ ಸಿದ್ಧ ಚೌಕಟ್ಟಿನಲ್ಲಿ...
ಆತ್ಮ ಕಥೆಗಳು ಶುರುವಾಗುವುದು ಗೆದ್ದ ಮೇಲೆಯೇ. ಓಡಿ, ದಣಿದ ಯಾವ ಆತ್ಮಕ್ಕೂ ಕಥೆ ಹೇಳುವ ಶಕ್ತಿ ಉಳಿದಿರುವುದಿಲ್ಲ... ಹೇಳಿದರೂ ಕೇಳುವ ಕಿವಿಗಳೂ ಇರುವುದಿಲ್ಲ. ಗೆದ್ದು ನಿಂತ ನಂತರ ಕಾಲು ಚಾಚಿ ದಣಿವಾರಿಸಿಕೊಳ್ಳುವಾಗಲೇ ಆತ್ಮದೊಳಗಿನ ಕಥೆ ಮತ್ತೆ ಜಾಗೃತವಾಗುವುದು. ಇಲ್ಲಿ ಕೂಡಾ ವಾರಿಸ್ ಜಗತ್ಪ್ರಸಿದ್ಧ ಮಾಡೆಲ್ ಆದ ನಂತರ, ಬಾಲ್ಯದ ಮತ್ತು ನಂತರದ ತನ್ನ ಹೋರಾಟದ ಬದುಕಿನ ಕಥೆ ಹೇಳಲು ಶುರು ಮಾಡುತ್ತಾಳೆ... ಹೇಳುತ್ತಾ, ಹೇಳುತ್ತಾ ಹೋದ ಹಾಗೆ ಓದುವವರ ಎದೆ ತಲ್ಲಣಿಸುತ್ತಾ ಹೋಗುತ್ತದೆ. ಆದರೆ ವಾರಿಸ್ 'ನೋಡ್ರಪ್ಪಾ, ಹೀಗ್‌ಹೀಗೆ... ಈ ಈ ಥರ...' ಎಂದು ಯಾವುದೇ ಆತ್ಮ ಮರುಕವಿಲ್ಲದೆ ಸುಮ್ಮನೆ ಕಥೆ ಹೇಳುತ್ತಾ ಹೋಗುವ ರೀತಿ ನನ್ನನ್ನು ಹಿಡಿದಿಟ್ಟುಬಿಟ್ಟಿತು.
ವಾರಿಸ್ ತನ್ನ ಕಥೆ ಶುರು ಮಾಡುವುದು ಅವಳು ಮನೆ ಬಿಟ್ಟು ಓಡಿ ಹೊರಟ ಘಟನೆಯಿಂದ. ಆನಂತರ ಅವಳ ಬಾಲ್ಯ ಫ್ಲ್ಯಾಷ್‌ಬ್ಯಾಕ್ ರೀತಿಯಲ್ಲಿ ತೆರೆದುಕೊಳ್ಳುತ್ತದೆ. ಆನಂತರ ಮುಂದುವರೆದು ಕಥೆಯ ಪ್ರಾರಂಭದ ಹಂತಕ್ಕೆ ನಮ್ಮನ್ನು ಮುಟ್ಟಿಸಿ, ಅಲ್ಲಿಂದ ಮುಂದೆ ಜೊತೆ ಜೊತೆಗೆ ನಮ್ಮನ್ನೂ ಕರೆದುಕೊಳ್ಳುತ್ತಾ, ಮತ್ತೊಮ್ಮೆ ಫ್ಲ್ಯಾಷ್‌ಬ್ಯಾಕ್‌ಗೆ ಇಳಿಯುತ್ತಾಳೆ. ಆಫ್ರಿಕಾ ಖಂಡದ ಮರುಭೂಮಿಯ ಆ ಅನಿಶ್ಚಿತ ಬದುಕು, ಅಲೆಮಾರಿತನದ ಹಾದಿ, ದೈನಂದಿನ ಅವಶ್ಯಕತೆಯನ್ನೂ ಹೋರಾಡಿ ಗಳಿಸುವ ಸ್ಥಿತಿ ಎಲ್ಲವೂ ನನಗೆ ಅಪರಿಚಿತವಿತ್ತು. ಹಾಗಾಗಿ 'ಹೀಗೂ ಒಂದು ಜನಾಂಗ ನಮ್ಮ ಭೂಮಿಯಲ್ಲಿ ಬದುಕುತ್ತಿದ್ದಾರಾ' ಎಂದು ನನ್ನನ್ನು ನಾನೇ ಪ್ರಶ್ನಿಸಿಕೊಳ್ಳುವಷ್ಟು ಹೋರಾಟದ ಬದುಕು ಅದು. ಅಲ್ಲಿನ ಜನರಿಗೆ ನೀರು ಸಿಗುವುದು ಅಪರೂಪ. ಎಷ್ಟೋ ಸಲ ನೀರು ಹುಡುಕಿ ಹೋದ ವಾರಿಸ್ ಮಧ್ಯ ರಾತ್ರಿಯಲ್ಲಿ ಮನೆಗೆ ವಾಪಸ್ಸಾಗುತ್ತಿದ್ದೆ ಅಂತ ಹೇಳುತ್ತಾಳೆ. ಸೊಪ್ಪು-ಹಣ್ಣು-ತರಕಾರಿ ಇವೆಲ್ಲ ಕಿವಿಯಿಂದ ಕೇಳಿ ಮಾತ್ರ ಬಲ್ಲಂಥ ವಸ್ತುಗಳು, ಅಕ್ಷರ ಕಲಿಕೆಯೆನ್ನುವುದು ಗೊತ್ತೇ ಇಲ್ಲ... ಹೀಗೆಲ್ಲ ಮನುಷ್ಯರು ಬದುಕುವ ಸ್ಥಿತಿ ಇದೇ ವಿಶ್ವದ ಒಂದು ಮೂಲೆಯಲ್ಲಿರಬಹುದು ಅಂತ ನೆನೆಸಿಕೊಳ್ಳಲೂ ಕಷ್ಟ. ನಮ್ಮ ಮನೆಯ ಮಕ್ಕಳಿಗೆ ಮೂರು ಮೂರು ಹೊತ್ತು ಚಂದಮಾಮ ತೋರಿಸಿ ಊಟ ತುರುಕುವ ನಮಗೆ, ಬೆಳಗ್ಗೆ ಎದ್ದ ಮಕ್ಕಳು ಬರೀ ಒಂಟೆಯ ಹಾಲನ್ನು ಮಾತ್ರ ಕುಡಿದು, ನೀರು ಸಂಗ್ರಹಿಸುತ್ತಾ, ಒಂಟೆ ಮೇಯಿಸುತ್ತಾ ದಿನ ಕಳೆವ ಮಕ್ಕಳ ಬದುಕು ಅದೆಷ್ಟು ಕಡಿಮೆ ಗೊತ್ತು ಅಂತ ನಾಚಿಕೆಯೆನ್ನಿಸಿತು. ರಾತ್ರಿ ಹೊತ್ತು ಮಾತ್ರ ಅವರಿಗೆ ಆಹಾರ... ಅದೂ ಮನೆಯಲ್ಲಿರುವ ಮಕ್ಕಳಿಗೆ ಮಾತ್ರ, ಉಳಿದಿದ್ದರೆ ಮಾತ್ರ ಹಿರಿಯರಿಗೆ ಊಟ. ಬದುಕಿನ ತಕ್ಕಡಿ ಒಂದೇ ವಿಶ್ವದಲ್ಲಿ ಇಷ್ಟೊಂದು ಏರುಪೇರಾಗಿರುವುದು ನಾವು ಊಹಿಸಲೂ ಆಗದ ವಿಷಯ ಅಲ್ಲವಾ?
ಹೀಗೆ ದಿನನಿತ್ಯದ ಬದುಕಿನ ಬವಣೆ, ಜನ ಜೀವನ ಎಲ್ಲವನ್ನೂ ವಾರಿಸ್ ಕಟ್ಟಿಕೊಡುತ್ತಾ ಹೋಗುತ್ತಾಳೆ. ಇಂಥ ಬದುಕು ಬದುಕುತ್ತಿದ್ದೂ ವಾರಿಸ್ ಎಲ್ಲೂ ಬದುಕಿನ ಬಗ್ಗೆ ದೂರುವುದು ಕಾಣುವುದಿಲ್ಲ. ಜನವಸತಿ ಪ್ರದೇಶಗಳಿಂದ ದೂರ ವಾಸಿಸುತ್ತಿದ್ದರೂ, ಎರಡು-ಮೂರು ಕುಟುಂಬಗಳು ಒಟ್ಟಾಗಿ ವಾಸಿಸುತ್ತಿದ್ದರಿಂದ ಅನಾಥ ಪ್ರಜ್ಞೆ ಕಾಡಲಿಲ್ಲ ಎನ್ನುತ್ತಾಳೆ, ರಬ್ಬರ್ ಚೆಂಡು ಸಿಗದ ಕಾರಣ ಮಣ್ಣಿನ ಹೆಂಟೆಗಳಲ್ಲಿ ಮಕ್ಕಳು ಆಟವಾಡುತ್ತಿದ್ದುದನ್ನು ಖುಷಿಯಿಂದ ಹೇಳಿಕೊಳ್ಳುತ್ತಾಳೆ, ರಾತ್ರಿ ಹೊತ್ತು ಹೊಟ್ಟೆಗೆ ಮೆಕ್ಕೆ ಜೋಳದ ರೊಟ್ಟಿ ಬಿದ್ದ ನಂತರ ಹೊಸ ಲೋಕವೊಂದು ಅನಾವರಣಗೊಳ್ಳುತ್ತಿತ್ತು ಅಂತ ಸಂತೃಪ್ತಿಯಿಂದ ಹೇಳುತ್ತಾಳೆ. ಏನೆಲ್ಲಾ ಇದ್ದೂ, ಸದಾ ಕಾಲ ಗೊಣಗು ಭಟ್ಟರಾದ ನಾವು ಕಲಿಯಬೇಕಾದ್ದು ತುಂಬ ಇದೆ ಅನ್ನಿಸಿತು.
