
ಖಾಂಕೆ (ಇರಾಕ್): ಇಡೀ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿರುವ ಇಸ್ಲಾಮಿಕ್ ಸ್ಟೇಟ್ಸ್ ಉಗ್ರರ ಹಾವಳಿ ಮಿತಿ ಮೀರಿದ್ದು, ಇಂತಹ ಅತ್ಯಂತ ಅಪಾಯಕಾರಿ ಉಗ್ರರ ಬಳಿ ಒತ್ತೆಯಾಳಾಗಿದ್ದ 15 ಬಾಲೆಯೊಬ್ಬಳು ತಪ್ಪಿಸಿಕೊಂಡು ಬಂದಿದ್ದಾಳೆ.
ಇರಾಕ್ ನಲ್ಲಿ ನಡೆಯುತ್ತಿರುವ ಸರ್ಕಾರ ಮತ್ತು ಇಸಿಸ್ ಉಗ್ರರ ನಡುವಿನ ಯುದ್ಧದಲ್ಲಿ ಮೇಲುಗೈ ಸಾಧಿಸಲು ಹವಣಿಸುತ್ತಿರುವ ಉಗ್ರರು ಇದಕ್ಕಾಗಿ ಬಡ ಹೆಣ್ಣುಮಕ್ಕಳನ್ನು ಅಪಹರಿಸುತ್ತಿದ್ದು, ಅವರ ಮೂಲಕವಾಗಿ ಸರ್ಕಾರವನ್ನು ಹಣಿಯುವ ಯತ್ನ ಮಾಡುತ್ತಿದ್ದಾರೆ. ಹೀಗೆ ಅಪಹರಣಕ್ಕೊಳಗಾದ ಸಾವಿರಾರು ಹೆಣ್ಣುಮಕ್ಕಳ ಪೈಕಿ ಕೆಲ ಧೈರ್ಯವಂತ ಹೆಣ್ಣುಮಕ್ಕಳು ಉಗ್ರ ಕಣ್ಣುತಪ್ಪಿಸಿಕೊಂಡು ಬಂದಿದ್ದು, ಈ ಪೈಕಿ ಓರ್ವ ಎಝದಿ ಧರ್ಮಕ್ಕೆ ಸೇರಿದ ಹೆಣ್ಣುಮಗಳು ತನ್ನ ಕಥೆಯನ್ನು ವಿವರಿಸಿದ್ದಾಳೆ.
'ನಾನು ನನ್ನ ಅಮ್ಮನ ಕೈಯನ್ನು ಬಹಳ ಗಟ್ಟಿಯಾಗಿ ಹಿಡಿದುಕೊಂಡು ಅಳುತ್ತಾ ನಿಂತಿದ್ದೆ. ಅಲ್ಲಿದ್ದ ಉಗ್ರನೊಬ್ಬ ನನ್ನನ್ನು ಥಳಿಸಿ ತನ್ನ ಜೊತೆಗೆ ಬರುವಂತೆ ಒತ್ತಾಯಿಸಿದ. ಆದರೆ ನಾನು ಆತನೊಂದಿಗೆ ತೆರಳಲು ಒಪ್ಪದಿದ್ದಾಗ ನನ್ನ ಅಮ್ಮ ನೀನು ಆತನೊಂದಿಗೆ ಹೋಗದಿದ್ದರೆ ಆತ ನಿನ್ನನ್ನು ಮತ್ತು ನಮ್ಮನ್ನು ಕೊಂದು ಹಾಕುತ್ತಾನೆ ಎಂದು ಹೇಳಿದಳು. ಆತ ನನ್ನ ತಲೆಗೆ ಪಿಸ್ತೂಲ್ ಇಟ್ಟು ತನ್ನ ಜೊತೆ ಬರುವಂತೆ ಆಗ್ರಹಿಸಿದ. ಆದರೆ ನಾನು ಆತನೊಂದಿಗೆ ಹೋಗುಲು ನಿರಾಕರಿಸಿದೆ. ಆಗ ಮತ್ತೋರ್ವ ಉಗ್ರ ನನ್ನ ಅಕ್ಕನ ಕುತ್ತಿಗೆಗೆ ಕತ್ತಿ ಇಟ್ಟು ನನ್ನ ನೋಡಿದ. ಆಗ ಅನಿವಾರ್ಯವಾಗಿ ನಾನು ಅವರೊಂದಿಗೆ ಹೋಗಲೇ ಬೇಕಾಯಿತು.
