ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಕ್ರಿಯಾಶೀಲ ಮಹಿಳೆಯರಲ್ಲಿ ದೇಹ ಸೌಂದರ್ಯದ ಬಗ್ಗೆ ಕೀಳರಿಮೆ!

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ನೇಹಿತರ ಭಾವಚಿತ್ರಗಳನ್ನು ಕಂಡು ಖುಷಿಪಟ್ಟು ಲೈಕ್, ಕಮೆಂಟ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಟೊರೊಂಟೊ: ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಸ್ನೇಹಿತರ ಭಾವಚಿತ್ರಗಳನ್ನು ಕಂಡು ಖುಷಿಪಟ್ಟು ಲೈಕ್, ಕಮೆಂಟ್ ಮಾಡುವ ಯುವತಿಯರು ಮತ್ತು ಸಣ್ಣ ವಯಸ್ಸಿನ ಮಹಿಳೆಯರು ತಮ್ಮ ಬಗ್ಗೆ ಕೀಳು ಮತ್ತು ಅಸುರಕ್ಷತೆ ಭಾವನೆ ಬೆಳೆಸಿಕೊಳ್ಳುತ್ತಾರೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕೆನಡಾದ ಯೊರ್ಕ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಯುವತಿಯರು ಸೇರಿದಂತೆ ಸಣ್ಣ ವಯಸ್ಸಿನ ಮಹಿಳೆಯರು ಆನ್ ಲೈನ್ ನಲ್ಲಿ ಭಾವಚಿತ್ರಗಳನ್ನು ನೋಡಿ ಹೇಗೆ ಸಂವಹನ ನಡೆಸುತ್ತಾರೆ ಮತ್ತು ಇದರಿಂದ ತಮ್ಮ ದೇಹದ ಬಗ್ಗೆ ಯಾವ ರೀತಿಯ ಭಾವನೆ ತಳೆಯುತ್ತಾರೆ ಎಂದು ಹೇಳಿದೆ.

'ಬಾಡಿ ಇಮೇಜ್' ಎಂಬ ಪತ್ರಿಕೆಯಲ್ಲಿ ಈ ಸಂಶೋಧನೆ ಪ್ರಕಟವಾಗಿದ್ದು 18ರಿಂದ 27 ವರ್ಷದೊಳಗಿನ ಯುವತಿಯರು ಮತ್ತು ಮಹಿಳೆಯರನ್ನು ಮುಖ್ಯವಾಗಿರಿಸಿಕೊಂಡು ಸಂಶೋಧನೆ ಮಾಡಲಾಗಿದೆ. ಇವರು ಫೇಸ್ ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್, ವಾಟ್ಸಾಪ್ ಗಳಲ್ಲಿ ತಮಗಿಂತ ಸುಂದರವಾದ ಯುವತಿಯರನ್ನು ಕಂಡು ಲೈಕ್, ಕಮೆಂಟ್ ಮಾಡುತ್ತಿರುತ್ತಾರೆ, ಆದರೆ ತಮ್ಮ ದೇಹ, ಸೌಂದರ್ಯದ ಬಗ್ಗೆ ಅವರಿಗೆ ಅಸಮಾಧಾನ, ಬೇಸರವಿರುತ್ತದೆ, ಬೇರೆಯವರು ತಮಗಿಂತ ಸುಂದರವಾಗಿದ್ದಾರೆ ಎಂಬ ಭಾವನೆ ಅವರಿಗಿರುತ್ತದೆ ಎಂದು ಯಾರ್ಕ್ ವಿಶ್ವವಿದ್ಯಾಲಯದ ಸಹಾಯಕ ಪ್ರೊಫೆಸರ್ ಜೆನ್ನಿಫರ್ ಮಿಲ್ಸ್ ತಿಳಿಸಿದ್ದಾರೆ.

