ವೆಂಕಟನ ರಂಪಾಯಣ; ಮಾಧ್ಯಮಗಳಲ್ಲಿ ಮಿಂಚಿದ ಫೈರಿಂಗ್ ಸ್ಟಾರ್

ನನ್ ಮಗಂದ್ ಎಂಬ ಡೈಲಾಗ್ ಬಹುಶಃ ಇದೀಗ ಎಲ್ಲರ ಮನೆಮಾತಾಗಿದೆ ಎಂದರೆ ಅದಕ್ಕೆ ಕಾರಣ ನಟ ನಿರ್ದೇಶಕ ವೆಂಕಟ್. ಸ್ವತಂತ್ಯ್ರ ಪಾಳ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೆಂಕಟ್ ತಮ್ಮ..
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (ಸಂಗ್ರಹ ಚಿತ್ರ)
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (ಸಂಗ್ರಹ ಚಿತ್ರ)
Updated on

ನನ್ ಮಗಂದ್ ಎಂಬ ಡೈಲಾಗ್ ಬಹುಶಃ ಇದೀಗ ಎಲ್ಲರ ಮನೆಮಾತಾಗಿದೆ ಎಂದರೆ ಅದಕ್ಕೆ ಕಾರಣ ನಟ ನಿರ್ದೇಶಕ ವೆಂಕಟ್. ಸ್ವತಂತ್ಯ್ರ ಪಾಳ್ಯ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೆಂಕಟ್ ತಮ್ಮ ಹುಚ್ಚ ವೆಂಕಟ್ ಚಿತ್ರದ ಮೂಲಕ ಹುಚ್ಚ ವೆಂಕಟ್ ಎಂದು ಚಿರಪರಿಚಿತರಾದರು. ಚಿತ್ರ ತೆರೆಕಂಡಾಗ ಪ್ರೇಕ್ಷಕರ ನೀರಸ ಪ್ರತಿಕ್ರಿಯೆಯಿಂದ ತೀವ್ರ ನೊಂದ ವೆಂಕಟ್  ಬಹಿರಂಗವಾಗಿಯೇ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಖಾಸಗಿ ಮಾಧ್ಯಮವೊಂದು ಚಿತ್ರೀಕರಿಸಿಕೊಂಡಿದ್ದ ಈ ವಿಡಿಯೋಗೆ ಯೂಟ್ಯೂಬ್ ನಲ್ಲಿ ಭಾರಿ ಪ್ರತಿಕ್ರಿಯೆ ಲಭಿಸಿತು. ಲಕ್ಷಾಂತರ ಮಂದಿ ಈ ವಿಡಿಯೋ ನೋಡಿ ವೆಂಕಟನ ಅಭಿಮಾನಿಗಳಾದರು.  ಬಳಿಕ ಇದರ ಸರಣಿ ವಿಡಿಯೊಗಳೇನೋ ಎಂಬಂತೆ ಹಿಂದೆ-ಹಿಂದೆಯೇ ವೆಂಕಟ್ ಅವರ ಸಂದರ್ಶನದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಿದವು. ಇಡೀ ಕರ್ನಾಟಕಕ್ಕೆ  ವೆಂಕಟನ ಮಾತುಗಳು ಸುಪ್ರಭಾತವಾಯಿತು.

ಸಾಮಾಜಿಕ ಜಾಲತಾಣವಾಗಲೀ ಜನಸಾಮಾನ್ಯರ  ಮಾತುಗಳಾಗಲೀ ಅದು ಎಂಡ್ ಆಗ್ತಾ ಇದ್ದದ್ದು ನನ್ ಮಗಂದ್ ಎಂಬ ಡೈಲಾಗ್‍ನೊಂದಿಗೆ. ಅರ್ಥ ಆಯ್ತಾ.., ಮಾಡ್ಬೇಕ್, ನೋಡ್ಬೇಕ್,  ಬ್ಯಾನ್ ಮಾಡ್ಬೇಕ್, ಬೆಂಡ್ ಎತ್ಬಿಡ್ತೀನಿ ಇವೆಲ್ಲವೂ ಈ ವರ್ಷ ಕರ್ನಾಟಕದಲ್ಲಿ ಅತಿ ಹೆಚ್ಚು ಬಳಕೆಯಾದ ನುಡಿಗಳಾಗಿ ಹೋದವು! ಇದೆಲ್ಲದರ ಕರ್ತೃ ಒನ್ ಆ್ಯಂಡ್ ಓನ್ಲಿ ವೆಂಕಟ್ ಅಲಿಯಾಸ್  ಬಿಗ್‍ಬಾಸ್ ವೆಂಕಟ್ ಅಲಿಯಾಸ್ ಫೈರಿಂಗ್‍ಸ್ಟಾರ್ ವೆಂಕಟ್. ಖಾಸಗಿ ಸುದ್ದಿ ವಾಹಿನಿಗಳು ಒಂದಿಲ್ಲೊಂದು ವಿಚಾರಕ್ಕೆ ಹುಚ್ಚ ವೆಂಕಟನ ಕುರಿತು ಸುದ್ದಿಗಳನ್ನು ಪ್ರಸಾರ ಮಾಡಲಾರಂಭಿಸಿದವು.  ಇದರ ನಡುವೆಯೇ ಆರಂಭವಾದ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಗೂ ವೆಂಕಟ್ ಆಯ್ಕೆಯಾಗಿದ್ದರು.