ಸೊಮಾಲಿಯಾದ ದಿನ ನಿತ್ಯದ ಹೋರಾಟದ ಬದುಕಿನ ಮತ್ತು ಅದರ ಜೊತೆಯೇ ಬದುಕು ಸಾಗಿಸುತ್ತಿದ್ದುದರ ಬಗ್ಗೆ ಹೀಗೆ ನಿರ್ಲಿಪ್ತವಾಗಿ ಹೇಳುತ್ತಾ ಹೋಗುವ ವಾರಿಸ್ ಅಲ್ಲಿನ ಹೆಣ್ಣಿನ ಜೀವನದ ಬಗ್ಗೆ ಮಾಹಿತಿ ಚೆಲ್ಲುವಾಗ ಮಾತ್ರ ಗಂಟಲು ಆರಿ ಬಿಡುತ್ತದೆ. ಹೆಣ್ಣಿನ ಮಟ್ಟಿಗೆ ಅದು ನಿಷ್ಕರುಣಿ ಜಗತ್ತು. ಅವಳ ಅಮ್ಮ ಮಗುವಿನ ಜನನದ ಸಮಯದಲ್ಲಿ ಮನೆ ಬಿಟ್ಟು ಎಲ್ಲೋ ಹೋಗಿ ಮಾರನೆಯ ದಿನ ಮಗುವಿನೊಡನೆ ಮನೆಗೆ ಮರಳುವ ಸ್ಥಿತಿಯನ್ನು ಊಹಿಸಿಕೊಳ್ಳಿ. ಆ ಸ್ಥಿತಿಯಲ್ಲಿ ಅಪ್ಪ ಅನ್ನುವವನು ಊರಲ್ಲಿ ಇದ್ದರೆ ಇದ್ದ, ಎಲ್ಲಾದರೂ ಅಲೆಮಾರಿತನಕ್ಕೆ ಹೊರಟಿದ್ದರೆ ಹೊರಟು ಹೋಗಿರುತ್ತಿದ್ದ. ಆ ಬಾಣಂತನದ ಚಿತ್ರಣದ ಬದಿಯಲ್ಲೇ ದಿನ ಬಿಟ್ಟು ದಿನ ಮಗುವಿಗೆ ಎರೆಯುವ ಸಾಂಬ್ರಾಣಿ ಹೊಗೆಯಲ್ಲಿ ಮೈ ಆರಿಸುವ, ಎರಡೆರಡು ಹೊತ್ತೂ ಬಿಸಿ ಊಟ ತಿನ್ನುವ ಚಿತ್ರಣ ಮೂಡಿ ಬಂದು, We have no reason or no right to complain about our life ಅನ್ನಿಸಿಬಿಟ್ಟಿತು.