ನನ್ನನ್ನು ಬಲವಂತವಾಗಿ ಹೊರಗೆಳೆದೊಯ್ದ ಉಗ್ರ ಒಂದು ಮಿನಿ ಬಸ್ನಲ್ಲಿ ನನ್ನನ್ನು ತಳ್ಳಿದ. ನಾನು ಬಸ್ ಒಳಗೆ ಹೋದಾಗ ಅದಾಗಲೇ ಅಲ್ಲಿ ನನ್ನಂತೆಯೇ ಅಲ್ಲಿ ಅಪಹರಣಕ್ಕೊಳಗಾಗಿದ್ದ ಸುಮಾರು 25ರಿಂದ 30 ಮಂದಿ ಹುಡಿಗಿಯರಿದ್ದರು. ನನ್ನನ್ನು ಮತ್ತ ನನ್ನ ಅಕ್ಕ ಸೇರಿದಂತೆ ಎಲ್ಲರನ್ನೂ ತುಂಬಿಸಿಕೊಂಡ ಬಸ್ ನೇರವಾಗಿ ಇಸಿಸ್ ಉಗ್ರರ ಹಿಡಿತದಲ್ಲಿರುವ ಮೊಸುಲ್ ನಗರಕ್ಕೆ ತೆರಳಿತು. ಅಲ್ಲಿ 3 ಅಂತಸ್ತಿನ ದೊಡ್ಡ ಕಟ್ಟಡದ ಒಳಗೆ ನಮ್ಮನ್ನು ಕರೆದೊಯ್ಯಲಾಗಿತ್ತು. ಅಲ್ಲಿಯೂ ಕೂಡ ನಮ್ಮಂತೆಯೇ ಅಪಹರಣಕ್ಕೊಳಗಾಗಿದ್ದ ನೂರಾರು ಹುಡುಗಿಯರಿದ್ದರು.
ಅಲ್ಲಿ ಒಂದು ವಿಚಿತ್ರ ವ್ಯವಸ್ಥೆ ಇತ್ತು. ಇಸ್ಲಾಮಿಕ್ ಸ್ಟೇಟ್ಸ್ ಉಗ್ರರಲ್ಲೇ ವಿವಿಧ ಶ್ರೇಣಿಗಳಿದ್ದು, ಮೊದಲ ಶ್ರೇಣಿಯ ಉಗ್ರರು ತಮಗೆ ಇಷ್ಟವಾದ ಹುಡುಗಿಯನ್ನು ತಾವೇ ಅರಿಸಿಕೊಳ್ಳಬಹುದಿತ್ತು. ಮತ್ತು ತಮಗೆ ಎಷ್ಟು ಮಂದಿ ಬೇಕೋ ಅಷ್ಟು ಮಂದಿಯನ್ನು ಅವರು ಒಂದೇ ಬಾರಿ ಆರಿಸಿಕೊಳ್ಳಬಹುದಿತ್ತು. ಅವರಿಗಿಂತ ಕೆಳ ಶ್ರೇಣಿಯ ಉಗ್ರರಿಗೆ ಇಬ್ಬರು ಹುಡಿಯರನ್ನು ಮಾತ್ರ ಆರಿಸುವ ಅವಕಾಶವಿದ್ದು, ಅವರು ತಮಗಿಷ್ಟವಾದ ಇಬ್ಬರು ಹುಡುಗಿಯರನ್ನು ಮಾತ್ರ ಆರಿಸಿಕೊಳ್ಳಬಹುದಿತ್ತು. ಇನ್ನು ಕೆಳ ಶ್ರೇಣಿಯ ಉಗ್ರರು ತಮಗಿಷ್ಟವಾದ ಕೇವಲ ಒಂದು ಹುಡುಗಿಯನ್ನು ಮಾತ್ರ ಆರಿಸಿಕೊಳ್ಳಬಹುದಿತ್ತು. ಹೀಗೆ ಆರಿಸಿಕೊಂಡ ಹುಡುಗಿಯರನ್ನು ಅವರು ಇಸ್ಲಾಂಗೆ ಮತಾಂತರ ಮಾಡಿ ಒತ್ತಾಯಪೂರ್ವಕವಾಗಿ ಮದುವೆ ಮಾಡಿಕೊಳ್ಳುತ್ತಿದ್ದರು. ಅಥವಾ ಅತ್ಯಾಚಾರ ಮಾಡಿ ಇತರೆ ಇಸ್ಲಾಂ ಉಗ್ರರಿಗೆ ಮಾರಾಟ ಮಾಡುತ್ತಿದ್ದರು.
