

ಜಮ್ಮು: ಪಾಕಿಸ್ತಾನ ಬುಧವಾರ ಮತ್ತೆ ಕದನ ವಿರಾಮ ಉಲ್ಲಂಘಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ(ಎಲ್‌ಒಸಿ) ಬಳಿ ಎರಡು ಕಡೆ ಅಪ್ರೋದಿತ ಗುಂಡಿನ ದಾಳಿ ನಡೆಸಿದೆ.
ಸಬ್‌ಜಿಯಾನ್ ಮತ್ತು ಮಂಡಿ ಪ್ರದೇಶದಲ್ಲಿ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ಪಾಕ್ ಸೈನಿಕರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ಮನಿಶ್ ಮೆಹ್ತಾ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಎರಡೂ ಸ್ಥಳಗಳಲ್ಲಿ ಇಂದು ಬೆಳಗ್ಗೆ 10.30ರಿಂದ ಪಾಕಿಸ್ತಾನ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು, ನಮ್ಮ ಸೈನಿಕರು ಸಹ ಪ್ರತಿದಾಳಿ ನಡೆಸುತ್ತಿದ್ದಾರೆ. ಆದರೆ ದಾಳಿಯಲ್ಲಿ ಭಾರತೀಯ ಯೋಧರು ಗಾಯಗೊಂಡಿರುವ ಬಗ್ಗೆ ಅಥವಾ ಯಾವುದೇ ಜೀವ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.