ಎಲ್ಲಕ್ಕಿಂತ ಎದೆ ನಡುಗುವುದು ವಾರಿಸ್ ಯೋನಿಚ್ಛೇದನದ ಬಗ್ಗೆ ಬರೆಯುವಾಗ. ಆಫ್ರಿಕಾದ ಬುಡಕಟ್ಟು ಜನಾಂಗದ ಮುಸ್ಲಿಂ ಮಹಿಳೆಯರು ಅನುಭವಿಸಬೇಕಾದ ನರಕ ಸದೃಶ ಹಿಂಸೆ ಇಲ್ಲಿ ಅನಾವರಣಗೊಳ್ಳುತ್ತದೆ. ವಿವಾಹಕ್ಕೆ ಮುನ್ನ ಯಾವುದೇ ಪುರುಷನೊಡನೆ ಮಲಗಬಾರದು ಅನ್ನುವ ಕಾರಣಕ್ಕೆ ಈ ಯೋನಿಚ್ಛೇದನ ಮಾಡುವುದು ಅಲ್ಲಿನ ಸಂಪ್ರದಾಯವಂತೆ. ಅದನ್ನು ಮಾಡುವ ಬಗೆಯನ್ನು ವಾರಿಸ್ ಹೇಳಿಕೊಂಡಿರುವುದನ್ನು ಓದುತ್ತಿದ್ದರೆ, ಹೊಟ್ಟೆಯಲ್ಲಿ ಅತೀವ ಸಂಕಟ ಶುರುವಾಗಿ ಬಿಡುತ್ತದೆ. ಯಾವುದೋ ಒಬ್ಬ ಮುದುಕಿ ಕೈಯ್ಯಲ್ಲಿದ್ದ ಬ್ಲೇಡಿಗೆ ಅಂಟಿದ್ದ ರಕ್ತವನ್ನು ತನ್ನ ಬಟ್ಟೆಗೆ ಒರೆಸಿಕೊಂಡು, ಅದೇ ಬ್ಲೇಡಿನಲ್ಲಿ ಈ ಕೆಲಸ ಶುರು ಮಾಡುತ್ತಾಳಂತೆ. ದೇಹದ ಕೈ ಕಾಲಿನಂತ ಒರಟು ಅಂಗಗಳಿಗೆ ಪೆಟ್ಟು ಬಿದ್ದರೇನೇ ಜೀವ ವಿಲಿ ವಿಲಿ ಒದ್ದಾಡಿಹೋಗುತ್ತದೆ. ಅಂಥದ್ದರಲ್ಲಿ ಯೋನಿಚ್ಛೇದನದಂಥ ಕೆಲಸವನ್ನು ಹಲವರಿಗೆ ಉಪಯೋಗಿಸಲ್ಪಟ್ಟ ಬ್ಲೇಡಿನಲ್ಲಿ ಮಾಡುತ್ತಾರಂತೆ! ಅಬ್ಬಾ ಆ ಜಗತ್ತಿನ ಕ್ರೌರ್ಯಕ್ಕೆ ಕೊನೆಯೇ ಇಲ್ಲ ಅನ್ನಿಸಿತು. ಅದಾದ ನಂತರ ಮಾಮೂಲಿ ಸೂಜಿ, ದಾರ ತೆಗೆದು, ಯೋನಿಯ ಎರಡೂ ಭಾಗವನ್ನು ಹಿಡಿದು ಹೊಲಿಗೆ ಹಾಕಿ ಬಿಡುತ್ತಾರಂತೆ. ಆ ರೀತಿ ಹೊಲಿಗೆ ಹಾಕುವಾಗ ಮೂತ್ರ ವಿಸರ್ಜನೆಗೆಂದು ಒಂದು ಸಣ್ಣ ರಂಧ್ರ ಬಿಟ್ಟು, ಉಳಿದ ಭಾಗವನ್ನೆಲ್ಲ ಹೊಲಿದು ಬಿಡುತ್ತಾರಂತೆ. ಆ ಹೊಲಿಗೆ ಯಾವುದೇ ಕಾರಣಕ್ಕಾದರೂ ಬಿಚ್ಚಿ ಹೋದರೆ ಅಥವಾ ಈ ಕ್ರಿಯೆಗೆ ಯಾರಾದರೂ ಒಳಗಾಗದೇ ಉಳಿದರೆ ಅವಳು ಅಪವಿತ್ರಳೆಂದು ಅಲ್ಲಿನ ಸಮಾಜ ತೀರ್ಮಾನಿಸುತ್ತದಂತೆ.

