ಪ್ರತಿದಿನ ಸೇಬು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತೇ? ಸೇವನೆಗೆ ಬೆಸ್ಟ್ ಟೈಂ ಯಾವುದು?

ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಸೇಬು ಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನೋಡುವುದಕ್ಕೆ ಆರ್ಷಕವಾಗಿರುವ, ತಿನ್ನುವುದಕ್ಕೂ ರುಚಿಯಾಗಿರುವ ಸೇಬು ಹಣ್ಣು, ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರು ಈ ಸೇಬು ಹಣ್ಣನ್ನು ಇಷ್ಟ ಪಟ್ಟು ತಿನ್ನುತ್ತಾರೆ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರ ಇರಬಹುದು ಎಂಬ ನಾಣ್ಣುಡಿ ನಮಗೆಲ್ಲಾ ಚಿರಪರಿಚಿತವಾಗಿದೆ. ಇದು ನಿಜವಾದರೂ ಇದನ್ನು ಪಾಲಿಸಿಕೊಂಡು ಹೋಗುವವರು ತುಂಬಾ ಕಡಿಮೆ. ಸೇಬಿನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು.

ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪೊಟಾಶಿಯಂ ಇದೆ. ಸೇಬು ಹಣ್ಣು ಸೇವಿಸುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.

ಹೃದಯದ ಆರೋಗ್ಯ ವೃದ್ಧಿಸುತ್ತದೆ
ಸೇಬು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ತಗ್ಗಿಸಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಮತ್ತು ಪಾಲಿಫೆನಾಲ್ ಅಂಟಿ ಆಕ್ಸಿಡೆಂಟುಗಳಿದ್ದು ಹೃದಯದ ಆರೋಗ್ಯ ವೃದ್ದಿಸುತ್ತದೆ ಹಾಗೂ ರಕ್ತದ ಒತ್ತಡವನ್ನು ಕಡಿಮೆಗೊಳಿಸುತ್ತದೆ. ಒಂದು ಅಧ್ಯಯನದ ಪ್ರಕಾರ ಸೇಬಿನ ಸೇವನೆಯಿಂದ ಹೃದಯದ ಸ್ತಂಭನದ ಸಾಧ್ಯತೆ ತಗ್ಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ
ಸೇಬಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇರುವ ಕಾರಣ ಹೆಚ್ಚು ಹೊತ್ತಿನವರೆಗೆ ಹೊಟ್ಟೆ ತುಂಬಿದ ಭಾವನೆ ಮೂಡಿಸಿ ಅನಗತ್ಯ ಆಹಾರ ಸೇವನೆಯಿಂದ ತಡೆಯುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಊಟಕ್ಕೂ ಮೊದಲು ಕೆಲವು ಸೇಬಿನ ತುಂಡುಗಳನ್ನು ಸೇವಿಸಿದ ವ್ಯಕ್ತಿಗಳು ಊಟಕ್ಕೂ ಮೊದಲು ಸೇಬಿನ ಸಾಸ್ ಅಥವಾ ಸೇಬಿನ ರಸವನ್ನು ಸೇವಿಸಿದಕ್ಕಿಂತಲೂ ಹೆಚ್ಚಾಗಿ ಹೊಟ್ಟೆ ತುಂಬಿದ್ದ ಭಾವನೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನೊಂದು ಅಧ್ಯಯನದ ಪ್ರಕಾರ ಐವತ್ತು ಸ್ಥೂಲದೇಹಿ ಮಹಿಳೆಯರಲ್ಲಿ ಸೇಬನ್ನು ಮತ್ತು ಕಡಿಮೆ ಕ್ಯಾಲೋರಿಗಳನ್ನು ಸೇವಿಸಿದವರು ಓಟ್ಸ್ ಕುಕ್ಕೀಸ್ ಸೇವಿಸಿದ ಮಹಿಳೆಯರಿಗಿಂತಲೂ ಸರಾಸರಿ ಒಂದು ಕೇಜಿ ತೂಕ ಕಳೆದುಕೊಂಡಿದ್ದಾರೆ.

