ಹಿನ್ನೋಟ 2016: ಪ್ರಮುಖ ಅಪರಾಧ ಸುದ್ದಿಗಳು

2016ರಲ್ಲಿ ದೇಶಾದ್ಯಂತ ಹಲವು ಅಪರಾಧ ಸುದ್ದಿಗಳು ಸದ್ದು ಮಾಡಿದ್ದವು. ಇದರಲ್ಲಿ ಕೆಲ ಸುದ್ದಿಗಳು ದೇಶಾದ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾದವು.
ಹಿನ್ನೋಟ 2016: ಪ್ರಮುಖ ಅಪರಾಧ ಸುದ್ದಿಗಳು
ಹಿನ್ನೋಟ 2016: ಪ್ರಮುಖ ಅಪರಾಧ ಸುದ್ದಿಗಳು
ಡಿವೈಎಸ್ಪಿ ಗಣಪತಿ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ
ಮಂಗಳೂರು ಐಜಿಪಿ ಕಚೇರಿಯ ಡಿವೈಎಸ್ಪಿ ಎಂ.ಕೆ.ಗಣಪತಿ ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಗಳು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಆತ್ಮಹತ್ಯೆಗೂ ಮುನ್ನ ಗಣಪತಿ ಅವರು ಸಚಿವರಾಗಿದ್ದ ಕೆಜೆ ಜಾರ್ಜ್, ಲೋಕಾಯುಕ್ತ ಐಜಿಪಿ ಪ್ರಣಬ್ ಮೊಹಾಂತಿ, ಗುಪ್ತಚರ ವಿಭಾಗದ ಎಡಿಜಿಪಿ ಎಎಂ ಪ್ರಸಾದ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಮೇಲಿನ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಖಾಸಗಿ ಟಿವಿಯೊಂದಕ್ಕೆ ಹೇಳಿಕೆ ನೀಡಿ. ಬಳಿಕ ಮಡಿಕೇರಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕು ಮುರುಗೋಡ ಗ್ರಾಮದ ಪತ್ನಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ತೇಜಸ್ ಎಂಬ ಯುವಕನನ್ನು ಅಪಹರಿಸಿ 10 ಲಕ್ಷ ಪಡೆದಿದ್ದ ಆರೋಪ ಕಲ್ಲಪ್ಪ ಹಂಡಿಬಾಗ್ ಮೇಲಿತ್ತು. ಇದರಿಂದ ಮನನೊಂದು ಕಲ್ಲಪ್ಪ ಆತ್ಮಹತ್ಯೆಗೆ ಶರಣಾಗಿದ್ದರು. 
ಸಂಚನ ಸೃಷ್ಟಿಸಿದ್ದ ಟೆಕ್ಕಿ ಸ್ವಾತಿ ಕೊಲೆ
ಚೆನ್ನೈನ ನುಂಗಂಬಾಕ್ಕಂ ರೈಲು ನಿಲ್ದಾಣದಲ್ಲಿ ಇನ್ಫೋಸಿಸ್ ಉದ್ಯೋಗಿ ಎಸ್ ಸ್ವಾತಿ ಕೊಲೆ ಪ್ರಕರಣ ದೇಶವನ್ನು ಬೆಚ್ಚಿಬೀಳಿಸಿತ್ತು. ಸ್ವಾತಿಯನ್ನು ಆರೋಪಿ ರಾಮ್ ಕುಮಾರ್ ಬೆಳಗ್ಗೆ 6.30ರ ಸುಮಾರಿನಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದು ಈ ಪ್ರಕರಣ ಚೆನ್ನೈನಲ್ಲಿ ಬಾರಿ ಸಂಚಲ ಮೂಡಿಸಿತ್ತು. ಇದನ್ನು ದೊಡ್ಡ ಸವಾಲಾಗಿ ಸ್ವೀಕರಿಸಿದ ಚೆನ್ನೈ ಪೊಲೀಸರು ಅಂತು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿ ರಾಮ್ ಕುಮಾರ್ ನನ್ನು ಚೆನ್ನೈನ ಹೊರವಲಯದ ಪುಳಲ್ ಜೈಲಿನಲ್ಲಿರಿಸಲಾಗಿತ್ತು. ಇದೇ ಜೈಲಿನಲ್ಲಿ ರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದ. ರಾಮ್ ಕುಮಾರ್ ತಿರುನಲ್ವೇಲಿ ಜಿಲ್ಲೆಯ ಸೆಂಗೋಟೈ ತಾಲೂಕಿನ ಮೀನಾಕ್ಷಿಪುರಂ ನಿವಾಸಿಯಾಗಿದ್ದ. ಇತ ಇಂಜಿನಿಯರಿಂಗ್ ಪದವೀಧರನಾಗಿದ್ದ. ರಾಮ್ ಕುಮಾರ್ ಸ್ವಾತಿ ವಾಸವಾಗಿದ್ದ ಎದುರು ಮನೆಯಲ್ಲಿ ವಾಸವಾಗಿದ್ದು ಆಕೆಯನ್ನು ಪ್ರೀತಿಸುತ್ತಿದ್ದ. ಇದಕ್ಕೆ ಸ್ವಾತಿ ಸಮ್ಮತಿ ಸೂಚಿಸದಿದ್ದಕ್ಕೆ ರಾಮ್ ಕುಮಾರ್ ಜಿಗುಪ್ಸೆಗೊಂಡು ಆಕೆಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ್ದ. 
