ಕನಸಿನ ಉದ್ಯೋಗ ಬೇಕೇ? ಹಾಗಾದರೆ ಈ ಸಲಹೆಗಳನ್ನು ಅನುಸರಿಸಿ!

ಕನಸಿನ ಉದ್ಯೋಗವನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ? ಪ್ರತೀಯೊಬ್ಬರಿಗೂ ಕನಸಿನ ಉದ್ಯೋಗ ಎಂಬುದು ಇದ್ದೇ ಇರುತ್ತದೆ. ತಾವು ಕಂಡಿರುವ ಕನಸಿನಂತೆಯೇ ಕೆಲಸ ಮಾಡಬೇಕೆಂದು ಬಯುಸುತ್ತಾರೆ. ಅದರೆ, ಎಷ್ಟೋ ಜನಕ್ಕೆ ಇದು ಸಾಧ್ಯವಾಗುವುದಿಲ್ಲ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕನಸಿನ ಉದ್ಯೋಗವನ್ನು ಯಾರು ತಾನೆ ಬಯಸುವುದಿಲ್ಲ ಹೇಳಿ? ಪ್ರತೀಯೊಬ್ಬರಿಗೂ ಕನಸಿನ ಉದ್ಯೋಗ ಎಂಬುದು ಇದ್ದೇ ಇರುತ್ತದೆ. ತಾವು ಕಂಡಿರುವ ಕನಸಿನಂತೆಯೇ ಕೆಲಸ ಮಾಡಬೇಕೆಂದು ಬಯುಸುತ್ತಾರೆ. ಅದರೆ, ಎಷ್ಟೋ ಜನಕ್ಕೆ ಇದು ಸಾಧ್ಯವಾಗುವುದಿಲ್ಲ. ಸಿಗುವ ಉದ್ಯೋಗವನ್ನೇ ಮಾಡಿ ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು ಜೀವನವನ್ನು ಸಾಗಿಸುತ್ತಾರೆ. 
ಕನಸಿನ ಉದ್ಯೋಗ ಬಯಸುವ ಜನರು ಈ ಕೆಳಕಂಡ ಸಲಹೆಗಳನ್ನು ಅನುಸರಿಸುವುದರಿಂದ ಕನಸಿನ ನೌಕರಿಯನ್ನು ಪಡೆಯಬಹುದು. 
ಸಂದರ್ಶನಕ್ಕೆ ತೆರಳಿದ ವೇಳೆ ಮೊದಲು ಸಂದರ್ಶನಕಾರರ ಮನಗೆಲ್ಲಬೇಕು. ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು. ಅಂದರೆ, ನಿಮಗೆ ಆ ಉದ್ಯೋಗದ ಬಗ್ಗೆ ಇರುವ ಆಸಕ್ತಿ ಎಂಬುದನ್ನು ಅವರಿಗೆ ತಿಳಿಯುವಂತೆ ಮಾಡಬೇಕು.
ಸಂದರ್ಶನಕಾರರ ಮನಗೆಲ್ಲಲು ಇದಷ್ಟೇ ಸಾಲದು, ಸಂದರ್ಶನದ ವೇಳೆ ನೀವು ಹೇಗೆ ಕಾಣುತ್ತೀರಿ, ಯಾವ ರೀತಿಯ ಉಡುಪು ಧರಿಸುತ್ತೀರಿ, ಹೇಗೆ ಮಾತನಾಡುತ್ತೀರಿ ಹಾಗೂ ಹೇಗೆ ಉತ್ತರಿಸುತ್ತೀರಿ ಎಂಬುದು ಇಲ್ಲಿ ಮುಖ್ಯವಾಗುತ್ತದೆ. 
ಸಂದರ್ಶನಕ್ಕೆ ತಯಾರಿಯೇ ಅತ್ಯಂತ ಮುಖ್ಯ
ನಿರಂತರವಾದ ಅಭ್ಯಾಸ ಮಾಡುವುದರಿಂದ ಯಶಸ್ವಿಯಾಗಿ ಉದ್ಯೋಗವನ್ನು ಪಡೆದುಕೊಳ್ಳಬಹುದು. ಸಂದರ್ಶನಗಳಲ್ಲಿ ಮೊದಲ 30 ಸೆಕೆಂಡುಗಳು ಅತ್ಯಂತ ಮುಖ್ಯವಾದದ್ದು. ಈ ಅಲ್ಪ ಕಾಲದಲ್ಲಿಯೇ ಪರಿಣತ ಸಂದರ್ಶನಕಾರರು ನಿಮ್ಮ ವೇಷಭೂಷಣ ಹಾಗೂ ನಡೆನುಡಿಗಳಿಂದಲೇ ನಿಮ್ಮ ಒಟ್ಟಾರೆ ವ್ಯಕ್ತಿತ್ವವನ್ನು ಅಂದಾಜು ಮಾಡುತ್ತಾರೆ. ಹೀಗಾಗಿ ಸಹಜವಾದ ಮುಗುಳ್ನಗೆ, ಆತ್ಮವಿಶ್ವಾಸದಿಂದ ಸಂದರ್ಶನವನ್ನು ಎದುರಿಸಿ. 
