ಕೈ ಕೊರಳಿಗೆ ಉರುಳು?
ನವದೆಹಲಿ: 3600 ಕೋಟಿ ಹೆಲಿಕಾಪ್ಟರ್ ಖರೀದಿ ಹಗರಣ ಈಗ ಕಾಂಗ್ರೆಸ್ ಕೊರಳಿಗೆ ಉರುಳಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಡೀಲ್ ಕುದುರಿಸುವಲ್ಲಿ ಪ್ರಮುಖ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಕ್ರಿಶ್ಚಿಯನ್ ಮೈಕೆಲ್ ತಂದೆ 90ರ ದಶಕದಲ್ಲಿ ಕಾಂಗ್ರೆಸ್ಗೆ ಆತ್ಮೀಯರಾಗಿದ್ದರು ಎಂದು ಇಟಲಿ ಮಾಧ್ಯಮಗಳು ಆರೋಪಿಸಿವೆ. ಇದು ಪ್ರತಿಪಕ್ಷಗಳ ಅನುಮಾನದ ನೋಟವನ್ನು ಕಾಂಗ್ರೆಸ್ನತ್ತ ಹೊರಳುವಂತೆ ಮಾಡಿದೆ.
ಕ್ರಿಶ್ಚಿಯನ್ ತಂದೆ ದಿ. ಮೈಕೆಲ್ ವೂಲ್ಫ್ಗ್ಯಾಂಗ್ ಭಾರತದಲ್ಲಿ ಭಾರಿ ವ್ಯಾವಹಾರಿಕ ಹಿತಾಸಕ್ತಿ ಹೊಂದಿದ್ದರು. 90ದ ದಶಕದಲ್ಲಿ ಕಾಂಗ್ರೆಸ್ನ ಪ್ರಮುಖ ಮುಖಂಡರ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದರು ಎಂದು ಮಾಧ್ಯಮಗಳು ಆರೋಪಿಸಿವೆ. ತಂದೆಯ ಮೂಲಕ 10 ವರ್ಷಗಳಲ್ಲಿ ಕ್ರಿಶ್ಚಿಯನ್ ಕೂಡ ಬಿಜಿನೆಸ್, ರಾಜಕೀಯ ಸಂಪರ್ಕ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಆಗಸ್ಟಾ ವೆಸ್ಟ್ಲ್ಯಾಂಡ್ ಡೀಲ್ನಲ್ಲಿ ಕ್ರಿಶ್ಟಿಯನ್ಗೆ 217 ಕೋಟಿ ಕಮಿಷನ್ ನೀಡಲಾಗಿದೆ ಎಂದು ಇಟಲಿಯ ತನಿಖಾ ವರದಿಯೇ ಹೇಳುತ್ತದೆ.
ಇನ್ನಷ್ಟು ಮಾಹಿತಿಗಾಗಿ ಕೆಮೆರಾನ್ಗೆ ಒತ್ತಡ
ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರಾನ್ ಅವರು ಮಂಗಳವಾರ ದೇಶಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿ ಭಾರತ ಹೆಚ್ಚಿನ ವಿವರ ಕೇಳುವ ಸಾಧ್ಯತೆ ಇದೆ. ಹಗರಣಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಹಾಗೂ ತನಿಖೆಗೆ ಸಹಕಾರ ನೀಡುವಂತೆ ಭಾರತ ಈಗಾಗಲೇ ಬ್ರಿಟನ್ಗೆ ಮನವಿ ಮಾಡಿದೆ. ಅದರಂತೆ ಬ್ರಿಟನ್ ಮಧ್ಯಂತರ ಮಾಹಿತಿ ರವಾನಿಸಿದೆ. ಆದರೆ, ಈ ಪ್ರತಿಕ್ರಿಯೆ ಯಾರಿಗೂ ತೃಪ್ತಿ ನೀಡಿಲ್ಲ, ಸಂಪೂರ್ಣ ಮಾಹಿತಿ ನೀಡಬೇಕೆಂದು ಭಾರತ ಬಯಸುತ್ತಿದೆ ಎಂದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಡೀಲ್ ವರದಿ ಕೇಳಿದ ಜಾಗೃತ ಆಯೋಗ
ಹೆಲಿಕಾಪ್ಟರ್ ಖರೀದಿ ಹಗರಣಕ್ಕೆ ಸಂಬಂಧಿಸಿ ವರದಿ ನೀಡುವಂತೆ ಕೇಂದ್ರ ಜಾಗೃತ ಆಯೋಗ (ಸಿವಿಸಿ)ವು ರಕ್ಷಣಾ ಸಚಿವಾಲಯಕ್ಕೆ ಸೂಚಿಸಿದೆ. ತನಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಯಿಂದ ಸಿವಿಸಿ ಈ ವರದಿ ಕೇಳಿದೆ. ಅದರಂತೆ ಮುಖ್ಯ ಜಾಗೃತ ಅಧಿಕಾರಿ ನಾಲ್ಕು ತಿಂಗಳೊಳಗೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವರದಿ ಸಿದ್ಧಪಡಿಸಬೇಕು ಅಥವಾ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆದರೆ, ಸಿವಿಸಿಗೆ ದೂರು ಕೊಟ್ಟದ್ದು ಯಾರು ಎನ್ನುವ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ.