ಮಧುಮೇಹದ ಸಾಧ್ಯತೆ ತಗ್ಗಿಸುತ್ತದೆ
ಸೇಬಿನಲ್ಲಿರುವ ಪಾಲಿಫೆನಾಲ್ ಆಂಟಿ ಆಕ್ಸಿಡೆಂಟುಗಳು ಮಧುಮೇಹ ಆವರಿಸುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಮೇದೋಜೀರಕ ಗ್ರಂಥಿಯಲ್ಲಿರುವ ಬೀಟಾ ಜೀವಕೋಶಗಳ ನಷ್ಟವಾಗುವಿಕೆಯನ್ನು ಈ ಆಂಟಿ ಆಕ್ಸಿಡೆಂಟುಗಳು ತಡೆಯುತ್ತವೆ. ಮೇದೋಜೀರಕ ಗ್ರಂಥಿಯಲ್ಲಿ ಇನ್ಸುಲಿನ್ ಉತ್ಪಾದಿಸುವುದು ಈ ಜೀವಕೋಶಗಳ ಮುಖ್ಯ ಕಾರ್ಯವಾಗಿದೆ. ಸಾಮಾನ್ಯವಾಗಿ ಟೈಪ್2 ಮಧುಮೇಹವಿರುವ ವ್ಯಕ್ತಿಗಳಲ್ಲಿ ಈ ಜೀವಕೋಶಗಳು ಸಾಮಾನ್ಯವಾಗಿ ಘಾಸಿಗೊಂಡಿರುತ್ತವೆ.

ಕ್ಯಾನ್ಸರ್ ನಿಂದ ರಕ್ಷಿಸುತ್ತದೆ
ಸೇಬಿನಲ್ಲಿರುವ ರಕ್ಷಣಾರಾಸಾಯನಿಕಗಳು ಅಥವಾ ಫೈಟೋ ಕೆಮಿಕಲ್ಸ್ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯನ್ನು ತಗ್ಗಿಸುತ್ತವೆ. ಒಂದು ಸಂಶೋಧನೆಯಲ್ಲಿ ನಿತ್ಯವೂ ಸೇಬನ್ನು ಸೇವಿಸುವ ಮಹಿಳೆಯರ ಆರೋಗ್ಯದ ಮಾಹಿತಿಗಳನ್ನು ವಿಶ್ಲೇಷಿಸಿ ಇವರಲ್ಲಿ ಕ್ಯಾನ್ಸರ್ ನಿಂದ ಸಾವಿಗೀಡಾದವರ ಸಂಖ್ಯೆ ಕಡಿಮೆಯಿದೆ ಎಂದು ವಿವರಿಸಲಾಗಿದೆ. ಇನ್ನೊಂದು ಅಧ್ಯಯನದಲ್ಲಿ ನಿತ್ಯವೂ ಕನಿಷ್ಟ ಒಂದು ಸೇಬು ಸೇವಿಸಿದ ಮಹಿಳೆಯರಲ್ಲಿ ಸ್ತನ ಮತ್ತು ಕರುಳಿನ ಕ್ಯಾನ್ಸರ್ ಆವರಿಸುವ ಸಾಧ್ಯತೆ ಕ್ರಮವಾಗಿ ಶೇ.18 ಮತ್ತು ಶೇ.20 ರಷ್ಟು ತಗ್ಗಿರುವುದನ್ನು ಗಮನಿಸಲಾಗಿದೆ.

ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತದೆ
ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟುಗಳಲ್ಲಿ ಒಂದಾದ ಕ್ವೆರ್ಸಟಿನ್ (Quercetin) ನ್ಯೂರಾನ್ ಗಳಲ್ಲಿ ಉರಿಯೂತ ಮತ್ತು ಆಕ್ಸಿಡೀಕರಣ ದಿಂದ ಎದುರಾಗುವ ಜೀವಕೋಶಗಳ ಸಾವನ್ನು ಕಡಿಮೆಗೊಳಿಸುತ್ತದೆ. ಸೇಬಿನ ರಸವನ್ನು ಸೇವಿಸುವ ಮೂಲಕ ಮೆದುಳಿನಲ್ಲಿ ಅಸಿಟೈಲ್ ಕೋಲೈನ್ ಎಂಬ ನ್ಯೂರೋಟ್ರಾನ್ಸ್ಮಿಟರ್ ಅಥವಾ ನರಪ್ರೇಕ್ಷಕದ ಉತ್ಪಾದನೆ ಹೆಚ್ಚುತ್ತದೆ, ತನ್ಮೂಲಕ ಸ್ಮರಣಶಕ್ತಿ ಹೆಚ್ಚುತ್ತದೆ ಹಾಗೂ ಅಲ್ಜೀಮರ್ಸ್ ಕಾಯಿಲೆಯ ಸಾಧ್ಯತೆಯನ್ನು ತಗ್ಗಿಸುತ್ತದೆ.

ಅಸ್ತಮಾ ವಿರುದ್ಧ ಹೋರಾಡಲು ನೆರವಾಗುತ್ತದೆ
ಸೇಬಿನಲ್ಲಿ ಆಂಟಿ ಆಕ್ಸಿಡೆಂಟುಗಳು ಸಮೃದ್ದವಾಗಿದ್ದು ಅಸ್ತಮಾ ಕಡಿಮೆಗೊಳಿಸುವಲ್ಲಿ ತಮ್ಮ ನೆರವನ್ನು ನೀಡುತ್ತವೆ. ಒಂದು ಅದ್ಯಯನದ ಪ್ರಕಾರ ನಿತ್ಯವೂ ಶೇಖಡಾ ಹದಿನೈದರಷ್ಟು ಒಂದು ದೊಡ್ಡ ಸೇಬು ಹಣ್ಣನ್ನು ಸೇವಿಸುವ ಮೂಲಕ ಅಸ್ತಮಾ ಆವರಿಸುವ ಸಾಧ್ಯತೆಯಲ್ಲಿ ಹತ್ತು ಶೇಖಡಾ ಇಳಿಕೆಯಾಗಿರುವುದು ಕಂಡುಬಂದಿದೆ.

ಮೂಳೆಗಳ ಆರೋಗ್ಯವನ್ನು ವೃದ್ಧಿಸುತ್ತದೆ
ಸಂಶೋಧಕರು ನಂಬುವ ಪ್ರಕಾರ ಸೇಬಿನಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಸಂಯುಕ್ತಗಳು ಮೂಳೆಗಳ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತವೆ. ಒಂದು ಅಧ್ಯಯನದ ಪ್ರಕಾರ ತಮ್ಮ ಆಹಾರದಲ್ಲಿ ತಾಜಾ ಸೇಬು, ಸೇಬಿನ ಸಾಸ್, ಸಿಪ್ಪೆ ಸುಲಿದ ಸೇಬುಹಣ್ಣುಗಳನ್ನು ಅಳವಡಿಸಿಕೊಂಡ ಮಹಿಳೆಯರು ಉಳಿದ ಮಹಿಳೆಯರಿಗಿಂತ ತಮ್ಮ ದೇಹದ ಮೂಳೆಗಳಲ್ಲಿ ಕಡಿಮೆ ಕ್ಯಾಲ್ಸಿಯಂ ಕಳೆದುಕೊಳ್ಳುತ್ತಾರೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಸೇಬಿನಲ್ಲಿ ಪೆಕ್ಟಿನ್ ಎಂಬ ಕರಗುವ ನಾರು ಇದೆ. ಇದು ನಮ್ಮ ಕರುಳುಗಳಲ್ಲಿರುವ ಆರೋಗ್ಯಸ್ನೇಹಿ ಬ್ಯಾಕ್ಟೀರಿಯಾಗಳಿಗೆ ಉತ್ತಮವಾಗಿದೆ. ಅಲ್ಲದೇ ಈ ನಾರು ದೊಡ್ಡ ಕರುಳಿನಲ್ಲಿ ಹಾದು ಹೋಗುವಾಗ ಆರೋಗ್ಯಕರ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

