

ನವದೆಹಲಿ: ಭಾರತದಲ್ಲಿ ಸದ್ಯಕ್ಕೆ ಚಲಾವಣೆಯಲ್ಲಿರುವ ನಕಲಿ ನೋಟುಗಳ ಮೊತ್ತ ಎಷ್ಟು ಗೊತ್ತಾ ? ಬರೋಬ್ಬರಿ ರು. 400 ಕೋಟಿ ಅಷ್ಟೇ ಅಲ್ಲ, ಪ್ರತಿ ವರ್ಷ ರು. 70 ಕೋಟಿ ಮೊತ್ತದ ನಕಲಿ ನೋಟುಗಳು ದೇಶದೊಳಕ್ಕೆ ಸಾಗಿಸಲ್ಪಡುತ್ತದೆ. ಹೀಗೆಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯ ಸೂಚನೆ ಮೇರೆಗೆ ಭಾರತೀಯ ಅಂತಿ ಅಂಶ ಸಂಸ್ಥೆ ನಡೆಸಿದ ಅಧ್ಯಯನ ಹೇಳಿದೆ. ಇದೇ ವೇಳೆ, ನಕಲಿ ನೋಟುಗಳ ಹಿಂದೆ ಪಾಕಿಸ್ತಾನದ ಕೈವಾಡವಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿ ವರ್ಷ ರು. 2500 ಕೋಟಿ ಮೌಲ್ಯದ ನಕಲಿ ನೋಟುಗಳು ದೇಶದೊಳಕ್ಕೆ ರವಾನಿಸಲ್ಪಡುತ್ತವೆ ಎಂದು ಆ ಹಿಂದೆ ಗುಪ್ತಚರ ಸಂಸ್ಥೆಗಳು ಅಂದಾಚಿಸಿದ್ದವು. ಆದರೆ, ಈ ಮೊತ್ತ ಅಷ್ಟೇನೂ ಅಲ್ಲ ಎಂದಿರುವ ಅಧ್ಯಯನ ವರದಿ, ಆ ಸಂಖ್ಯೆಯನ್ನು ರು. 70 ಕೋಟಿ ಎಂದು ಹೇಳಿದೆ.
ಪಾಕ್ ಕೈವಾಡ?: ಮುಟ್ಟುಗೋಲು ಹಾಕಲಾದ ನಕಲಿ ನೋಟುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದಾಗ, ಅವುಗಳಲ್ಲಿ ಬಳಸಲಾದ ಪೇಪರ್, ಇಂಕ್ ಮತ್ತು ಇತರೆ ಅಂಶಗಳು ಪಾಕಿಸ್ತಾನದ ಲೀಗಲ್ ಟೆಂಡರ್‍ಗೆ ಹೊಂದಾಣಿಕೆಯಾಗುತ್ತಿದ್ದವು. ಎಂದು ಗೃಹ ಸಚಿವಾಲಯದ ಅ„ಕಾರಿ ತಿಳಿಸಿದ್ದಾರೆ. ``ಭಾರತದಲ್ಲಿ ಚಲಾವಣೆಯಲ್ಲಿರುವ ನಕಲಿ ನೋಟುಗಳು ಪಾಕಿಸ್ತಾನದಿಂದ ರವಾನೆಯಾಗಿದ್ದು ಎಂದು ಹೇಳಲು ಸೂಕ್ತ ಕಾರಣಗಳಿವೆ. ಆದರೆ, ಎಷ್ಟು ನಕಲಿ ನೋಟುಗಳು ಚಲಾವಣೆಯಲ್ಲಿವೆ ಎಂಬ ಬಗ್ಗೆ ವೈಜ್ಞಾನಿಕ ಅಂದಾಜು ಬೇಕಿತ್ತು. ಅದಕ್ಕಾಗಿಯೇ ಈ ಬಗ್ಗೆ ಅಧ್ಯಯನ ನಡೆಸುವಂತೆ ಅಂಕಿಅಂಶ ಸಂಸ್ಥೆಗೆ ಎನ್‍ಐಎ ಸೂಚಿಸಿದ್ದು'' ಎಂದೂ ಅವರು ಹೇಳಿದ್ದಾರೆ ಎಂದು ಹಿಂದೂಸ್ಥಾನ್ ಟೈಮ್ಸ್ ವರದಿಮಾಡಿದೆ. ಭಾರತೀಯ ರಿಸರ್ವ್ ಬ್ಯಾಂಕ್, ರಾಷ್ಟ್ರೀಯ ಅಪರಾಧದಾಖಲೆಗಳ ಬ್ಯೂರೋ, ಗುಪ್ತಚರ ಸಂಸ್ಥೆ, ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್, ಕೇಂದ್ರ ಆರ್ಥಿಕ ಗುಪ್ತಚರ ಸಂಸ್ಥೆ, ಸಿಬಿಐ ಮತ್ತು ಇತರರು ನೀಡಿರುವ ಮಾಹಿತಿಗಳನ್ನೆಲ್ಲ ಆಧರಿಸಿ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಅಂಕಿಅಂಶ ಸಂಸ್ಥೆ ತಿಳಿಸಿದೆ. ಇದೇ ವೇಳೆ, ರಾಜ್ಯ ಪೊಲೀಸ್ ಘಟಕಗಳು ನಕಲಿ ಕರೆನ್ಸಿ ನೋಟುಗಳ ವಶ ಮತ್ತು ಪತ್ತೆ ಬಗೆಗಿನ ವಿವರಗಳನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋಗೆ ಕಳುಹಿಸಿಕೊಡುತ್ತಿಲ್ಲ ಎಂದೂ ಸಂಸ್ಥೆ ಆರೋಪಿಸಿದೆ.