ಆಂಗಿಕ ಭಾಷೆ
ಆಂಗಿಕ ಭಾಷಣೆ ಎಂದರೆ, ಶಾರೀರಿಕ ಹಾವ-ಭಾವದ ಮೂಲಕ ವ್ಯಕ್ತಿಯ ವಿಚಾರಧಾರೆಗಳನ್ನು ಬೇರೆಯವರಿಗೆ ತಲುಪಿಸುವುದೇ ಆಂಗಿಕ ಭಾಷೆಯಾಗಿದೆ. ಸಂದರ್ಶನದ ವೇಳೆ ನಮ್ಮ ಆಂಗಿಕ ಭಾಷೆ ಅತ್ಯಂತ ಮುಖ್ಯವಾಗಿರುತ್ತದೆ. ನಮ್ಮ ಉಡುಗೆ-ತೊಡೆಗೆಗಳು ಇಲ್ಲಿ ಮುಖ್ಯವಾಗುತ್ತದೆ. ಕಣ್ಣು ಕುಕ್ಕುವಂತಹ ಬಣ್ಣದ ಬಟ್ಟೆಗಳನ್ನು ತೊಡಬಾರದು. ಮನೋವಿಜ್ಞಾನಿಗಲು ಹೇಳುವಂತೆ ನಿಮ್ಮ ಮುಖದಲ್ಲಿನ ಭಾವಗಳಿಂದ ಸಂದರ್ಶಕರು ನಿಮ್ಮ ಮನಸ್ಸಿನ ಆಲೋಚನೆಗಳನ್ನು ಅರಿಯಬಲ್ಲರು. ಅಂದರೆ, ನಿಮ್ಮ ಉತ್ತರಗಳಲ್ಲಿ ಪ್ರಾಮಾಣಿಕತೆ ಇಲ್ಲದಿದ್ದಲ್ಲಿ ಪರಿಣತ ಸಂದರ್ಶಕರು ನಿಮ್ಮ ಹಾವಭಾವಗಳಿಂದ ನಿಜಾಂಶವನ್ನು ಅರಿಯುವ ಸಾಧ್ಯತೆಗಳು ಹೆಚ್ಚು. ಆದಾದರಿಂದ ನಿಮ್ಮ ದೇಹಭಾಷೆಗೂ, ನಿಮ್ಮ ಆಲೋಚನೆಗಳಿಗೂ ಸಾಮ್ಯತೆಯಿದ್ದು, ಸಂದರ್ಶನ ನಡೆಯುವಾಗ ನಿಮ್ಮ ದೇಹದ ನಿಲುವು ಮತ್ತು ಚಲನೆ, ನಿಮ್ಮೊಳಗಿನ ಸಕಾರಾತ್ಮಕ ಆಲೋಚನೆಗಳಿಗೆ ಪೂರಕವಾಗಿರಲಿ. 
ಉಡುಗೆ ತೊಡುಗೆ
ಸಂದರ್ಶನದ ವೇಳೆ ಕಣ್ಣಿಗೆ ರಾಚುವಂತಹ ಬಟ್ಟೆಗಳನ್ನು ತೊಡಬಾರದು. ಯಾವ ಯಾವ ಸ್ಥಳಗಳಿಗೆ ಹೇಗೆ ಹೋಗಬೇಕೋ ಹಾಗೆ ಹೋದರೆ ಉತ್ತಮವಾಗಿರುತ್ತದೆ. ನಮ್ಮ ಉಡುಗು ತೊಡುಗೆಗಳು ನಮ್ಮ ನಡವಳಿಕೆಯನ್ನು ಹೇಳುತ್ತದೆ ಎಂದು ಹೇಳುತ್ತಾರೆ. ಯಾವುದೇ ರೀತಿಯ ಪರಿಸ್ಥಿತಿಯಲ್ಲಿಯೂ ನಿಮ್ಮ ಆತ್ಮವಿಶ್ವಾಸವನ್ನು ಮಾತ್ರ ಕುಗ್ಗಿಸಿಕೊಳ್ಳಬೇಡಿ. ನೀವು ಉಡುವ ಬಟ್ಟೆ ನಿಮಗೆ ಆರಾಮದಾಯಕವಾಗಿರಬೇಕೇ ವಿನಃ ತ್ರಾಸ ಎಂದೆನಿಸಬಾರದು. ಸಂದರ್ಶನಕ್ಕೆ ತೆರಳುವುದಕ್ಕೂ ಮುನ್ನ ಅಭ್ಯಾಸ ಮಾಡಿ. 
