

ನವದೆಹಲಿ: ಸುಷ್ಮಾ ಸ್ವರಾಜ್ ಹಾಗೂ ಅವರ ಮಗಳು ಬದುಕುವುದಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆಯೇ ಹೊರತು ಮಕ್ಕಳು ಹಾಗೂ ಮೊಮ್ಮಕ್ಕಳು ಬದುಕುವುದಕ್ಕಾಗಿ ಈಗಲೇ ಹಣ ಮಾಡುವುದಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ವರಿಷ್ಟರ ಹೇಳಿಕೆಗೆ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರು ಶುಕ್ರವಾರ ತಿರುಗು ಬಾಣ ಬಿಟ್ಟಿದ್ದಾರೆ.
ಲಲಿತ್ ಮೋದಿ ಪ್ರಕರಣ ಸಂಬಂಧ ನಿನ್ನೆಯಷ್ಟೇ ಪ್ರತಿಕ್ರಿಯೆ ನೀಡಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನನ್ನ ಜಾಗದಲ್ಲಿ ಸೋನಿಯಾ ಗಾಂಧಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂದು ಭಾವನಾತ್ಮಕವಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಸೋನಿಯಾ ಗಾಂಧಿ ಅವರು ಸುಷ್ಮಾ ಸ್ವರಾಜ್ ಉತ್ತಮ ಡ್ರಾಮಾ ಕ್ವೀನ್ ಎಂದು ಹೇಳಿದ್ದರು.
ಕಾಂಗ್ರೆಸ್ ಪಕ್ಷದ ಈ ಹೇಳಿಕೆಗೆ ತಿರುಗು ಬಾಣ ಬಿಟ್ಟಿರುವ ಸ್ಮೃತಿ ಇರಾನಿ ಅವರು, ಸುಷ್ಮಾ ಸ್ವರಾಜ್ ಹಾಗೂ ಅವರ ಮಕ್ಕಳು ಶ್ರಮ ಪಟ್ಟು ದುಡಿಯುತ್ತಿದ್ದಾರೆ. ಬೇರಾವುದೇ ಅಕ್ರಮ ಹಣದಿಂದಲ್ಲ. ಶ್ರಮ ಪಟ್ಟು ದುಡಿಯುತ್ತಿರುವುದು ಅವರು ಬದುಕುವುದಕ್ಕಾಗಿ. ಮುಂದಿನ ಪೀಳಿಗೆ ಬದುಕಲು ಈಗಲೇ ಹಣ ಮಾಡುತ್ತಿಲ್ಲ. ಕಾಂಗ್ರೆಸ್ ಪಕ್ಷ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಶ್ರಮದ ದುಡಿಮೆ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೇನು ಗೊತ್ತಿದೆ ಎಂದು ಹೇಳಿದ್ದಾರೆ.