ಹೀಗೆ ಹುಡುಗಿಯರನ್ನು ಆರಿಸಿಕೊಳ್ಳುವ ಪ್ರಕ್ರಿಯೆ ವೇಳೆ ಓರ್ವ ಉಗ್ರ ಸುಮಾರು 12 ವರ್ಷದ ಹುಡುಗಿಯೊಬ್ಬಳನ್ನು ಆರಿಸಿಕೊಂಡು ಆಕೆಯನ್ನು ಕರೆದ. ಆದರೆ ಆಕೆ ಹೋಗಲು ನಿರಾಕರಿಸಿದಳು. ಉಗ್ರ ಕೋಪಗೊಂಡು ಆಕೆಯ ಅಕ್ಕನ ಕುತ್ತಿಗೆಗೆ ಕತ್ತಿ ಇಟ್ಟು ನಿನ್ನ ತಂಗಿಯನ್ನು ಒಪ್ಪಿಸು ಎನ್ನುವ ರೀತಿಯಲ್ಲಿ ಒತ್ತಾಯಪಡಿಸಿದ. ಆಗ ಆ ಹುಡುಗಿ ತುಂಬಾ ದಿಗಿಲಿನಿಂದ ಕೂಡಿದ ಮೌನದಿಂದ ತನ್ನ ಅಕ್ಕನನ್ನು ನೋಡಿ ಪರೋಕ್ಷವಾಗಿ ಒಪ್ಪಿಗೆ ನೀಡಿದಂತೆ ನೋಡಿದಳು. ಆಕೆ ಒಂದು ಮಾತನ್ನಾಗಲಿ ಅಥವ ಅಳುವುದನ್ನಾಗಲಿ ಮಾಡಲೇ ಇಲ್ಲ. ಆಕೆ ತನ್ನ ಜೀವನ ಇಲ್ಲಿಗೇ ಕೊನೆಯಾಯಿತು ಎಂಬ ರೀತಿಯಲ್ಲಿ ತನ್ನ ಮುಖದಲ್ಲಿ ಯಾವುದೇ ಭಾವನೆಗಳನ್ನೂ ತೋರ್ಪಡಿಸಲಿಲ್ಲ. ಅದೇ ಕೊನೆ ನಾನು ಆಕೆಯನ್ನು ಕೊನೆಯ ಬಾರಿಗೆ ನಾನು ನೋಡಿದ್ದು, ಮತ್ತೆ ಆಕೆಯನ್ನು ನಾನು ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ನೋಡಲೇ ಇಲ್ಲ.
ಆದರೆ ನನ್ನೊಂದಿಗೆ ಇದ್ದವರು ಮಾತನಾಡಿ ಕೊಳ್ಳುತ್ತಿದ್ದಂತೆ ಆಕೆ ಸುಮಾರು 8 ಬಾರಿ ಉಗ್ರರಿಂದ ಉಗ್ರರಿಗೆ ಹಂಚಿಕೆಯಾಗಿದ್ದಾಳೆ ಎಂದು ತಿಳಿದುಬಂದಿತು.