ಈ ಕ್ರಿಯೆಗೆ ಒಳಗಾದ ನಂತರ ವಾರಿಸ್‌ಗೆ ಎಂದೂ ಮೊದಲಿನಂತೆ ಇರಲು ಆಗುವುದೇ ಇಲ್ಲ. ಕುಣಿದು ಕುಪ್ಪಳಿಸುವುದು, ಮರ ಹತ್ತಿಳಿಯುವುದೆಲ್ಲ ಹೋಗಲಿ, ಮೂತ್ರ ವಿಸರ್ಜನೆಯಂತ ದೈನಂದಿನ ಕ್ರಿಯೆಗೆ ಕೂಡ ಅಪಾರವಾದ ನೋವನ್ನು ತಿನ್ನುವ ಸ್ಥಿತಿ ಬಂದು ಬಿಡುತ್ತದೆ. ಋತುಸ್ರಾವದ ಸಮಯದಲ್ಲಿ ಕೂಡಾ ಅತೀವ ಯಾತನೆಯನ್ನು ಅನುಭವಿಸಬೇಕಾಗಿ ಬರುತ್ತದೆ. ಆ ಸಮಯದಲ್ಲಿ ಉರಿ ತಾಳಲಾರದೆ ಮರಳಿನಲ್ಲಿ ಗುಂಡಿ ತೋಡಿ, ಅದರಲ್ಲಿ ಕೂತು ತಣ್ಣನೆಯ ಮರಳಿನಲ್ಲಿ ಒಂದಿಷ್ಟು ತಂಪು ಕಾಣುತ್ತಾರಂತೆ ಅಲ್ಲಿನ ಹೆಣ್ಣುಮಕ್ಕಳೆಲ್ಲ. ಆಕೆಯ ಅಮ್ಮ ಆಗಾಗ ಹಾಕಿದ್ದ ಹೊಲಿಗೆ ಸರಿಯಾಗಿದೆಯೇ ಎಂದು ಪರೀಕ್ಷಿಸುತ್ತಾ ಇರುವ ಕರ್ಮ ಬೇರೆ. ಈ ಅಮಾನುಷ ಕ್ರಿಯೆಗೆ ಒಳಗಾಗಿ ಆಫ್ರಿಕಾ ಖಂಡದಲ್ಲಿ ಪ್ರತಿ ವರ್ಷ ಸಾವಿರಾರು ಹೆಣ್ಣು ಮಕ್ಕಳು ಸಾವಿಗೀಡಾಗುತ್ತಾರಂತೆ ಮತ್ತು ಅವರು ಮರುಭೂಮಿಯ ಮರಳಿನಡಿ ಸದ್ದಿಲ್ಲದೇ ಸೇರುತ್ತಾರಂತೆ. ಇದನ್ನೆಲ್ಲ ಅನುಭವಿಸಿಯೂ ಬದುಕುಳಿದ ತಾನೇ ಪುಣ್ಯವಂತೆ ಅನ್ನುತ್ತಾಳೆ ವಾರಿಸ್. ಆಫ್ರಿಕಾ ಖಂಡದಲ್ಲಿ ಹೆಣ್ಣುಮಕ್ಕಳಿಗೆ ವಧು ದಕ್ಷಿಣೆ ತೆತ್ತು ಗಂಡುಗಳು ಅವರನ್ನು ಮದುವೆಯಾಗುವ ಪದ್ಧತಿ ಇದೆಯಂತೆ. ಹಾಗಾಗಿ ಅಲ್ಲಿನ ಗಂಡು ಜನಾಂಗಕ್ಕೆ ಎಲ್ಲ ಹೆಣ್ಣುಗಳೂ ಚಿನ್ನದ ಮೊಟ್ಟೆಯಿಡುವ ಕೋಳಿಗಳ ಥರ ಕಾಣುತ್ತಾರೆ. ವಾರಿಸ್‌ಳಿಗೂ 60 ವರ್ಷ ವಯಸ್ಸಿನ 'ಗಂಡಿನೊಡನೆ' ಮದುವೆ ಮಾಡಲು ಅವಳ ತಂದೆ ನಿರ್ಧರಿಸುತ್ತಾನೆ... ವಧು ದಕ್ಷಿಣೆ ಐದು ಒಂಟೆಗಳು! ವಯಸ್ಸಾದವನನ್ನು ಮದುವೆಯಾಗಲು ವಾರಿಸ್ ನಿರಾಕರಿಸಿದರೆ, ಅವಳ ಅಪ್ಪ ಹೇಳುತ್ತಾನೆ 'ವಯಸ್ಸಾದವನು ಅಂದರೆ ಮತ್ತೂ ಒಳ್ಳೆಯದು... ಅವನು ಎರಡನೆಯ ಮದುವೆಯಾಗುವುದಿಲ್ಲ' ಎಂದು! ತಾನೇ ಸ್ವತಃ ಸಣ್ಣ ಹುಡುಗಿಯನ್ನು ಎರಡನೆಯ ಮದುವೆಯಾದ ವಾರಿಸ್‌ಳ ಅಪ್ಪನ ಬಾಯಲ್ಲಿ ಇಂಥ ಮಾತು... ಅವನು ಇಲ್ಲಿ ಇಡೀ ಆಫ್ರಿಕಾದ ಗಂಡು ಕುಲದ ಮುಖ್ಯಸ್ಥನಂತೆ, ವಕ್ತಾರನಂತೆ ಕಾಣುತ್ತಾನೆ.
