

ಟ್ರಿಪೊಲಿ: ಇಸಿಸ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು ಇದೀಗ ಮತ್ತೆ ಲಿಬಿಯಾದ ಕರಾವಳಿ ತೀರ ಪ್ರದೇಶದಲ್ಲಿ ಇಥಿಯೋಪಿಯಾದ 30 ಕ್ರೈಸ್ತರ ಶಿರಚ್ಛೇದ ಮಾಡಿದ ವಿಡಿಯೋವನ್ನು ಭಾನುವಾರ ಬಿಡುಗಡೆ ಮಾಡಿದೆ.
ಸಿರಿಯಾ ಕ್ರೈಸ್ತರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತಹ ಆಯ್ಕೆಯನ್ನು ಇಸಿಸ್ ನೀಡಿತ್ತು. ಆಯ್ಕೆಯನ್ನು ತೆಗೆದುಕೊಳ್ಳದೆ ಇಸ್ಲಾಂ ಧರ್ಮಕ್ಕೆ ಸೇರ್ಪಡೆಗೊಳ್ಳದಿದ್ದರೆ ಕ್ರಿಶ್ಚಿಯನ್ನರು ತಕ್ಕೆ ಬೆಲೆ ತೆರಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ಇಸಿಸ್ ನೀಡಿತ್ತು. ಇದರಂತೆ ಇಸ್ಲಾಂ ಧರ್ಮಕ್ಕೆ ಸೇರ್ಪಡೆಯಾಗದ ಕ್ರಿಶ್ಚಿಯನ್ನರನ್ನು ಇಸಿಸ್ ಹತ್ಯೆಗಯ್ಯಲು ಮುಂದಾಗಿತ್ತು. ತಾನು ಹೇಳಿದಂತೆಯೇ ಈ ಹಿಂದೆ ಲಿಬಿಯಾದ ಕರಾವಳಿ ತೀರ ಪ್ರದೇಶದಲ್ಲಿ ಈಜಿಪ್ಟ್ ನ 21 ಮಂದಿ ಕ್ರಿಶ್ಚಿಯನ್ ರನ್ನು ಶಿರಚ್ಛೇದ ಮಾಡಿದ್ದ ಬೀಭತ್ಸ್ಯ ಕೃತ್ಯದ ವೀಡಿಯೋವನ್ನು ಇಸಿಸ್ ಬಿಡುಗಡೆ ಮಾಡಿತ್ತು.
ಇದೀಗ ಮತ್ತೆ 30 ಕ್ರೈಸ್ತರ ಶಿರಚ್ಛೇದ ಮಾಡಿರುವ ವೀಡಿಯೋವನ್ನು ಬಿಡುಗಡೆ ಮಾಡಿದೆ. ಈ ವೀಡಿಯೋ 29 ನಿಮಿಷಗಳ ಅವಧಿಯಿದ್ದು. ವೀಡಿಯೋದಲ್ಲಿ 2 ಗುಂಪುಗಳು ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.
ವೀಡಿಯೋದಲ್ಲಿ ಇಸಿಸ್ ಗೆ ಸೇರಿದ ವ್ಯಕ್ತಿಗಳು ಮುಸುಕುದಾರಿಗಳಾಗಿದ್ದು, ಕೈಯಲ್ಲಿ ಪಿಸ್ತೂಲ್ ಹಿಡಿದು ಪ್ರತಿಯೊಬ್ಬರ ಮುಂದೆಯೂ ಒಬ್ಬೊಬ್ಬ ಕ್ರಿಶ್ಚಿಯನ್ ವ್ಯಕ್ತಿಯನ್ನು ಹಿಡಿದುಕೊಂಡಿದ್ದಾರೆ. ನಾವು ಮತ್ತೆ ಬಂದಿದ್ದೇವೆ. ಕ್ರಿಶ್ಚಿಯನ್ನರು ಇಸ್ಲಾಂ ಧರ್ಮಕ್ಕೆ ಸೇರ್ಪಡೆಯಾಗುವವರೆಗೂ ಅವರಿಗೆ ಎಂದಿಗೂ ರಕ್ಷಣೆಯಿಲ್ಲ, ಹತ್ಯೆ ಮುಂದುವರೆಸುತ್ತಲೇ ಇರುತ್ತೇವೆ. ಹೇಳಿದಂತೆ ಮಾಡಿದ್ದೇವೆ ಎಂಬ ಆತಂಕಕಾರಿ ಸಂದೇಶವನ್ನು ಈ ವಿಡಿಯೋ ಮೂಲಕ ಇಸಿಸ್ ರವಾನಿಸಿದೆ.
ವೀಡಿಯೋದಲ್ಲಿ 2 ಗುಂಪುಗಳಿದ್ದು ಒಂದು ಗುಂಪು 12 ಜನರನ್ನು ಬೀಚ್ ನಲ್ಲಿ ಕರೆದುಕೊಂಡು ಹೋಗುವ ದೃಶ್ಯವಿದೆ. ಮತ್ತೊಂದು ವಿಡಿಯೋದಲ್ಲಿ 16 ಜನರನ್ನು ಮರಳಿನಲ್ಲಿ ನಿಲ್ಲಿಸಿಕೊಂಡು ತಲೆಬಳಿ ಪಿಸ್ತೂಲ್ ಹಿಡಿದಿರುವ ದೃಶ್ಯವಿದೆ. ಆದರೆ ವಿಡಿಯೋದಲ್ಲಿ ಎಷ್ಟು ಮಂದಿಯನ್ನು ಉಗ್ರರು ಹತ್ಯೆ ಮಾಡಿದ್ದಾರೆ ಎಂಬುದರ ಕುರಿತಂತೆ ಮಾಹಿತಿ ಲಭ್ಯವಾಗಿಲ್ಲ.
ಇಸಿಸ್ ಉಗ್ರರ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಧರ್ಮದ ಹೆಸರಿನಲ್ಲಿ ಉಗ್ರರು ನಡೆಸಿರುವ ಈ ಕೃತ್ಯವನ್ನು ಖಂಡಿಸುತ್ತೇವೆ. ಘಟನೆ ಕುರಿತಂತೆ ಭದ್ರತಾ ಮಂಡಳಿಗಳ ತುರ್ತು ಸಭೆ ಕರೆಯಬೇಕಿದೆ. ಧರ್ಮದ ಹೆಸರಿನಲ್ಲಿ ಕ್ರೌರ್ಯ ಮೆರೆಯುವ ಉಗ್ರರ ವಿರುದ್ಧ ಅಮೆರಿಕ ನಿಲ್ಲಲ್ಲಿದ್ದು, ಉಗ್ರರ ವಿರುದ್ಧದ ಅಮೆರಿಕ ಹೋರಾಟ ಮತ್ತೆ ಮುಂದುವರೆಯಲಿದೆ ಎಂದು ಹೇಳಿದೆ.