ದಿನಕ್ಕೊಂದು ಯೂಟ್ಯೂಬ್ ವಿಡಿಯೋ, ಫೇಸ್‍ಬುಕ್ಕಲ್ಲಿ ನೂರಾರು ಟ್ರೋಲ್ ಫೋಟೋಸ್ ಹೀಗೆ ತನ್ನ ಅತಿರೇಕಗಳಿಂದಲೇ ಬಿಗ್‍ಬಾಸ್ ರಿಯಾಲಿಟಿ ಶೋಗೆ ಆಯ್ಕೆಯಾದ ವೆಂಕಟ್ ಕಲರ್ಸ್  ಚಾನೆಲ್ಗೆ ಭರಪೂರ ಟಿಆರ್‍ಪಿ ತಂದುಕೊಟ್ಟರು. ಬಿಗ್‍ಬಾಸ್‍ನಲ್ಲಿ ತನ್ನ ಸೆನ್ಸಿಬಲ್ ಹಾಗೂ ನೇರ ನಡೆ-ನುಡಿಯಿಂದ ಮನೆಮನೆಯಲ್ಲೂ ಫ್ಯಾನ್ಫೇರ್ ಸೃಷ್ಟಿಸಿಕೊಂಡ ವೆಂಕಟ್ ಗೆದ್ದೇ ಬಿಡ್ತಾನಾ  ಅನಿಸೋ ಹೊತ್ತಿಗೆ ರವಿ ಮೂರೂರ್ ಮೇಲೆ ಹಲ್ಲೆ ಮಾಡಿ ಆಚೆ ಬಂದರು. ಅಲ್ಲಿಂದ ಅದೇನು ದಿಶೆ ತಿರುಗಿತೋ, ಎಲ್ಲ ಪತ್ರಿಕೆ ನ್ಯೂಸ್ ಚಾನೆಲ್ಗಳ ಡಾರ್ಲಿಂಗ್ ಆಗಿ ಹೋದ ವೆಂಕಟ್, ಬಿಗ್‍ಬಾಸ್  ನಿಂದ ಬಂದ ಬಳಿಕ ಮಾಧ್ಯಮಗಳಲ್ಲಿ ಶೋದ ಇನ್‍ಸೈಡ್ ಸ್ಟೋರಿ ಹೊರಹಾಕಿದ್ದಾಯ್ತು. ಯೂಟ್ಯೂಬ್ ಸ್ಟಾರ್, ಬ್ಯಾನ್ ಸ್ಟಾರ್ ಹೀಗೆ ಒಬ್ಬೊಬ್ಬ ವ್ಯಕ್ತಿಯಿಂದ ಒಂದೊಂದು ಬಿರುದು!  ಕಾರ್ನಾಡ್,  ಟಿಪ್ಪು ಸೇರಿದಂತೆ ಎಲ್ಲರನ್ನೂ ತರಾಟೆಗೆ ತೆಗೆದುಕೊಂಡು, ಕೊನೆಗೆ ಅಂಬೇಡ್ಕರ್ ಬಗ್ಗೆ ಮಾತನಾಡಿ ಪರಪ್ಪನ ಅಗ್ರಹಾರ ಸೇರಿದ್ದೂ ಆಯ್ತು. ಆದರೆ ಜೈಲಿಂದ ಆಚೆ ಬಂದದ್ದು ಬದಲಾದ ವೆಂಕಟ್.  ಆತ ಈಗ ಫೈರಿಂಗ್ ಸ್ಟಾರ್. ಹುಚ್ಚ ವೆಂಕಟ್ ರೀ ರಿಲೀಸ್ ಆಗಿ ಹಿಟ್ ಆಗಿದೆ. ಫ್ಲಾಪ್ ಆದಾಗ ಹಿಡಿದಿದ್ದ ಹುಚ್ಚು ಬಿಟ್ಟು ಹೋಗಿದೆ.

ಈಗ ಭಟ್ಟರ ಕ್ಯಾಂಪಿನ ಚಿತ್ರದಲ್ಲಿ ಹಾಡೊಂದನ್ನು ಹಾಡಿ ಇನ್ನಷ್ಟು ಅಭಿಮಾನಿಗಳನ್ನು ಸೆಳೆದಾಗಿದೆ. ಒಟ್ಟಾರೆ ಸ್ಯಾಂಡಲ್ ವುಡ್ ಮತ್ತು ಟಿವಿ-ಯೂಟ್ಯೂಬ್-ಫೇಸ್ಬುಕ್ ಪಾಲಿಗೆ ಇದು ಬಿಗ್‍ಬಾಸ್  ವೆಂಕಟ್ ವರ್ಷ. ಹೈಕ್‍ನಂಥ ಆ್ಯಪ್‍ಗಳಲ್ಲಿ ವೆಂಕಟ್‍ನ ಸ್ಟಿಕರ್ ಬಂದದ್ದು, ವೆಂಕಟ್ ಫ್ಯಾನ್ಸ್ ವಿಡಿಯೋ ಸಾಂಗ್ ಮಾಡಿದ್ದು, ಚೈನೀಸ್, ಕೊರಿಯನ್ಸ್ ಕೂಡ ವೆಂಕಟ್‍ನನ್ನು ಮಿಮಿಕ್ರಿ ಮಾಡಿದ್ದು,  ಮುಂಗಾರು ಮಳೆ ಕ್ರೇಜ್ ನೆನಪಿಸುವಂತಿದ್ದದ್ದು ನಿಜ. ಒಟ್ಟಾರೆ ಕರ್ನಾಟಕದ ಜನತೆಯನ್ನು ವೆಂಕಟ್ ಇಡೀ ವರುಷ ರಂಜಿಸಿ, ನಗಿಸಿಬಿಟ್ಟರು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com