ತ್ವಚೆ ಮತ್ತು ಕೂದಲ ಆರೋಗ್ಯವನ್ನು ವೃದ್ಧಿಸುತ್ತದೆ
ಸೇಬಿನ ಸೇವನೆಯಿಂದ ತ್ವಚೆ ಕಾಂತಿಯುಕ್ತ ಮತ್ತು ಸಹಜವರ್ಣ ಪಡೆಯುತ್ತದೆ. ಅಲ್ಲದೇ ವೃದ್ದಾಪ್ಯದ ಚಿಹ್ನೆಗಳನ್ನು ತಡವಾಗಿಸುತ್ತದೆ ಮತ್ತು ಇದರಲ್ಲಿರುವ ಹಲವಾರು ಆಂಟಿಆಕ್ಸಿಡೆಂಟುಗಳು ತ್ವಚೆಗೆ ಅಗತ್ಯ ಆರ್ದ್ರತೆಯನ್ನು ಒದಗಿಸುತ್ತವೆ. ಅಲ್ಲದೇ ಕೂದಲ ಉದುರುವಿಕೆಯನ್ನು ನಿಲ್ಲಿಸಿ ಕೂದಲ ಉದ್ದ ಹೆಚ್ಚಲು ನೆರವಾಗುತ್ತದೆ.

ಸೇವನೆಗೆ ಯಾವುದು ಉತ್ತಮ ಸಮಯ?

ಬಹುತೇಕರಿಗೆ ಯಾವ ಯಾವ ಆಹಾರವನ್ನು ಯಾವಾಗ ಸೇವನೆ ಮಾಡಬೇಕು ಎಂಬುದೇ ತಿಳಿದಿರುವುದಿಲ್ಲ. ಸೇಬು ತಿಂದರೆ ಒಳ್ಳೆಯದು ಎಂದು ಯಾವಾಗ ಬೇಕಾದರೂ ತಿನ್ನುತ್ತಾರೆ. ಆದರೆ, ಇದು ತಪ್ಪು. ಸೇಬು ಹಣ್ಣನ್ನು ಉಪಹಾರವಾಗಿ ಸೇವನೆ ಮಾಡುವವರಿದ್ದಾರೆ. ಉಪಹಾರದ ಜೊತೆ ಸೇಬು ಸೇವನೆ ಮಾಡುವ ಬದಲು ಉಪಹಾರದ ಬದಲಾಗಿ ಸೇಬು ಹಣ್ಣನ್ನು ತಿನ್ನಬಹುದು.

ಸೇಬು ಹಣ್ಣನ್ನು ತಿನ್ನಲು ಉತ್ತಮ ಸಮಯವೆಂದರೆ ಊಟಕ್ಕೆ ಮೊದಲು. ಊಟಕ್ಕೆ 45 ನಿಮಿಷಗಳ ಮೊದಲು ಸೇಬು ಹಣ್ಣನ್ನು ತಿನ್ನಬೇಕು. ಈ ಸಮಯದಲ್ಲಿ ಸೇಬು ಸೇವನೆ ಮಾಡಿದರೆ ಅದರ ಎಲ್ಲ ಪೋಷಕಾಂಶ ನಮ್ಮ ದೇಹ ಸೇರುತ್ತದೆ.

ದೇಹವು ಸೇಬಿನಲ್ಲಿರುವ ಎಲ್ಲಾ ಜೀವಸತ್ವಗಳು ಮತ್ತು ಖನಿಜಗಳನ್ನು ಹೀರಿಕೊಳ್ಳುತ್ತದೆ. ನಿದ್ರೆ ಅಥವಾ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು ಅವಶ್ಯಕವಾಗಿ ಸೇಬು ಹಣ್ಣನ್ನು ತಿನ್ನಬೇಕು. ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದರಿಂದ ಅತ್ಯುತ್ತಮ ಪ್ರಯೋಜನ ಪಡೆಯಬಹುದು. ಸೇಬು ಹಣ್ಣನ್ನು ಸ್ವಚ್ಛಗೊಳಿಸಿ ನಂತರ ಸೇವನೆ ಮಾಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com