ಸಂಸತ್ತಿನಲ್ಲಿ ಸದ್ದು: ಗುರುವಾರ ಆರಂಭವಾಗಲಿರುವ ಸಂಸತ್ತಿನ ಬಜೆಟ್ ಅಧಿವೇಶದಲ್ಲಿ ಹಗರಣಕ್ಕೆ ಸಂಬಂಧಿಸಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಲಿದೆ. ಬೆಲೆ ಏರಿಕೆ ಮತ್ತಿತರ ವಿಚಾರಗಳ ಜತೆಗೆ ಕಾಪ್ಟರ್ ಹಗರಣವನ್ನೂ ಸಂಸತ್ತಿನಲ್ಲಿ ಪ್ರಶ್ನಿಸುವುದಾಗಿ ಈಗಾಗಲೇ ಬಿಜೆಪಿ ತಿಳಿಸಿದೆ. ಜತೆಗೆ, ಎಡಪಕ್ಷಗಳು, ಜೆಡಿಯು, ಎಸ್ಪಿ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸುಳಿವು ನೀಡಿವೆ.
ಮಾಹಿತಿಯೇ ಇಲ್ಲ ಸಂಜಯ್ ತ್ಯಾಗಿ
ಡೀಲ್ನಲ್ಲಿ ನಮ್ಮ ಕುಟುಂಬವನ್ನು ವಿನಾಕಾರಣ ಎಳೆದು ತರಬೇಡಿ. ಆ ಡೀಲ್ಗೂ ನಮಗೂ ಸಂಬಂಧ ಇಲ್ಲ. ಒಪ್ಪಂದದ ಕುರಿತು ನಮಗೆ ಮಾಹಿತಿಯೇ ಇಲ್ಲ ಎಂದು ಸಂಜಯ್ ತ್ಯಾಗಿ ಸ್ಪಷ್ಟನೆ ನೀಡಿದ್ದಾರೆ. ಮಧ್ಯವರ್ತಿ ಹಷ್ಕೆ ಸುಳ್ಳು ಹೇಳುತ್ತಿದ್ದಾರೆ. ಈ ಆರೋಪದಿಂದ ತಮ್ಮ ಕುಟುಂಬದ ಗೌರವ ಮಣ್ಣುಪಾಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ತಮಗೆ ಹಷ್ಕೆ ಹಾಗೂ ಗೆರೋಸ್ ಪರಿಚಯ ಇದ್ದದ್ದು ನಿಜ ಎಂದು ಒಪ್ಪಿಕೊಂಡಿದ್ದಾರೆ. ಇಂಧನ ಕ್ಷೇತ್ರದ ಒಪ್ಪಂದಕ್ಕೆ ಸಂಬಂಧಿಸಿ 2001ರಲ್ಲಿ ಹಷ್ಕೆಯನ್ನು ಭೇಟಿಯಾಗಿದ್ದೆ. ಮೂಲಸೌಲಭ್ಯ ಡೀಲ್ಗೆ ಸಂಬಂಧಿಸಿ ಗೆರೋಸ್ನನ್ನು 1995ರಿಂದಲೂ ಬಲ್ಲೆ ಎಂದು ತ್ಯಾಗಿ ಹೇಳಿದ್ದಾರೆ. ಇಟಲಿಯ ತನಿಖಾ ವರದಿಯಲ್ಲಿ ಸಂಜೀವ್ರನ್ನು ಜ್ಯೂಲಿ ಎಂದು ಹೆಸರಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

