ಇಸಿಸ್ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರಿಗನ ಕೈವಾಡ..!

ಇಸಿಸ್ ಹೆಸರಲ್ಲಿ ಟ್ವಿಟರ್‌ನಲ್ಲಿ ದೇಶವಿದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಪ್ರಕರಣದ ಹಿಂದೆ ಬೆಂಗಳೂರಿಗನ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.
ಮೆಹ್ದೀ ನಿರ್ವಹಿಸುತ್ತಿದ್ದ ಎಂದು ಹೇಳಲಾಗುತ್ತಿರುವ 'ಶಮಿ ವಿಟ್ನೆಸ್‌' ಉಗ್ರ ಸಂಘಟನೆಯ ಟ್ವಿಟರ್ ಖಾತೆ (ಸಂಗ್ರಹ ಚಿತ್ರ)
ಮೆಹ್ದೀ ನಿರ್ವಹಿಸುತ್ತಿದ್ದ ಎಂದು ಹೇಳಲಾಗುತ್ತಿರುವ 'ಶಮಿ ವಿಟ್ನೆಸ್‌' ಉಗ್ರ ಸಂಘಟನೆಯ ಟ್ವಿಟರ್ ಖಾತೆ (ಸಂಗ್ರಹ ಚಿತ್ರ)
Updated on

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ ಉಗ್ರ ಸಂಘಟನೆ (ಇಸಿಸ್)ಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ದೇಶವಿದ್ರೋಹಿ ಸಂದೇಶಗಳನ್ನು ಹಾಕುತ್ತಿದ್ದ ಪ್ರಕರಣದ ಹಿಂದೆ ಬೆಂಗಳೂರಿಗನ ಕೈವಾಡವಿದೆ ಎಂದು ಶಂಕಿಸಲಾಗುತ್ತಿದೆ.

ಬ್ರಿಟನ್ ಮೂಲದ 'ಚಾನೆಲ್ 4' ನ್ಯೂಸ್ ಸುದ್ದಿವಾಹಿನಿ ವರದಿ ಮಾಡಿರುವಂತೆ ಇಸಿಸ್ ಹೆಸರಲ್ಲಿ ಪ್ರಕಟವಾಗುತ್ತಿದ್ದ ಟ್ವಿಟರ್ ಖಾತೆಯ ಹಿಂದೆ ಬೆಂಗಳೂರು ಮೂಲದ ವ್ಯಕ್ತಿ ಕೈವಾಡವಿದೆ ಎಂದು ಶಂಕಿಸಲಾಗಿದೆ. ಬೆಂಗಳೂರಿನಲ್ಲಿದ್ದುಕೊಂಡೇ ಈ ವ್ಯಕ್ತಿ ಟ್ವಿಟರ್‌ನಲ್ಲಿ ದೇಶವಿದ್ರೋಹ ಸಂದೇಶಗಳನ್ನು ಪ್ರಸಾರ ಮಾಡುತ್ತಿದ್ದನು ಎಂದು ಸುದ್ದಿವಾಹಿನಿ ಆರೋಪಿಸಿದೆ. 'ಶಮಿವಿಟ್ನೆಸ್‌' ಎಂಬ ಹೆಸರಲ್ಲಿ ಟ್ವಿಟರ್ ಖಾತೆ ತೆರೆದು ಅಲ್ಲಿ ಇಸಿಸ್ ಪರವಾಗಿ ಇಸ್ಲಾಂ ಸೈದ್ಧಾಂತಿಕ ನಿಲುವುಗಳನ್ನು ಪಸರಿಸುವ ಮೂಲಕ ವಿಶ್ವಾದ್ಯಂತವಿರುವ ಇಸ್ಲಾಂ ಯುವಕರನ್ನು ಇಸಿಸ್‌ಗೆ ಸೇರುವಂತೆ ಪ್ರೇರೇಪಿಸುತ್ತಿದ್ದನು.

ಅಲ್ಲದೆ ಸುದ್ದಿವಾಹಿನಿ ಹೇಳಿರುವಂತೆ ಶಮಿ ವಿಟ್ನೆಸ್ ಟ್ವಿಟರ್ ಖಾತೆಯ ಮೂಲಕವಾಗಿ ಅತಿದೊಡ್ಡ ಪ್ರಮಾಣದಲ್ಲಿ ಉಗ್ರ ಸಂಘಟನೆಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು ಎಂದು ವರದಿ ಮಾಡಿದೆ.