ಇಲ್ಲಿ ಅಪಹರಣಕ್ಕೊಳಗಾದ ಹುಡುಗಿಯರನ್ನು ಸಿರಿಯಾದ ಗಡಿಗೆ ಕರೆದೊಯ್ದು ಮಾರಾಟ ಮಾಡುತ್ತಾರೆ. ಹುಡುಗಿಯರ ಅಪಹರಣ ಮತ್ತು ಅವರ ಮಾರಾಟ ಉಗ್ರರ ಆದಾಯ ಮೂಲಗಳಲ್ಲಿ ಪ್ರಮುಖವಾದದ್ದು. ನಮ್ಮನ್ನು ಇಟ್ಟಿದ್ದ ಮನೆಯಲ್ಲಿ ಉಗ್ರರು ಒತ್ತಾಯಪೂರ್ವಕವಾಗಿ ಹುಡುಗಿಯರ ಬಟ್ಟೆ ಬಿಚ್ಚಿಸುತ್ತಿದ್ದರು. ಅದೂ ಕೂಡ ಎಲ್ಲ ಉಗ್ರರ ಸಮ್ಮುಖದಲ್ಲಿ. ನಾವು ಕೂಡ ಅನಿವಾರ್ಯವಾಗಿ ಅವರ ಮುಂದೆಯೇ ಸ್ನಾನ ಮಾಡಿ ಬಟ್ಟೆ ಬದಲಾಯಿಸುತ್ತಿದೆವು. ನಮಗೆ ಇಸ್ಲಾಂ ಸಂಪ್ರದಾಯದ ಬಟ್ಟೆಗಳನ್ನು ನೀಡಿ ಅದನ್ನೇ ತೊಡುವಂತೆ ಆಜ್ಞೆ ಮಾಡುತ್ತಿದ್ದರು.
ರಾಖಾ ಬಳಿ ಇರುವ ಮನೆಯೊಂದರಲ್ಲಿ ನಮ್ಮನ್ನು ಅಡಗಿಸಿಟ್ಟಿದ್ದಾಗ ನಾವು ಉಗ್ರರ ಕೈಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದೆವು. ಆದರೆ ಅದು ಸಫಲವಾಗಲಿಲ್ಲ. ಆಗ ಹತ್ತಾರು ಉಗ್ರರು ನಮ್ಮನ್ನು ಮನಸೋ ಇಚ್ಛೆ ಥಳಿಸಿದರು. ಕೆಲ ಜಿಹಾದಿ ನಾಯಕರು ನಮ್ಮಲ್ಲಿನ ಕೆಲ ಹುಡುಗಿಯರಿಗೆ ಕಬ್ಬಿಣದ ಸರಳುಗಳನ್ನು ಹಾಕಿ ಕ್ರೂರವಾಗಿ ನಡೆದುಕೊಂಡರು. ಮತ್ತೊಂದೆಡೆ ಮನೆಯ ಇನ್ನೊಂದು ಬದಿಯಲ್ಲಿ ಬಂಧಿತರಾಗಿದ್ದ ಹುಡುಗಿಯರನ್ನು ಉಗ್ರರು ಆಗ್ಗಿಂದಾಗ್ಗೆ ಬಂದು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಗೈಯ್ಯುತ್ತಿದ್ದರು.
ಕೊನೆಗೆ ಮನೆಯಲ್ಲಿ ಉಗ್ರ ಸಂಖ್ಯೆ ಕಡಿಮೆ ಇದ್ದಾಗ ಅವರ ಕಣ್ಣುತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾದೆವು. ಗಡಿಯಲ್ಲಿ ಇರಾಕ್ ಪೊಲೀಸರು ನಮ್ಮನ್ನು ವಶಕ್ಕೆ ತೆಗೆದುಕೊಂಡು ಇದೀಗ ನಮ್ಮ ಕುಟುಂಬದವರೊಂದಿಗೆ ಸೇರಿಸಿದ್ದಾರೆ. ನಾವು ತಪ್ಪಿಸಿಕೊಂಡು ಬರುವ ಮುನ್ನ ಕೂಡ ನಮ್ಮ ಮೇಲೆ ಸುಮಾರು ನಾಲ್ಕೈದು ಬಾರಿ ಸುಮಾರು ಉಗ್ರರು ಸಾಮೂಹಿಕವಾಗಿ ಅತ್ಯಾಚಾರ ಗೈದಿದ್ದಾರೆ ಎಂದು ಆ ಬಾಲಕಿ ಹೇಳಿದ್ದಾಳೆ.