ವಿವಿಧ ಕ್ಷೇತ್ರಗಳ ಪದವಿಯಲ್ಲಿ ಓದುತ್ತಿರುವ 118 ಮಂದಿ ಯುವತಿಯರನ್ನು ಅಧ್ಯಯನಕ್ಕೊಳಪಡಿಸಲಾಯಿತು. ಕೆಲವರು ಅಧ್ಯಯನಕ್ಕೆ ಮೊದಲು ತಮ್ಮ ಬಗ್ಗೆ ಕೀಳರಿಮೆ ಹೊಂದಿಲ್ಲದಿದ್ದರೂ ಕೂಡ ಅಧ್ಯಯನ ಮುಗಿದ ಮೇಲೆ ಆ ಭಾವನೆ ಮೂಡಿರುವುದು ಕಂಡುಬಂತು. ಪ್ರಯೋಗಕ್ಕೆ ಆರು ವಾರಗಳ ಮೊದಲು ಆನ್ ಲೈನ್ ನಲ್ಲಿ ಭಾಗವಹಿಸಿದ ಯುವತಿಯರಿಗೆ ಅವರ ವಯಸ್ಸು, ಜನಾಂಗೀಯತೆ ಮತ್ತು ಶಿಕ್ಷಣಗಳ ಬಗ್ಗೆ ಕೇಳಲಾಯಿತು.
ನಂತರ ಪ್ರತಿಯೊಬ್ಬರಿಗೂ ತಮ್ಮ ನೋಟ, ದೈಹಿಕ ಭಾಷೆ, ಸೌಂದರ್ಯದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಎರಡು ಗುಂಪುಗಳನ್ನಾಗಿ ಮಾಡಿ ಒಂದು ಗುಂಪಿನವರಿಗೆ ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಹೊತ್ತು ತಮ್ಮ ಸ್ನೇಹಿತರ ಫೋಟೋಗಳನ್ನು ನೋಡಲು ಹೇಳಲಾಯಿತು. ಆಗ ಫೇಸ್ ಬುಕ್ ನಲ್ಲಿರುವ ಫೋಟೋಗಳು ತಮಗಿಂತ ಸುಂದರವಾಗಿ ಅವರಿಗೆ ಕಂಡುಬಂತು.

ಎರಡನೇ ಗುಂಪಿಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕುಟುಂಬ ಸದಸ್ಯರ ಫೋಟೋಗಳನ್ನು ನೋಡಿ ಏನನ್ನಿಸುತ್ತದೋ ಕಮೆಂಟ್ ಮಾಡಲು ಹೇಳಲಾಯಿತು. ಎರಡನೇ ಗುಂಪಿನವರಲ್ಲಿ ಹೆಚ್ಚು ಋಣಾತ್ಮಕ ಪರಿಣಾಮ ಬೀರಿದ್ದು ಕಂಡುಬರಲಿಲ್ಲ ಎನ್ನುತ್ತಾರೆ ಮಿಲ್ಸ್.

ಇನ್ನು ಸೋಷಿಯಲ್ ಮೀಡಿಯಾಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಯುವತಿಯರು ಮತ್ತು ಮಹಿಳೆಯರಿಗೆ ತಮ್ಮ ಫೋಟೋಗಳಿಗೆ ಹೆಚ್ಚು ಧನಾತ್ಮಕ ಕಮೆಂಟ್ ಗಳು ಸಿಗಬೇಕೆಂದು ಭಾವಿಸುತ್ತಾರೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಭಾವನೆ ಅಧಿಕ, 18ರಿಂದ 25 ವರ್ಷದವರಲ್ಲಿ ದೇಹ ಸೌಂದರ್ಯ ಮುಖ್ಯವಾಗುತ್ತದೆ. ಬೇರೆಯವರು ತಮ್ಮ ಬಗ್ಗೆ ಏನು ಹೇಳುತ್ತಾರೆ. ತಮ್ಮನ್ನು ಯಾವ ರೀತಿ ಸ್ವೀಕರಿಸುತ್ತಾರೆ ಎಂದು ಈ ವಯಸ್ಸಿನಲ್ಲಿ ತಲೆಕೆಡಿಸಿಕೊಳ್ಳುವುದು ಹೆಚ್ಚು ಎನ್ನುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com