ಯೋಗ-ಜ್ಞಾನಿಗಳು ಕಂಡಂತೆ

ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಭ್ಯುದಯವೇ ಯೋಗ’ ಸಂಸ್ಕೃತದ ಯುಜ್ ಧಾತುವಿನಿಂದ ಉಂಟಾದ ಶಬ್ದವೇ ಯೋಗ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಬೆಂಗಳೂರು: ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಅಂದರೆ ದೈಹಿಕ, ಮಾನಸಿಕ, ಬೌದ್ಧಿಕ, ಭಾವನಾತ್ಮಕ ಹಾಗೂ ಆಧ್ಯಾತ್ಮಿಕ ಅಭ್ಯುದಯವೇ ಯೋಗ’ ಸಂಸ್ಕೃತದ ಯುಜ್ ಧಾತುವಿನಿಂದ ಉಂಟಾದ ಶಬ್ದವೇ ಯೋಗ.
ಗರ್ಭದಲ್ಲಿ ಶಿಶು ಬೆಳೆಯುತ್ತಿರುವಾಗಲೂ, ಹೊರಬಂದ ನಂತರವೂ ಒಂದಿಲ್ಲೊಂದು ವಿಧದಲ್ಲಿ ಕೈಕಾಲು ಬಡಿಯುತ್ತ ಕ್ರಿಯಾಶೀಲವಾಗಿರುತ್ತದೆ, ಆರೇಳು ವರ್ಷದವರೆಗೂ ತನಗೆ ಗೊತ್ತಿಲ್ಲದೆಯೇ ವಜ್ರಾಸನ, ಪದ್ಮಾಸನದಲ್ಲಿ ಕೂರುತ್ತದೆ.  ಶೀರ್ಷಾಸನ ಮಾಡುತ್ತಿರುತ್ತದೆ ಎಂಬುದು ಗಮನಿಸಬೇಕಾದ ಅಂಶ. ಆದರೆ ಬೆಳೆದಂತೆ ಸೋಮಾರಿಗಳಾಗಿಬಿಡುತ್ತವೆ. ಹೀಗಾಗಿ ಅಜ್ಞಾನದಿಂದ ಅರಿವಿನೆಡೆಗೆ ಬರಲು ಯೋಗ ಅಗತ್ಯವಾಗುತ್ತದೆ. 
ದ್ವಾಪರಯುಗದಲ್ಲಿ ನಡೆದ ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅರ್ಜುನನಿಗೆ ಗೀತೋಪದೇಶ ಮಾಡುವ ನೆಪದಲ್ಲಿ ಯೋಗದ ಮಹತ್ವ ಸಾರಿದ್ದು, ‘ಸಮತ್ವಂ ಯೋಗಮುಚ್ಯತೇ’ ಎಂದು ಹೇಳಿದ್ದಾನೆ. 
ಇನ್ನು ಮಹಾಯೋಗಿ ಪತಂಜಲಿಯವರು ‘ಯೋಗಃ ಚಿತ್ತ ವೃತ್ತಿ ನಿರೋಧಃ’ ಎಂದು ಬಣ್ಣಿಸಿದ್ದಾರೆ.  ಮನುಷ್ಯ ಭೂಮಿ ಮೇಲೆ ಎಷ್ಟು ವರ್ಷಗಳಾದರೂ ಬದುಕಿರಲಿ, ಇರುವಷ್ಟು ಕಾಲ ಆರೋಗ್ಯದಿಂದಿರಲಿ ಎಂಬ ಕಾರಣಕ್ಕೆ ಯೋಗ ಅಥವಾ ಇನ್ನಿತರ ವ್ಯಾಯಾಮಗಳನ್ನು ರೂಪಿಸಲಾಗಿದೆ. 
