ಗರ್ಭಾವಸ್ಥೆಯ ಮಧುಮೇಹ ತಾಯಿ ಮತ್ತು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಆರೋಗ್ಯಕರ ಮಗು ಬಯಸುವ ಗರ್ಭಿಣಿಯರು ಪ್ರಸವಪೂರ್ವ ಸಮಯದಲ್ಲಿ ಸಮತೋಲನ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಒಂದು ವೇಳೆ ಈ ಪೌಷ್ಠಿಕಾಂಶಗಳ ಕೊರತೆ ಎದುರಾಗಿದ್ದೇ ಆದರೆ, ಅನೇಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಆರೋಗ್ಯಕರ ಮಗು ಬಯಸುವ ಗರ್ಭಿಣಿಯರು ಪ್ರಸವಪೂರ್ವ ಸಮಯದಲ್ಲಿ ಸಮತೋಲನ ಪೋಷಕಾಂಶಗಳನ್ನು ತೆಗೆದುಕೊಳ್ಳುವುದು ಅತ್ಯಂತ ಮುಖ್ಯವಾಗಿದ್ದು, ಒಂದು ವೇಳೆ ಈ ಪೌಷ್ಠಿಕಾಂಶಗಳ ಕೊರತೆ ಎದುರಾಗಿದ್ದೇ ಆದರೆ, ಅನೇಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. 

ಆ ಅಡ್ಡ ಪರಿಣಾಮಗಳಲ್ಲಿ ಒಂದು ಮಧುಮೇಹ. ಹೌದು, ಗರ್ಭಾವಸ್ಥೆಯಲ್ಲಿ ಮೊದಲ ಬಾರಿಗೆ ಪರೀಕ್ಷೆ ಮಾಡಿಸಿದಾಗ ಇದು ಕಂಡುಬರುತ್ತದೆ. ಸಾಮಾನ್ಯವಾಗಿ ಇದು ಗರ್ಭಾವಸ್ಥೆಯ 20 ರಿಂದ 24ನೇ ವಾರಗಳ ನಡುವೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದನ್ನು ಗರ್ಭಾವಸ್ಥೆಯ ಮಧುಮೇಹ ಎನ್ನುತ್ತಾರೆ. 

ಗರ್ಭಾವಸ್ಥೆಯ ಮಧುಮೇಹದಿಂದ ಉಂಟಾಗುವ ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣವು ನಿಮ್ಮ ಗರ್ಭಧಾರಣೆ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಹಾನಿಗೊಳಿಸುತ್ತದೆ.

ಇದು ಗರ್ಭಾವಸ್ಥೆಯ ಮುಂಚೆ ಇರದ ಮಹಿಳೆಯರಲ್ಲೂ ಕಾಣಿಸಿಕೊಳ್ಳಬಹುದು. ಹಾಗೆಯೇ ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಂಡರೆ ಅದು ಡೆಲಿವರಿಯ ನಂತರವೂ ಉಳಿಯುತ್ತದೆ ಎಂದು ಅರ್ಥ ಅಲ್ಲ. ಕೆಲವು ಮಹಿಳೆಯರಲ್ಲಿ ಪ್ರಸವದ ಬಳಿಕ ಈ ಸಮಸ್ಯೆ ದೂರಾಗುವ ಸಾಧ್ಯತೆಗಳಿವೆ. 

ಮಧುಮೇಹದ ಕಾರಣದಿಂದ ಮಗುವಿನ ತೂಕ ಅಗತ್ಯಕ್ಕಿಂತ ಹೆಚ್ಚಾಗಿ ಹೆರಿಗೆಯ ಸಮಯದಲ್ಲಿ ಸಮಸ್ಯೆ ಉಂಟಾಗಬಹುದು ಮತ್ತು ಮಗುವಿನ ಗಾತ್ರದ ಕಾರಣ ಸೀಸೆರಿಯನ್ ಮಾಡಬೇಕಾಗಬಹುದು. ರಕ್ತದಲ್ಲಿ ಹೆಚ್ಚಾದ ಸಕ್ಕರೆ ಪ್ರಮಾಣದ ಕಾರಣ ಕಿಡ್ನಿ ಸಂಭಂದಿಸಿದ ಸಮಸ್ಯೆಗಳು ಮತ್ತು ಸೆಳೆವು ಕಾಣಿಸಿಕೊಳ್ಳಬಹುದು. ಈ ಮಹಿಳೆಯರಲ್ಲಿ ಜನನಾಂಗಗಳ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಮಧುಮೇಹದ ಕಾರಣದಿಂದ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಗಳು ಹೆಚ್ಚು.