ಚಾನೆಲ್ 4 ಸುದ್ದಿವಾಹಿನಿಯು 'ಶಮಿ ವಿಟ್ನೆಸ್‌' ಖಾತೆ ನಿರ್ವಹಿಸುತ್ತಿದ್ದ 'ಮೆಹ್ದೀ' ಎಂಬ ವ್ಯಕ್ತಿಯನ್ನು ಸಂಪರ್ಕಿಸಿದ್ದು, ಖಾತೆಯ ನಿರ್ವಹಣೆ ಕುರಿತಂತೆ ಆತ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾನೆ ಎಂದು ಸುದ್ದಿವಾಹಿನಿ ಹೇಳಿಕೊಂಡಿದೆ. ವರದಿಯಲ್ಲಿರುವಂತೆ ಮೆಹ್ದೀ ಎಂಬಾತ ಈ ಟ್ವಿಟರ್ ಖಾತೆಯನ್ನು ನಿರ್ವಹಿಸುತ್ತಿದ್ದು, ಈತ ಮೂಲತಃ ಬೆಂಗಳೂರಿಗನಂತೆ. ಬೆಂಗಳೂರಿನಲ್ಲಿದ್ದುಕೊಂಡೇ ಇಸಿಸ್ ಪರವಾಗಿ ಟ್ವಿಟರ್ ಖಾತೆಯಲ್ಲಿ ಸಂದೇಶಗಳನ್ನು ಬಿತ್ತರಿಸುತ್ತಿದ್ದನು.

ಪ್ರತೀ ತಿಂಗಳು ಈತ ಸುಮಾರು 2 ಮಿಲಿಯನ್ ಪ್ರಚೋದನಕಾರಿ ಸಂದೇಶಗಳನ್ನು ಟ್ವಿಟರ್ ಖಾತೆಗೆ ಹಾಕುತ್ತಿದ್ದನು. ಇಸಿಸ್ ಉಗ್ರ ಸಂಘಟನೆಯನ್ನು ಬೆಂಬಲಿಸುತ್ತಿರುವ ವಿಶ್ವಾದ್ಯಂತ ವಿವಿಧ ಪ್ರದೇಶಗಳಲ್ಲಿ ನೆಲೆಗೊಂಡಿರುವ ಸುಮಾರು 17, 700 ಮಂದಿ ಖಾತೆಯನ್ನು ಪ್ರತಿ ನಿತ್ಯ ವೀಕ್ಷಿಸುತ್ತಿದ್ದರು ಮತ್ತು ಆಯಾ ದೇಶಗಳ ಕುರಿತ ಸುದ್ದಿ ಸಮಾಚಾರಗಳನ್ನು ಚರ್ಚೆ ನಡೆಸುತ್ತಿದ್ದರು ಎಂದು ಚಾನೆಲ್ 4 ಸುದ್ದಿವಾಹಿನಿ ಹೇಳಿದೆ.

ಈ ಮೆಹ್ದೀ ಯಾರು?
ಇಸಿಸ್ ಉಗ್ರ ಸಂಘಟನೆಯ ಹೆಸರಲ್ಲಿ ಶಮಿವಿಟ್ನೆಸ್ ಎಂಬ ಟ್ವಿಟರ್ ಖಾತೆ ನಿರ್ವಹಿಸುತ್ತಿದ್ದ ಮೆಹ್ದೀ ಮೂಲತಃ ಬೆಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಂತೆ. ಸಂಸ್ಥೆಯಲ್ಲಿ ಉನ್ನತ ಹುದ್ದೆ ಹೊಂದಿದ್ದರೂ, ರಹಸ್ಯವಾಗಿ ಇಸ್ಲಾಮಿಕ್ ಸ್ಟೇಟ್ ಪರ ಕೆಲಸ ಮಾಡುತ್ತಿದ್ದಾನೆ. 2013ರಲ್ಲಿ ಶಮಿವಿಟ್ನೆಸ್ ಟ್ವಿಟರ್ ಖಾತೆಯನ್ನು ಮೆಹ್ದೀ ತೆರೆದಿದ್ದು, ಜಿಹಾದಿ ಕುರಿತ ಲೇಖನಗಳನ್ನು ಪ್ರಕಟಿಸುವ ಮೂಲಕ ಈ ಖಾತೆ ಭಾರಿ ಸುದ್ದಿಗೆ ಗ್ರಾಸವಾಗಿತ್ತು.

