
ಬೆಂಗಳೂರು: ಎಟಿಎಂ ಕೇಂದ್ರಗಳಲ್ಲಿ ಸಿಸಿಟಿವಿ, ಸೆಕ್ಯೂರಿಟಿ ಗಾರ್ಡ್ ಸೇರಿದಂತೆ ಸುರಕ್ಷತಾ ಕ್ರಮ ಕೈಗೊಳ್ಳಲು ಬ್ಯಾಂಕ್‌ಗಳಿಗೆ ಡಿ.31 ಕೊನೆಯ ಗಡುವು.
ಹೌದು, ಜೆ.ಸಿ ರಸ್ತೆ ಕಾರ್ಪೋರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದ ಬಳಿಕ, ನಗರದ ಸಾವಿರಾರು ಎಟಿಎಂ ಕೇಂದ್ರಗಳ ಭದ್ರತೆಗಾಗಿ ಸುರಕ್ಷತೆ ಮಾರ್ಗಸೂಚಿ ಅಳವಡಿಸಿಕೊಳ್ಳಲು ಗಡುವು ವಿಧಿಸಲಾಗಿತ್ತು.
ಹಲವು ಬಾರಿ ಗಡುವು ವಿಸ್ತರಿಸಿದ್ದ ನಗರ ಪೊಲೀಸರು, ಈಗ ಅಂತಿಮ ಗಡುವು ವಿಧಿಸಿದ್ದಾರೆ. ಅಷ್ಟರೊಳಗೆ ಮಾರ್ಗಸೂಚಿ ಪಾಲಿಸದಿದ್ದರೆ ಐಪಿಸಿ ಕಲಂ 188 (ಸರ್ಕಾರಿ ಸೇವಕನಿಂದ ಆದೇಶ ಉಲ್ಲಂಘನೆ) ಅನ್ವಯ ಬ್ಯಾಂಕ್ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು.
ಒಂದು ವೇಳೆ, ಎಟಿಎಂ ಕೇಂದ್ರದಲ್ಲಿ ಅಪರಾಧ ಕೃತ್ಯ ನಡೆದರೆ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸಭೆ: ವಸಂತನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಚಾಕು ತೋರಿಸಿ ದರೋಡೆಗೆ ಯತ್ನಿಸಿದ ಪ್ರಕರಣದ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಗುರುವಾರ ನಗರದ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿ ಅನುಸರಿಸಲು ನಿರ್ದೇಶನ ನೀಡಿದ್ದಾರೆ.
30ಕ್ಕೂ ಅಧಿಕ ಬ್ಯಾಂಕ್‌ಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಶೀಘ್ರವೇ ಎಟಿಎಂ ಕೇಂದ್ರಗಳಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಬೇಕು, 24 ಗಂಟೆಯೂ ಕಣ್ಗಾವಲಿರಿಸುವ ಸಿಸಿ ಕ್ಯಾಮೆರಾ ಅಳವಡಿಸಬೇಕು, ಜತೆಗೆ ಅಲಾರಂ ಅಳವಡಿಸುವಂತೆ ನಿರ್ದೇಶಿಲಾಗಿದೆ ಎಂದು ಅಲೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬ್ಯಾಂಕ್ ವಿರುದ್ಧ ಕೇಸ್
ವಸಂತನಗರದ ಎಟಿಎಂ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡದೆ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಐಪಿಸಿ ಕಲಂ 188 ಅನ್ವಯ ಪ್ರಕರಣ ದಾಖಲಾಗಿದೆ.
ಡಿ.5ರ ರಾತ್ರಿ ಅಂಬೇಡ್ಕರ್ ಭವನ ಸಮೀಪದ ಎಟಿಎಂ ಘಟಕಕ್ಕೆ ಹೋಗಿದ್ದ ಕೇರಳದ ನಯನಾ ಮತ್ತು ಐಶ್ವರ್ಯಾ ಎಂಬ ಯುವತಿಯರ ಕತ್ತಿಗೆ ಚಾಕು ಇಟ್ಟ ಅಸ್ಸಾಂನ ಮಹಮದ್ ಮುನಾವರ್(28) ಎಂಬಾತ ಮೊಬೈಲ್ ಕಸಿದು ಪರಾರಿಯಾಗಿದ್ದ. ಆ ಸಂದರ್ಭದಲ್ಲಿ ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. ಘಟನೆ ನಡೆದಾಗ ಎಟಿಎಂ ಕೇಂದ್ರದಲ್ಲಿ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಬ್ಯಾಂಕ್ ವಿರುದ್ದ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Advertisement