ವಯಸ್ಸಾದವನನ್ನು ಮದುವೆಯಾಗಲು ಇಷ್ಟವಿಲ್ಲದ ವಾರಿಸ್, ಅವಳ ತಾಯಿಯ ಸಹಾಯದಿಂದ ಮರುಭೂಮಿಯನ್ನು ಬಿಟ್ಟು, ಫ್ಯಾಷನ್ ಜಗತ್ತಿನ ರಾಣಿಯಾಗಿ ಮೆರೆಯುವವರೆಗಿನ ಅವಳ ಸಾಹಸಗಾಥೆ ಒಂದು ಸಿನೆಮಾದ ದೃಶ್ಯಗಳ ಹಾಗೆ ಕಟ್ಟಿಕೊಡಲ್ಪಟ್ಟಿವೆ. ಅಲ್ಲಿಂದ ಓಡಿಬಂದ ವಾರಿಸ್‌ಗೆ ಜಗತ್ತಿನಲ್ಲಿ ಯಾರೊಬ್ಬರೂ ಇಲ್ಲ. ಸಿಂಹದ ಬಾಯಿಗೆ ಸಿಲುಕುವುದರಿಂದ ಪಾರಾದ ವಾರಿಸ್ ಅಲ್ಲಿಂದ ಮುಂದೆ ಚಿಕ್ಕಪ್ಪನ ಮನೆ ಸೇರುತ್ತಾಳೆ. ಅವಳ ಚಿಕ್ಕಪ್ಪನ ಮರುಕವೆಲ್ಲ ಅವಳ ಅಪ್ಪನ ಕಡೆಗೆ. ಹಾಗಾಗಿ ಅವಳನ್ನು ವಾಪಸ್ ಊರಿಗೆ ಕಳಿಸಬೇಕೆನ್ನುವುದು ಅವನ ಆಸೆ. ಅಲ್ಲಿಂದ ತಪ್ಪಿಸಿಕೊಳ್ಳಲು ಮತ್ತೆ ಓಟ ಶುರು. ಅಲ್ಲಿಂದ ಮತ್ತೆ ಅಕ್ಕನ ಮನೆಯ ಆಶ್ರಯ. ಅವಳೂ ತಿರುಗಿ ಬಿದ್ದಾಗ ಮಾವನ ಮನೆ ಸೇರುತ್ತಾಳೆ. ಅಲ್ಲಿಯೂ ಸರಿ ಬೀಳದೆ ಚಿಕ್ಕಮ್ಮನ ಮನೆ ಸೇರುತ್ತಾಳೆ. ಅಲ್ಲಿಂದ ಮುಂದೆ ಇಂಗ್ಲೆಂಡಿನಲ್ಲಿರುವ ಮತ್ತೊಂದು ಚಿಕ್ಕಮ್ಮನ ಮನೆ... ಹೀಗೆ ಬದುಕು ವಾರಿಸ್‌ಳನ್ನು ಫುಟ್ಬಾಲ್ ಆಡುತ್ತಾ ಹೋಗುತ್ತದೆ.