ಸಿ-ಸೆಕ್ಷನ್
ನೀವು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿದ್ದರೆ, ಸಿ- ಸೆಕ್ಷನ್ ಹೊಂದುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತದೆ.

ಭವಿಷ್ಯದಲ್ಲಿ ಮಧುಮೇಹ ಸಾಧ್ಯತೆ
ನೀವು ಈ ಮೊದಲೂ ಗರ್ಭಾವಸ್ಥೆಯ ಮಧುಮೇಹ ಹೊಂದಿದ್ದರೆ, ಭವಿಷ್ಯದಲ್ಲಿ ನಿಮಗೆ ಮತ್ತೆ ಬರುವ ಸಾಧ್ಯತೆ ಹೆಚ್ಚು. ವಯಸ್ಸಾದಂತೆ, ಟೈಪ್ 2 ಡಯಾಬಿಟಿಸ್ ಬೆಳವಣಿಗೆಯ ಸಾಧ್ಯತೆಗಳು ಹೆಚ್ಚಾಗುತ್ತವೆ.

ಪ್ರಿಕ್ಲಾಂಪ್ಸಿಯಾ ಮತ್ತು ಅಧಿಕ ರಕ್ತದೊತ್ತಡ
ಗರ್ಭಾವಸ್ಥೆಯ ಮಧುಮೇಹವು ಅಧಿಕ ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯಾದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಧಾರಣೆ ತೊಡಕು ಉಂಟಾದರೆ ಅಧಿಕ ರಕ್ತದೊತ್ತಡ ಮತ್ತು ಇತರ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಅದು ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ.

ಇದು ತಾಯಿಯ ಮೇಲಾಗುವ ಪರಿಣಾಮಗಳಾದರೆ, ಮಗುವಿನ ಮೇಲಾಗುವ ಪರಿಣಾಮಗಳು ಈ ಕೆಳಕಂಡಂತಿವೆ...

ಜನನದ ಸಮಯದಲ್ಲಿ ಅಧಿಕ ತೂಕ 
ತಾಯಂದಿರಲ್ಲಿ ಸರಾಸರಿಗಿಂತ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿದ್ದರೆ, ಮಗು ತುಂಬಾ ದೊಡ್ಡದಾಗಿ ಬೆಳೆಯಲು ಕಾರಣವಾಗಬಹುದು. ದೊಡ್ಡ ಶಿಶುಗಳು 9 ಪೌಂಡ್‌ಗಳಿಗಿಂತ ಹೆಚ್ಚು ತೂಕವಿದ್ದರೆ, ಹೊರಬರಲು ಸಾಕಷ್ಟು ತೊಡಕುಂಟಾಗಬಹುದು. ಆಗ ಸಿ-ಸೆಕ್ಷನ್ ಅಗತ್ಯವಿರುತ್ತದೆ.

ಅಕಾಲಿಕ ಜನನ
ರಕ್ತದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿದ್ದರೆ, ಅವಧಿಪೂರ್ವ ಶಿಶುವಿನ ಜನನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಅಂದರೆ ವೈದ್ಯರು ಕೊಟ್ಟಿರುವ ದಿನಾಂಕದ ಮೊದಲೇ ಮಗುವಿಗೆ ಮಹಿಳೆ ಜನ್ಮ ನೀಡುತ್ತಾಳೆ. ಏಕೆಂದರೆ ಮಗು ದೊಡ್ಡದಾಗಿರುವುದರಿಂದ, ನಿಗದಿತ ದಿನಾಂಕಕ್ಕಿಂತ ಮೊದಲೇ ಹೆರಿಗೆಗೆ ಸಲಹೆ ನೀಡಬಹುದು.