ಇಸಿಸ್ ಉಗ್ರರ ಕುರಿತು 15ರ ಬಾಲಕಿ ಹೇಳಿರುವ ಈ ಮಾತುಗಳು ಅಪಹರಣವನ್ನು ಇಸಿಸ್ ಉಗ್ರರು ಎಷ್ಟು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಸರ್ಕಾರವನ್ನು ಬೆದರಿಸುವ ಮತ್ತು ಆ ಸರ್ಕಾರವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಕ್ಕಾಗಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಿತ್ಯ ಸಾವಿರಾರು ಹುಡುಗಿಯರು ಮತ್ತು ಮಹಿಳೆಯರನ್ನು ಅಪಹರಿಸುತ್ತಾರೆ.
ಹುಡುಗಿಯರನ್ನು ಅವರ ಕುಟುಂಬದಿಂದ ಬೇರ್ಪಡಿಸಿ, ಉಗ್ರರು ತಮ್ಮ ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುತ್ತಾರೆ. ಇರಾಕ್ನಲ್ಲಿ ಹೆಣ್ಣುಮಕ್ಕಳ ಅಪಹರಣ ಒಂದು ಉಧ್ಯಮವಾಗಿ ಬೆಳೆದಿದ್ದು, ಹೆಣ್ಣುಮಕ್ಕಳನ್ನು ಅಪಹರಿಸಿ ಅವರಲ್ಲಿ ವಯೋವಾನಕ್ಕೆ ಅನುಗುಣವಾಗಿ ಬೇರ್ಪಡಿಸಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಾಯಪಡಿಸುತ್ತಾರೆ. ಅಪಹರಣಕ್ಕೊಳಗಾದ ಯುವತಿಯರನ್ನು ಇಸ್ಲಾಮಿಕ್ ಸ್ಟೇಟ್ಸ್ ಉಗ್ರರೊಂದಿಗೆ ಒತ್ತಾಯ ಪೂರ್ವಕವಾಗಿ ಮದುವೆ ಮಾಡಿಸುತ್ತಾರೆ. ಇಲ್ಲವಾದರೆ ಸರಥಿ ಸಾಲಲ್ಲಿ ಅತ್ಯಾಚಾರ ಮಾಡುತ್ತಾರೆ. ಅಪಹರಣಕ್ಕೊಳಗಾದ ನಮ್ಮಂತಹ ಹೆಣ್ಣುಮಕ್ಕಳನ್ನು ಮುಂದಿಟ್ಟುಕೊಂಡು ಸರ್ಕಾರದೊಂದಿಗೆ ಚೌಕಾಸಿ ನಡೆಸುತ್ತಾರೆ.
ಒಟ್ಟಾರೆ ಪ್ರಸ್ತುತ ಇರಾಕ್ನಲ್ಲಿ ತಮ್ಮ ಪ್ರಭುತ್ವ ಸಾಧಿಸಿರುವ ಇಸಿಸ್ ಉಗ್ರರು ಭವಿಷ್ಯದಲ್ಲಿ ಇಡೀ ವಿಶ್ವಕ್ಕೆ ಮಾರಕವಾಗುವ ಸಾಧ್ಯತೆ ಇದ್ದು, ಉಗ್ರರನ್ನು ಮಟ್ಟಹಾಕುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಕಠಿಣ ಹಜ್ಜೆ ಇಡಬೇಕಿದೆ.
Advertisement