ಅಚಾನಕ್ ಒಂದು ದಿನ ಲಂಡನ್ ನಗರದಲ್ಲಿದ್ದ ಚಿಕ್ಕಮ್ಮನ ಮನೆಗೆ ಕೆಲಸಕ್ಕೆ ಸಹಾಯಕಿಯೊಬ್ಬಳು ಬೇಕಿದ್ದಾಳೆ ಅಂತ ತಿಳಿದ ವಾರಿಸ್ ತಾನೇ ಅಲ್ಲಿಗೆ ಹೋಗುವ ನಿರ್ಧಾರ ಮಾಡುತ್ತಾಳೆ. ಅದು ಬದುಕಿನಲ್ಲಿಯ ಅತಿ ದೊಡ್ಡ ತಿರುವು! ಭಾಷೆ ಬಾರದ ವಾರಿಸ್‌ಳ ಲಂಡನ್ ವಾಸ. ಎಷ್ಟೊಂದು ಸಲ ಅತ್ಯಾಚಾರಕ್ಕೊಳಗಾದ ಮತ್ತು ಆ ಅಪಾಯಕ್ಕೆ ಸಿಕ್ಕಿಕೊಂಡ ವಾರಿಸ್‌ಗೆ, ಅಣ್ಣನಂಥ ಚಿಕ್ಕಮ್ಮನ ಮಗನಿಗೆ ಕೂಡಾ ಅವಳ ದೇಹ ಬೇಕಾಗುವುದನ್ನು ತುಂಬ ನೋವಿನಿಂದ ಹೇಳುತ್ತಾಳೆ. ಸ್ವತಃ ಚಿಕ್ಕಮ್ಮನಿಗೆ ಎಲ್ಲ ವಿಷಯ ಹೇಳಿದರೂ, ಆಕೆ ಮಗನನ್ನು ಶಿಕ್ಷಿಸದೆ, ಆ ವಿಷಯವನ್ನು ಅಲ್ಲೇ ಮುಚ್ಚಿ ಹಾಕುತ್ತಾಳೆ. ಆನಂತರ ಚಿಕ್ಕಪ್ಪ ಸೊಮಾಲಿಯಾಗೆ ವಾಪಸ್ ಊರಿಗೆ ಹೊರಡುವುದು, ವಾರಿಸ್ ದುಡ್ಡು ಸಂಪಾದಿಸಲೇ ಬೇಕು ಎಂದು ತೀರ್ಮಾನಿಸಿ ಅಲ್ಲೇ ಉಳಿಯಲು ಸಾಧ್ಯವಾಗುವುದು ಎಲ್ಲ ಸಸ್ಪೆನ್ಸ್ ಸಿನೆಮಾದ ರೀತಿ ಸಾಗುತ್ತದೆ.

ವಾರಿಸ್ ಮೆಕ್‌ಡೊನಾಲ್ಡ್‌ನಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಂದ ಮುಂದೆ ಇಂಗ್ಲೀಷ್ ಭಾಷೆ ಕಲಿತು, ರೂಪದರ್ಶಿಯಾಗುವ ಕಥೆ ಕೂಡಾ ಒಂದು ರೀತಿಯ ಮೂಗಿನ ಮೇಲೆ ಬೆರಳಿಟ್ಟು ಬೆರಗಿನಿಂದ ನೋಡುವಂಥ ಕಥೆ. ಇಂಗ್ಲೆಂಡಿನ ಪಾಸ್‌ಪೋರ್ಟ್‌ಗಾಗಿ ಯಾರ ಜೊತೆಯೋ ಎರಡು ಸುಳ್ಳು ಮದುವೆಗಳು, ಅಲ್ಲಿಂದ ಮುಂದೆ ಒಂದು ನಿಜದ ಮದುವೆ, ಆನಂತರ ಅವಳು ವಿಶ್ವದ ಅತ್ಯಂತ ಡ್ಡ್ಛ್ಛಜಡಡಜ್ಡಿಟ ರೂಪದರ್ಶಿಯಾಗುವವರೆಗಿನ ಕಥೆ ... ಮೊದಲೇ ಹೇಳಿದ ಹಾಗೆ ಇಷ್ಟೆಲ್ಲವೂ ಒಂದೇ ಜನ್ಮದ ಕಥೆ ಅನ್ನಿಸುವುದೇ ಇಲ್ಲ. ಅಷ್ಟೆಲ್ಲಾ ಹಣ, ಕೀರ್ತಿ ಸಂಪಾದಿಸಿದರೂ ಹೊಲಿದಿದ್ದ ಯೋನಿ ಸರಿಪಡಿಸಿಕೊಳ್ಳಲು ಆಪರೇಷನ್ ಆದ ನಂತರ ಕಮೋಡಿನ ಮೇಲೆ ಕೂತು ಮುಕ್ತವಾಗಿ ಮೂತ್ರ ವಿಸರ್ಜನೆ ಮಾಡಿದ ಸುಖ ನೆನಪಿಸಿ ಕೊಳ್ಳುತ್ತಾಳೆ! ಅಲ್ಲಿಂದ ಮುಂದೆ ಅವಳು ಯೋನಿಚ್ಛೇದನದ ವಿರುದ್ಧ ಹೋರಾಡಲು ವಿಶ್ವಸಂಸ್ಥೆಯ ಜೊತೆ ಕೈ ಜೋಡಿಸುತ್ತಾಳೆ ಅನ್ನುವುದರೊಂದಿಗೆ ಅವಳ ಕಥೆ ಮುಗಿಯುತ್ತದೆ. ಇಷ್ಟೊಂದೆಲ್ಲ ಅನುಭವಿಸಲು ನಾಲ್ಕಾರು ಜನ್ಮವಾದರೂ ಸಾಲುವುದಿಲ್ಲ ಅನ್ನುವಷ್ಟು ಸುದೀರ್ಘ ಕಥಾನಕ ಅವಳ ಬದುಕು. 170 ಪುಟಗಳ ಈ ಕಾದಂಬರಿ ಕೈಗೆತ್ತಿಕೊಂಡರೆ, ಮುಗಿಸುವವರೆಗೆ ಕೆಳಗಿಡುವುದು ಅಸಾಧ್ಯ! ಇಡೀ ಆಫ್ರಿಕಾದ ಬುಡಕಟ್ಟು ಜನಾಂಗದ ಹೆಣ್ಣುಮಕ್ಕಳ ಬದುಕನ್ನು ಅವಳು ತೆರೆದಿಡುತ್ತಾ ಹೋಗುವ ರೀತಿಯಲ್ಲಿ ನಾನಂತೂ ಕಳೆದೇ ಹೋಗಿದ್ದೆ. ನೋವು ಯಾವ ಭಾಷೆಯದ್ದೇ ಆದರೂ, ಯಾವ ಖಂಡದ್ದೇ ಆದರೂ ಎಲ್ಲ ಕಡೆಯೂ ಅದು ಒಂದೇ ರೀತಿ ಇರುತ್ತದೆ. ಅದೇ ಎಳವೆಯಲ್ಲಿನ ಅತ್ಯಾಚಾರ, ಅದೇ ಗಂಡು ಸಮುದಾಯದ ಅಧೀನಕ್ಕೆ ಒಳಪಡುವ ಅಸಹಾಯಕತೆ, ಅತ್ಯಾಚಾರಿಗಳಿಗೆ ಹಾಗೆ ಮಾಡಬೇಡಿ ಎಂದು ಶಿಕ್ಷಿಸುವ ಬದಲಿಗೆ ಅವಳ ಯೋನಿಯನ್ನು ಹೊಲಿದು ಹೆಣ್ಣಿಗೆ ಮತ್ತಷ್ಟು ನೋವು ಕೊಡುವ ಅಮಾನವೀಯತೆ... ನೋವಿನ ಭಾಷೆಯಲ್ಲಿದ್ದುದಕ್ಕೇ ಅದು ನಮ್ಮದೇ ನೆಲದ ಕಥೆಯೆನ್ನಿಸಿರಲಿಕ್ಕೂ ಸಾಕು. ಇಂಥ ಕಥೆಯನ್ನು ನಮ್ಮದಾಗಿಸಿದ ಡಾ.ಕೊಪ್ಪ ಅವರಿಗೆ ಕೃತಜ್ಞತೆ...

ಇಷ್ಟೆಲ್ಲಾ ಓದಿದ ನಂತರ ಇಂಟರ್‌ನೆಟ್‌ನಲ್ಲಿ ಯೋನಿಚ್ಛೇದನಕ್ಕೆ ಸಂಬಂಧಿಸಿದ ಒಂದೆರಡು ಫೋಟೋಗಳನ್ನಾದರೂ ನೋಡೋಣವೆಂದು ಸರ್ಚ್ ಹಾಕಿದರೆ ಸಾಲು ಸಾಲು ವೀಡಿಯೋ ಮತ್ತು ಫೋಟೋಗಳ ಲಿಂಕ್‌ಗಳು ಎದುರಾದವು. ಆಗಲಿಲ್ಲ, ನನ್ನಿಂದ ಅವುಗಳನ್ನು ತೆರೆದು ನೋಡುವುದು ನಿಜಕ್ಕೂ ಸಾಧ್ಯವೇ ಇರಲಿಲ್ಲ. ನೋಡಲೇ ಇಷ್ಟು ಕಷ್ಟವಾದರೆ, ಇನ್ನು ಅನುಭವಿಸಿದ ಹೆಣ್ಣುಗಳ ಗತಿ? ಹೆಣ್ಣನ್ನು ಅಮಾನುಷವಾಗಿ ಕಾಣುವ ಜಗತ್ತಿನ ಒಬ್ಬೊಬ್ಬ ಗಂಡಿನ ಎದೆ ಮರುಭೂಮಿಯಲ್ಲೂ ಪ್ರೀತಿಯ, ಕಾರುಣ್ಯದ ಹೂವು ಅರಳಲಿ ದೇವರೇ...

-ಭಾರತಿ ಬಿ.ವಿ
bvbkoll@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.