ಹೈಪೊಗ್ಲಿಸಿಮಿಯಾ
ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಹೈಪೊಗ್ಲಿಸಿಮಿಯಾ ಸಮಸ್ಯೆ ಅನುಭವಿಸಬಹುದು. ತೀವ್ರವಾದ ಹೈಪೊಗ್ಲಿಸಿಮಿಯಾ ಶಿಶು ರೋಗಗ್ರಸ್ತವಾಗುವಿಕೆಗಳಿಗೆ ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ಮಗುವಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅತ್ಯುತ್ತಮ ಆಹಾರ ಕೊಡುವ ಮೂಲಕ ಸಾಮಾನ್ಯ ಸ್ಥಿತಿಗೆ ತರಬಹುದು. ತಾಯಂದಿರು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿದ್ದರೆ ಮಗುವಿನ ಜೀವನದಲ್ಲಿ ಮುಂದೆ ಬೊಜ್ಜು ಮತ್ತು ಟೈಪ್ 2 ಡಯಾಬಿಟಿಸ್ ಬೆಳವಣಿಗೆಯಾಗಬಹುದು.

ಮಗುವಿನ ಸಾವು ಸಾಧ್ಯತೆ
ಗರ್ಭಾವಸ್ಥೆಯ ಮಧುಮೇಹವು ಮಗುವಿನ ಸಾವಿಗೂ ಕಾರಣವಾಗಬಹುದು. ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಮುಖ್ಯವಾಗುತ್ತದೆ. 

ಗರ್ಭಾವಸ್ಥೆಯ ಮಧುಮೇಹ ತಡೆಯುವುದು ಹೇಗೆ?

ಆರೋಗ್ಯಕರ ಆಹಾರ ಸೇವನೆ
ಗರ್ಭಧರಿಸಿದ ಸಂದರ್ಭಧಲ್ಲಿ ಪೌಷ್ಠಿಕಾಂಶ ಇರುವ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡಿ. ಕೊಬ್ಬು ಮತ್ತು ಕ್ಯಾಲೊರಿ ಕಡಿಮೆ ಇರುವ ಫೈಬರ್ ಭರಿತ ಆಹಾರವನ್ನು ಆರಿಸಿ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಿಗೆ ಹೆಚ್ಚು ಆದ್ಯತೆ ನೀಡಿ.

ಚುರುಕಿನಿಂದ ಇರಿ, ವ್ಯಾಯಾಮ ಮಾಡಿ
ಗರ್ಭಿಣಿಯವರು ಮೊದಲ ಮೂರು ತಿಂಗಳ ಬಳಿಕ ಹೆಚ್ಚು ಚುರುಕಿನಿಂದ ಕೆಲಸ ಮಾಡಬೇಕು. ನಿಮ್ಮ ಗರ್ಭಧಾರಣೆಯ ಮೊದಲು ಮತ್ತು ನಂತರ ವ್ಯಾಯಾಮ ಮಾಡುವುದು ಗರ್ಭಧಾರಣೆಯ ಮಧುಮೇಹವನ್ನು ತಪ್ಪಿಸಲು ಸಹಾಯ ಮಾಡುತ್ತದೆ. ವಾರದ ಹಚ್ಚಿನ ದಿನಗಳು 30 ನಿಮಿಷಗಳ ಕಾಲ ಮಧ್ಯಮ ವ್ಯಾಯಾಮ ನಿಮ್ಮ ಗುರಿಯಾಗಿರಬೇಕು. ಪ್ರತಿದಿನ ಚುರುಕಾಗಿ ಅಡ್ಡಾಡಬೇಕು.

​ಆರೋಗ್ಯಕರ ತೂಕ ಹೊಂದಿ
ನೀವು ಗರ್ಭಿಣಿಯಾಗುವ ಬಗ್ಗೆ ಯೋಚಿಸುತ್ತಿದ್ದರೆ ಮುಂಚಿತವಾಗಿ ತೂಕವನ್ನು ಕಳೆದುಕೊಳ್ಳುವುದು ಆರೋಗ್ಯಕರ ಗರ್ಭಧಾರಣೆಗೆ ನಿಮಗೆ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ತೂಕವನ್ನು ಹೆಚ್ಚಿಸುವುದು ನೈಸರ್ಗಿಕ ಮತ್ತು ಸುರಕ್ಷಿತ. ಆದರೆ ಬೇಗನೆ ಹೆಚ್ಚು ತೂಕವನ್ನು ಹೆಚ್ಚಿಸುವುದರಿಂದ ಗರ್ಭಧಾರಣೆಯ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚಾಗಬಹುದು. ಆದ್ದರಿಂದ ಎಷ್ಟು ತೂಕವನ್ನು ಪಡೆಯಬಹುದು ಎಂಬುದರ ಕುರಿತು ತಜ್ಞ ವೈದ್ಯರೊಂದಿಗೆ ಸಮಾಲೋಚಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com