ಯೋಗಾ ವಾಸಿಷ್ಠದಲ್ಲಿ ವಸಿಷ್ಠರು ‘ಯೋಗಃ ಮನಃಪ್ರಶಮನೋಪಾಯಃ’ ಎಂದು ಹೇಳಿದ್ದಾರೆ,. ಮನ ಏವ ಮನುಷ್ಯಾಣಾಂ ಕಾರಣ ಬಂಧ ಮೋಕ್ಷಯೋಃ ಎಂಬುದು ಜ್ಞಾನಿಗಳ ಅಂಬೋಣ.  ಚಂಚಲತೆಯಿಂದ ಕೂಡಿರುವ ಮನಸ್ಸನ್ನು ಆಯಾ ಕೆಲಸಗಳಲ್ಲಿ ಸ್ಥಿರಗೊಳಿಸಲು ಯೋಗದಿಂದ ಸಾಧ್ಯ. 
ಹಿಂದೆ ಹಳ್ಳಿ ಹಳ್ಳಿಗಳಲ್ಲೂ ‘ಗರಡಿ ಮನೆ’ಗಳಿರುತ್ತಿದ್ದವು. ಯುವಕರಿಗೆ ವ್ಯಾಯಾಮ ಕಡ್ಡಾಯವಾಗಿತ್ತು. ಈಗಲೂ ಹಲವೆಡೆ ಗರಡಿ ಮನೆಗಳನ್ನು ಕಾಣಬಹುದಾದರೂ, ಜಿಮ್, ಏರೋಬಿಕ್ ಕೇಂದ್ರಗಳು ಆ ಜಾಗವನ್ನು ಆಕ್ರಮಿಸಿಕೊಂಡಿವೆ.  ಯೋಗದ ಮಹತ್ವ ಎಲ್ಲೆಡೆ ಪ್ರಚಾರವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕೇಂದ್ರಗಳಲ್ಲೂ ಯೋಗಾಭ್ಯಾಸವನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ.
ಜೋಲು ಮೋರೆಯ, ಚಿತ್ತದ ಮೇಲೆ ನಿಯಂತ್ರಣವಿಲ್ಲದವರು ಎಲ್ಲೇ ಕೆಲಸ ಮಾಡಿದರೂ ಎಡವಟ್ಟು ಖಚಿತ.  ಹೀಗಾಗಿಯೇ ಕಟ್ಟುಮಸ್ತಾದ ಯುವ ಪಡೆ ರೂಪುಗೊಳ್ಳಬೇಕು ಎಂಬುದು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಬಯಕೆಯಾಗಿತ್ತು. 
ಯೋಗ ಧರ್ಮಾತೀತವಾಗಿದ್ದು, ಅದೊಂದು ಜೀವನ  ದರ್ಶನ. ಯೋಗವು ವಿವಿಧ ಬಗೆಯ ಆಸನಗಳ ಜೊತೆಗೆ ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವ ಪ್ರಾಣಾಯಾಮವನ್ನು ಒಳಗೊಂಡಿದೆ. ಯೋಗದ ಮಹತ್ವದ ಬಗ್ಗೆ ಅನಾದಿಕಾಲದಿಂದಲೂ ಯೋಗಿಗಳು ಸಾರಿದ್ದಾರಾದರೂ, ಪೀಳಿಗೆಯಿಂದ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.  
ಜೂನ್ 21ರಂದು ಐದನೇ ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ಇಡೀ ವಿಶ್ವವೇ ಅದರ ತಯಾರಿಯಲ್ಲಿದೆ.  ಈ ನಿಟ್ಟಿನಲ್ಲಿ ಯುಎನ್ಐ ಕನ್ನಡ ಸುದ್ದಿಸಂಸ್ಥೆಯು ಇಂದಿನಿಂದ 10 ದಿನಗಳ ಕಾಲ ಯೋಗ ಸಾಧಕರು, ಯೋಗಿಗಳು ಹಾಗೂ ಯೋಗದ ಮಹತ್ವದ ಕುರಿತು ಒಂದಿಷ್ಟು ಬೆಳಕು ಚೆಲ್ಲುವ ಪ್ರಯತ್ನ ಮಾಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com