ನಟಿ ಪ್ರತ್ಯೂಷಾ ಬ್ಯಾನರ್ಜಿ ಆತ್ಮಹತ್ಯೆ
ಬಾಲಿಕಾ ವಧು ಖ್ಯಾತಿಯ ಟಿವಿ ಧಾರಾವಾಹಿ ನಟಿ  ಪ್ರತ್ಯೂಷಾ ಬ್ಯಾನರ್ಜಿ ಅವರು ಆತ್ಮಹತ್ಯೆಗೆ ಶರಣಾಗಿದ್ದು ಕಿರುತೆರೆ ಲೋಕದಲ್ಲಿ ಭಾರೀ ಸಂಚಲನವನ್ನೇ ಮೂಡಿಸಿತ್ತು. ಪ್ರತ್ಯೂಷಾ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಪ್ರತ್ಯೂಷಾ ರಾಹುಲ್ ರಾಜ್ ಸಿಂಗ್ ರನ್ನು ಪ್ರೀತಿಸುತ್ತಿದ್ದು ಪ್ರೇಮ ಸಂಬಂಧದಲ್ಲಿ ಉಂಟಾದ ಬಿರುಕಿನಿಂದ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಶಂಕೆ ಇದೆ. 
ಆರ್ಎಸ್ಎಸ್ ಮುಖಂಡ ರುದ್ರೇಶ ಹತ್ಯೆ
ಬೆಂಗಳೂರಿನ ಆರ್ಎಸ್ಎಸ್ನ ಪಥಸಂಚಲವನ್ನು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಸಂಘದ ಸ್ವಯಂ ಸೇವಕ ಹಾಗೂ ಬಿಜೆಪಿ ಕಾರ್ಯಕರ್ತ ರುದ್ರೇಶ ಅವರನ್ನು ಲಾಂಗ್ ನಿಂದ ಕೊಚ್ಚಿ ಭರ್ಜರ ಹತ್ಯೆ ಮಾಡಲಾಗಿತ್ತು. ಶಿವಾಜಿನಗರದ ಜನನಿಬಿಢ ಕಾಮರಾಜ ರಸ್ತೆಯಲ್ಲಿ ಟೀ ಕುಡಿಯಲೆಂದು ಸ್ನೇಹತರ ಜತೆ ಬಂದಿದ್ದ ರುದ್ರೇಶ್ ಮೇಲೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಕೊಚ್ಚಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. 
ಉತ್ತರ ಪ್ರದೇಶದಲ್ಲಿ ತಾಯಿ-ಮಗಳ ಮೇಲೆ ಸಾಮೂಹಿಕ ಅತ್ಯಾಚಾರ
ಉತ್ತರಪ್ರದೇಶದ ನೋಯ್ಡಾದಲ್ಲಿ ಮಹಿಳೆ ಮತ್ತು ಆಕೆಯ 14ರ ಹರೆಯದ ಮಗಳ ಮೇಲೆ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಘಟನೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ದೆಹಲಿಯಿಂದ 65 ಕಿಮಿ ದೂರದಲ್ಲಿರುವ ನೋಯ್ಡಾದ ಬುಲಂದ್‍ಶಹರ್‍‍ನಲ್ಲಿ ಘಟನೆ ನಡೆದಿತ್ತು. ಮಹಿಳೆ ಮತ್ತು ಆಕೆಯ ಮಗಳು ತನ್ನ ಕುಟುಂಬದೊಂದಿಗೆ ಶಹಜಾನ್ ಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಐವರ ಗುಂಪೊಂದು ಕಾರನ್ನು ಅಡ್ಡಗಟ್ಟಿ ಗಂಡಸರನ್ನು ಸೀಟಿಗೆ ಕಟ್ಟಿಹಾಕಿ ತಾಯಿ ಮಗಳನ್ನು ಎಳೆದೊಯ್ದು ಅತ್ಯಾಚಾರ ನಡೆಸಿದ್ದರು. 