ನಿಮ್ಮ ಉತ್ತರ ಆಕರ್ಷವಾಗಿರಲಿ
ಆಗಾಗ ಸಂದರ್ಶನಗಳಿಗೆ ಹೋಗುತ್ತಿರಬೇಕು. ಇದರಿಂದ ನಮ್ಮ ಆತ್ಮವಿಶ್ವಾಸಗಳು ಹೆಚ್ಚುತ್ತದೆ. ಸಂದರ್ಶನಕ್ಕೆ ತೆರಳಿದ ಸಂದರ್ಭದಲ್ಲಿ ಸಂದರ್ಶನಕಾರರು ಮೊದಲು ಕೇಳುವ ಪ್ರಶ್ನೆಯೇ ನಿಮ್ಮ ಬಗ್ಗೆ ಹೇಳಿ ಎಂದು. ಈ ವೇಳೆ ನಿಮ್ಮ ಉತ್ತರ ಆಕರ್ಷವಾಗಿರಬೇಕು. ನೀವು ಯಾರು? ಯಾವುದರಲ್ಲಿ ನೀವು ಹೆಚ್ಚು ಪರಿಣಿತರು? ಸಂದರ್ಶನಕ್ಕೆ ಬಂದಿರುವ ಕಾರಣವೇನು? ಎಂಬುದನ್ನು ಹೇಳಬೇಕು. ಇವುಗಳ ಹೇಳುವಾಗ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ ಎಂಬಂತೆ ಚೊಕ್ಕವಾಗಿ ಹೇಳಬೇಕು. ನಿಮ್ಮ ದೌರ್ಬಲ್ಯವೇನು ಎಂಬ ಪ್ರಶ್ನೆಯನ್ನು ಇದ್ದಕ್ಕಿದ್ದಂತೆ ಕೇಳುತ್ತಾರೆ. ಇದಕ್ಕೂ ನಿಮ್ಮ ಬಳಿ ಉತ್ತರ ಸಿದ್ಧವಿರಬೇಕು. 
ಪೂರ್ವ ತಯಾರಿ ನಡೆಸಿರಿ
ಸಂದರ್ಶನಕ್ಕೆ ತೆರಳುವುದಕ್ಕೂ ಮುನ್ನ ಮನೆಯಲ್ಲಿಯೇ ತಯಾರಿ ನಡೆಸಿರಿ. ಕಂಪನಿ ಹಾಗೂ ಸಂಸ್ಥೆ ಬಗ್ಗೆ ನಿಮಗೆ ತಿಳಿದಿರಲಿ. ಕಂಪನಿ ಬಗ್ಗೆ ಹಾಗೂ ಅದರ ಮಾರುಕಟ್ಟೆ ಬಗ್ಗೆ ಮೊದಲೇ ತಿಳಿದು ಸಂದರ್ಶನಕ್ಕೆ ತೆರಳಿರಿ. ಇದರಿಂದ ಕಂಪನಿಯ ಕೆಲಗಳು ಹೇಗೆ ಸಾಗುತ್ತವೆ ಎಂಬುದರ ಕೊಂಚ ಅರಿವು ನಿಮಗಿರುತ್ತದೆ. ಇದಾದ ಬಳಿಕ ನಮ್ಮ ವಿದ್ಯಾರ್ಹತೆ ಹಾಗೂ ನಿಮ್ಮಲ್ಲಿರುವ ಸಾಮರ್ಥ್ಯವನ್ನು ಹೋಲಿಕೆ ಮಾಡಿ. ಮೊದಲೇ ಸಿದ್ಧತೆ ನಡೆಸಿದ್ದರೆ, ಸಂದರ್ಶನದ ವೇಳೆ ಯಾವುದೇ ರೀತಿಯ ಭಯಗಳಿರುವುದಿಲ್ಲ. ಇದು ನಿಮ್ಮಲ್ಲಿರುವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಸಂದರ್ಶನ ಮುಗಿದ ಬಳಿಕ ಸಂದರ್ಶನಕಾರರ ಕೈ ಕುಲುಕಿ, ಧನ್ಯವಾದ ಹೇಳಿ ಹೊರ ಬನ್ನಿ. ಇದರಿಂದ ಸಂದರ್ಶನಕಾರರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುವಂತೆ ಮಾಡುತ್ತದೆ.                    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com