1ರಿಂದ 7ನೇ ತರಗತಿ ಆರಂಭಿಸುವುದಕ್ಕೆ ಇದ್ದ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಡಿ.8ರವರೆಗೆ ವಿಸ್ತರಣೆ
ಬೆಂಗಳೂರು: ರಾಜ್ಯದಲ್ಲಿ ಹೊಸ ಶಾಲೆ ನೊಂದಣಿಗೆ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್ ಅಮಾನತಿನಲ್ಲಿರಿಸಿ ಮಧ್ಯಂತರ ಆದೇಶ ಹೋರಡಿಸಿದೆ.
ಕನ್ನಡ ಮಾಧ್ಯಮದ ಹೆಸರಿನಲ್ಲಿ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದ ಖಾಸಗಿ ಶಾಲೆಗಳು 2015-16ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ 1ರಿಂದ 7ನೇ ತರಗತಿ ಆರಂಭಿಸುವುದಕ್ಕೆ ಇದ್ದ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಡಿ.8ರವರೆಗೂ ಹೈಕೋರ್ಟ್ ವಿಸ್ತರಿಸಿದೆ.
ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎ.ಎಸ್.ಬೋಪಣ್ಣ ಅವರ ಪೀಠ ಈ ಮಧ್ಯಂತರ ಆದೇಶ ನೀಡಿದೆ. ಅಲ್ಲದೇ ಸರ್ಕಾರ ಈ ಶಾಲೆಗಳಿಗೆ ಹೊರಡಿಸಿದ್ದ ಮಾರ್ಗಸೂಚಿ ಅಧಿಸೂಚನೆ ಷರತ್ತುಗಳನ್ನು ಸದ್ಯಕ್ಕೆ ಅಮಾನತಿನಲ್ಲಿಟ್ಟು ಮುಂದಿ ಕ್ರಮಕ್ಕೆ ಇವುಗಳನ್ನು ಪರಿಗಣಿಸಿ ಎಂದು ಹೈಕೋರ್ಟ್ ಆದೇಶಿ ಸಿದೆ. ಈ ಆದೇಶದಿಂದ ಸುಮಾರು 500ಕ್ಕೂ ಹೆಚ್ಚು ಶಾಲೆಗಳಿಗೆ ಅನುಕೂಲವಾಗಲಿದೆ.
ಹಾಲಿ ಚಾಲ್ತಿಯಲ್ಲಿರುವ ಈ ಶಾಲೆಗಳು ಕನ್ನಡ ಮಾಧ್ಯಮ ಶಾಲೆಗಳ ಆರಂಭಕ್ಕೆ ಪಾವತಿಬೇಕಾದ ನಿಗದಿತ ಶುಲ್ಕವನ್ನೇ ಇಂಗ್ಲಿಷ್ ಮಾಧ್ಯಮದ ತರಗತಿ ಆರಂಭಕ್ಕೂ ಅಳವಡಿಸಿಕೊಳ್ಳಬೇಕು. ಹೊಸ ಅಧಿಸೂಚನೆ ಪ್ರಕಾರ ಶಿಕ್ಷಣ ಸಂಸ್ಥೆಗಳ ಅರ್ಜಿ ಸ್ವೀಕರಿಸಿಕೊಳ್ಳಲಿ ಎಂದು ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ನೂತನ ಶಾಲೆಗಳ ಆರಂಭಕ್ಕೆ ಅನುಮತಿ ಕೋರುವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗುವಂತೆ ರಾಜ್ಯ ಸರ್ಕಾರ 2014 ನ.11 ರಂದು ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆ ಪ್ರಶ್ನಿಸಿ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