ಪತ್ರಕರ್ತರ ಹತ್ಯೆ
ಜಾರ್ಖಂಡ್ ಮತ್ತು ಬಿಹಾರದಲ್ಲಿ ಇಬ್ಬರು ಪತ್ರಕರ್ತರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು. ಬಿಹಾರದ ಪ್ರಮುಖ ಹಿಂದೂಸ್ತಾನ್ ದೈನಿಕವೊಂದರ ಮುಖ್ಯಸ್ಥರಾಗಿದ್ದ ರಾಜ್ ದೇವ್ ಎಂಬುವರನ್ನು ಮನೆಗೆ ತೆರಳುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಸಿವಾನ್ ರೈಲ್ವೆ ನಿಲ್ದಾಣದ ಬಳಿ ಗುಂಡಿಟ್ಟು ಹತ್ಯೆ ಮಾಡಿದ್ದರು. ಇನ್ನು ಜಾರ್ಖಂಡ್ ನ ಛಾತ್ರಾ ಜಿಲ್ಲೆಯ ದೇವಾರಿಯಾದಲ್ಲಿ ಅಪರಿಚಿತರು ಸುದ್ದಿ ವಾಹಿನಿಯ ಅಖಿಲೇಶ್ ಪ್ರತಾಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. 
ಎಟಿಎಂ ವಾಹನದೊಂದಿಗೆ ಚಾಲಕ ಪರಾರಿ
ಲಾಜಿಕ್ಯಾಶ್ ಎಂಬ ಸಂಸ್ಥೆಗೆ ಸೇರಿದ ಎಟಿಎಂ ವಾಹನದೊಂದಿಗೆ ಚಾಲಕ ಡಾಮಿನಿಕ್ ಸೆಲ್ವರಾಜ್ 1.38 ಕೋಟಿ ರುಪಾಯಿಯೊಂದಿಗೆ ಪರಾರಿಯಾಗಿದ್ದ. ನೋಟು ನಿಷೇಧದ ಬಳಿಕ ಜನರ ಅನುಕೂಲಕ್ಕಾಗಿ ಆರ್ಬಿಐ 2000 ಮುಖಬೆಲೆಯ ಹೊಸ ನೋಟುಗಳನ್ನು ಎಟಿಎಂಗಳಿಗೆ ಹಾಕುವ ಗುತ್ತಿಗೆಯನ್ನು ಹಲವು ಭದ್ರತಾ ಸಂಸ್ಥೆಗಳಿಗೆ ನೀಡಿತ್ತು. ಅದರಂತೆ ಲಾಜಿಕ್ಯಾಶ್ ಸಂಸ್ಥೆಗೆ ಸೇರಿದ ಡಾಮಿನಿಕ್ ಸೆಲ್ವರಾಜ್ 1.37 ಕೋಟಿ ಹೊಸ ನೋಟು ಹಾಗೂ 1 ಲಕ್ಷ ಹಣ 100 ರು ಮುಖಬೆಲೆಯ ನೋಟುಗಳೊಂದಿಗೆ ಪರಾರಿಯಾಗಿದ್ದ. ಬಳಿಕ ತನಿಖೆ ಕೈಗೊಂಡಿದ್ದ ಪೊಲೀಸರು ಡಾಮ್ನಿಕ್ ಪತ್ನಿ ಎಲ್ವಿನ್ ರನ್ನು ಬಂಧಿಸಿ ಆಕೆಯಿಂದ 79.8 ಲಕ್ಷ ಹಣವನ್ನು ಜಪ್ತಿ ಮಾಡಿದರು. 
- ಎಸ್. ವಿಶ್ವನಾಥ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com