ಅಲ್ಲದೆ ಸಿರಿಯಾದ ಬಿಲಾದ್-ಅಲ್-ಶಾಮ್, ಜಿಹಾದಿ, ಆರ್ಥಿಕ ಬಿಕ್ಕಟ್ಟು, ತಂತ್ರಜ್ಞಾನ, ಇತಿಹಾಸಗಳ ಬಗ್ಗೆ ಬರೆಯುತ್ತಿದ್ದನು. ಇದಲ್ಲದೇ ಇರಾಕ್ ಮತ್ತು ಸಿರಿಯಾದಲ್ಲಿ ಆರಂಭಗೊಂಡಿರುವ ಬಿಕ್ಕಟ್ಟಿನ ಕುರಿತಂತೆ ಲೇಖನಗಳನ್ನು ಪ್ರಕಟಿಸುತ್ತಿದ್ದನು ಮತ್ತು ಇಸಿಸ್ ಸೇರುವಂತೆ ಯುವಕರನ್ನು ಪ್ರೇರೇಪಿಸುತ್ತಿದ್ದನು. ಒಂದು ಮೂಲದ ಪ್ರಕಾರ ಉಗ್ರ ಸಂಘಟನೆಗೆ ಆನ್‌ಲೈನ್ ಮೂಲಕವಾಗಿ ಅತಿದೊಡ್ಡ ಪ್ರಮಾಣದಲ್ಲಿ ಈತನೇ ನೇಮಕಾತಿ ಮಾಡುತ್ತಿದ್ದನು ಎಂದು ಚಾನೆಲ್ 4 ಹೇಳಿದೆ.

ಅಲ್ಲದೆ ತನ್ನ ಕಚೇರಿಯಲ್ಲಿ ಮೆಹ್ದೀ ಎಷ್ಟೇ ಬಿಡುವಿಲ್ಲದೇ ಕೆಲಸ ಮಾಡುತ್ತಿದ್ದರೂ, ನಿತ್ಯ ಕನಿಷ್ಟ 3 ಬಾರಿ ಟ್ವಿಟರ್‌ನಲ್ಲಿ ಸಂದೇಶಗಳನ್ನು ಬರೆಯುತ್ತಿದ್ದನಂತೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ತನ್ನ ಮೊಬೈಲ್‌ನಲ್ಲಿಯೇ ಟ್ವಿಟರ್ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದನಂತೆ.

ಪತ್ರಕರ್ತರ ಶಿರಚ್ಛೇಧ ವಿಡಿಯೋಗಳನ್ನು ಹಾಕಿದ್ದ..
ಇರಾಕ್ ಮತ್ತು ಸಿರಿಯಾದಲ್ಲಿ ಯುದ್ಧ ಸಾರಿರುವ ಇಸಿಸ್ ಹೋರಾಟಕ್ಕೆ ಬೆಂಬಲ ಸೂಚಿಸುವಂತಹ ಮತ್ತು ಇಸಿಸ್ ಉಗ್ರರ ಗೆಲುವಿಗೆ ದೇವರಲ್ಲಿ ಪ್ರಾರ್ಥಿಸುವಂತಹ ಸಂದೇಶಗಳನ್ನು ಟ್ವಿಟರ್‌ನಲ್ಲಿ ಹಾಕುವುದಲ್ಲದೇ, ಇರಾಕ್‌ನಲ್ಲಿರುವ ಲಂಡನ್ ಮತ್ತು ಅಮೆರಿಕ ಪತ್ರಕರ್ತರ ಶಿರಚ್ಛೇಧದ ವಿಡಿಯೋವನ್ನು ಮೆಹ್ದೀ ಪದೇ ಪದೇ ಅಪ್‌ಲೋಡ್ ಮಾಡುತ್ತಿದ್ದನು.

ಖಾತೆ ಮುಟ್ಟುಗೋಲಿನ ನಂತರ ಹೊಸ ಹೆಸರಲ್ಲಿ ಖಾತೆ ತೆರೆದಿದ್ದ
ಸಮಾಜದ್ರೋಹಿ ಸಂದೇಶಗಳನ್ನು ಪ್ರಕಟಿಸುತ್ತಿದ್ದ ಹಿನ್ನಲೆಯಲ್ಲಿ ಮತ್ತು ವಿಶ್ವಸಮುದಾಯದ ವಿರೋಧದ ಹಿನ್ನಲೆಯಲ್ಲಿ 'ಶಮಿವಿಟ್ನೆಸ್‌' ಖಾತೆಯನ್ನು ಟ್ವಿಟರ್ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿತ್ತು. ಇದಾದ ಬಳಿಕ ಟ್ವಿಟರ್ ಅಧಿಕಾರಿಗಳಿಗೆ ಇಸಿಸ್ ಪ್ರಾಣಬೆದರಿಕೆಯ ಕರೆಗಳು ಬಂದಿತ್ತಾದರೂ, ಇದಾದ ಕೆಲ ಸಮಯದ ಬಳಿಕ ಇದೇ ಮೆಹ್ದೀ ಮತ್ತೊಂದು ಹೊಸ ಹೆಸರಲ್ಲಿ ಖಾತೆಯನ್ನು ಮತ್ತೆ ತೆರೆದಿದ್ದಾನಂತೆ. ಅಲ್ಲದೆ ಮತ್ತೊಂದು ಆಘಾತಕಾರಿ ಸುದ್ದಿ ಎಂದರೆ ಈ ಖಾತೆಯನ್ನು ಮೆಹ್ದೀ ಇಂದಿಗೂ ಸಕ್ರಿಯವಾಗಿ ನಿರ್ವಹಣೆ ಮಾಡುತ್ತಿದ್ದಾನಂತೆ ಎಂದು ಚಾನಲ್ 4 ನ್ಯೂಸ್ ಸಂಸ್ಥೆ ಹೇಳಿದೆ.

ಇಸಿಸ್ ಸೇರಲು ಉತ್ಸುಕನಾಗಿದ್ದ ಮೆಹ್ದೀಗೆ ಕುಟುಂಬದಿಂದ ತಡೆ..!
ಇದೇ ವೇಳೆ ಒಂದು ಸಂದರ್ಭದಲ್ಲಿ ಮೆಹ್ದೀ ಭಾರತ ದೇಶವನ್ನು ತೊರೆದು ಇಸಿಸ್ ಉಗ್ರ ಸಂಘಟನೆಯನ್ನು ಸೇರಲು ಉತ್ಸುಕನಾಗಿದ್ದನು. ಆದರೆ ಕೌಟುಂಬಿಕ ಹಿನ್ನಲೆಯಲ್ಲಿ ಆತ ಇಸಿಸ್ ಸೇರದೇ ಬೆಂಗಳೂರಿನಲ್ಲಿಯೇ ಉಳಿದಿದ್ದಾನಂತೆ. ಆರ್ಥಿಕವಾಗಿ ಹಿಂದುಳಿದಿರುವ ಆತನ ಕುಟುಂಬ ಮೆಹ್ದೀ ಮೇಲೆಯೇ ಅವಲಂಬಿತವಾಗಿದ್ದು, ಇದೇ ಕಾರಣಕ್ಕಾಗಿ ಆತ ಬೆಂಗಳೂರು ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾನಂತೆ.

ಜೀವ ಬೆದರಿಕೆ ಇರುವುದರಿಂದ ಸಂಪೂರ್ಣ ವಿವರ ಇಲ್ಲ
ಇದೇ ವೇಳೆ ಮೆಹ್ದೀ ಜೀವಕ್ಕೆ ಅಪಾಯವಿರುವುದರಿಂದ ಆತ ತನ್ನ ಸಂಪೂರ್ಣ ವಿವರ ಬಹಿರಂಗ ಪಡಿಸಿಲ್ಲ ಎಂದು ಚಾನಲ್ 4 ವಾಹಿನಿ ಹೇಳಿಕೊಂಡಿದ್ದು, ಈ ವಿಚಾರವನ್ನು ಆತನೇ ಸುದ್ದಿಸಂಸ್ಥೆಗೆ ತಿಳಿಸಿದ್ದಾನಂತೆ. ಹೀಗಾಗಿಯೇ ಸುದ್ದಿ ವಾಹಿನಿ ಆತನ ವಿವರವನ್ನು ಸಂಪೂರ್ಣವಾಗಿ ಬಹಿರಂಗಗೊಳಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com