ಹೃತಿಕ್ ಜೊತೆ 'ರೊಮ್ಯಾಂಟಿಕ್ ಡೇಟ್': ಮಾತುತಪ್ಪಿದ ಕೊಕಾ ಕೋಲಾ ವಿರುದ್ಧ ಯುವತಿ ದೂರು

ಕೊಕಾ ಕೋಲಾ ಕಂಪೆನಿ ತನಗೆ ಇದುವರೆಗೆ ಹೃತಿಕ್ ಭೇಟಿಗೆ ವ್ಯವಸ್ಥೆ ಮಾಡಿಲ್ಲ ಎಂದು ಚಂಡೀಗಢದ ಯುವತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.
ಹೃತಿಕ್ ರೋಷನ್ ನಟಿಸಿದ ಕೊಕಾ ಕೋಲಾ ಜಾಹೀರಾತು ಚಿತ್ರ
ಹೃತಿಕ್ ರೋಷನ್ ನಟಿಸಿದ ಕೊಕಾ ಕೋಲಾ ಜಾಹೀರಾತು ಚಿತ್ರ
Updated on: 

ಮುಂಬೈ: ಬಾಲಿವುಡ್ ಹಾರ್ಟ್ ತ್ರೋಬ್ ಹೃತಿಕ್ ರೋಷನ್ ನ್ನು ಭೇಟಿ ಮಾಡಿ ಆತನ ಜೊತೆ ಕುಳಿತುಕೊಂಡು ಊಟ ಮಾಡಬೇಕೆಂಬ ಹಂಬಲ ಹಲವರಿಗಿರಬಹುದು. ಆ ಆಸೆ ಈಡೇರುವುದು ಅಷ್ಟು ಸುಲಭವಲ್ಲ.

ಆದರೆ, ಇಂತಹ ಅವಕಾಶ ಒದಗಿ ಬಂದಿದ್ದರೂ ಕೂಡ ಕೊಕಾ ಕೋಲಾ ಕಂಪೆನಿ ತನಗೆ ಇದುವರೆಗೆ ಹೃತಿಕ್ ಭೇಟಿಗೆ ವ್ಯವಸ್ಥೆ ಮಾಡಿಲ್ಲ ಎಂದು ಚಂಡೀಗಢದ ಯುವತಿಯೊಬ್ಬರು ಕೋರ್ಟ್ ಮೊರೆ ಹೋಗಿದ್ದಾರೆ.

ಕೊಕಾ ಕೋಲಾ ಜಾಹೀರಾತಿನಲ್ಲಿ ನಟ ಹೃತಿಕ್ ರೋಷನ್ ಕಾಣಿಸಿಕೊಳ್ಳುತ್ತಿದ್ದರು. ಕಂಪೆನಿಯು 'ಕೊಕಾ ಕೋಲಾ ಖರೀದಿಸಿ, ಹೃತಿಕ್ ರೋಷನ್ ರನ್ನು ಭೇಟಿ ಮಾಡಿ ಡಿನ್ನರ್ ಮಾಡುವ ಅವಕಾಶ ಪಡೆಯಿರಿ' ಅಂತ 15 ವರ್ಷಗಳ ಹಿಂದೆ ಜಾಹೀರಾತು ಹೊರಡಿಸಿತ್ತು. ಇದನ್ನು ನಂಬಿ ಚಂಡೀಗಢದ ಯುವತಿ ಶಿಖಾ ಮೊಂಗ ಎಂಬುವವರು ಹೃತಿಕ್ ನನ್ನು ಭೇಟಿ ಮಾಡುವ ಆಸೆಯಿಂದ ಅನೇಕ ಬಾಟಲ್ ಗಳನ್ನು ಖರೀದಿಸಿದ್ದರು. ಸ್ಪರ್ಧೆಯಲ್ಲಿ ಗೆದ್ದರು ಕೂಡ. ತಾನು ಗೆದ್ದ ಖುಷಿಯಲ್ಲಿ ಅಕ್ಕಪಕ್ಕದವರಲ್ಲಿ, ಬಂಧುಮಿತ್ರರಲ್ಲೆಲ್ಲಾ ಹೃತಿಕ್ ರೋಷನ್ ನನ್ನು ಭೇಟಿ ಮಾಡುತ್ತೇನೆ ಎಂದು ಹೇಳಿಕೊಂಡು ಬಂದರು.

ಆದರೆ ಎಷ್ಟೇ ದಿನವಾದರೂ ಕಂಪೆನಿ ಹೃತಿಕ್ ಭೇಟಿಯ ವ್ಯವಸ್ಥೆ ಮಾಡಿರಲಿಲ್ಲ. ಶಿಖಾಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಹೇಳಿತು. ಅದಕ್ಕೊಪ್ಪದ ಶಿಖಾ, ''ನನಗೆ ಹಣ ಬೇಡ, ಹೃತಿಕ್ ನನ್ನು ಭೇಟಿ ಮಾಡಬೇಕು'' ಎಂದು ಹಠ ಹಿಡಿದರು. ಕೆಲವು ಸಮಯ ಕಾದರು. ಕಂಪೆನಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ ಇದೀಗ ಶಿಖಾ ಕೋರ್ಟ್ ಮೊರೆ ಹೋಗಿದ್ದಾರೆ. ತನಗೆ ಮಾನಹಾನಿಯಾಗಿದ್ದು ಅಲ್ಲದೆ ಪಾಕೆಟ್ ಮನಿ ಎಂದು ಸಂಗ್ರಹಿಸಿಟ್ಟಿದ್ದ ಹಣದಿಂದ ಬಾಟಲ್ ಗಳನ್ನು ಖರೀದಿಸಿ ಹಣ ಖಾಲಿಯಾಗಿದೆ. ಅದನ್ನು ಕಂಪೆನಿ ಭರಿಸಬೇಕೆಂದು ಕಂಪೆನಿ ಎರಡೂವರೆ ಕೋಟಿ ರೂಪಾಯಿ ಪರಿಹಾರ ಮೊತ್ತ ನೀಡಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

ಅರ್ಜಿಯನ್ನು ಸ್ವೀಕರಿಸಿರುವ ಚಂಡೀಗಢದ ಜಿಲ್ಲಾ ನ್ಯಾಯಾಲಯ, ದೂರು ಸಲ್ಲಿಸಿರುವ ಯುವತಿ ಆರ್ಥಿಕವಾಗಿ ದುರ್ಬಲರು. ಹಾಗಾಗಿ ಅವರ ನ್ಯಾಯಾಂಗ ವಿಚಾರಣೆ ವೆಚ್ಚ 2 ಲಕ್ಷದ 43 ಸಾವಿರ ರೂಪಾಯಿಗಳನ್ನು ಕೂಡ ಕೊಕಾ ಕೋಲಾ ಕಂಪೆನಿಯೇ ಭರಿಸಬೇಕೆಂದು ಮತ್ತು ದೂರಿಗೆ ಉತ್ತರಿಸುವಂತೆ ಆದೇಶಿಸಿ ಕಂಪೆನಿಗೆ ನೊಟೀಸು ಕಳುಹಿಸಿದೆ.

''ಹೃತಿಕ್ ರನ್ನು ಭೇಟಿ ಮಾಡಲು ಅವಕಾಶ ನೀಡುವಂತೆ ಕೋರಿ ನಾನು ಹಲವು ಬಾರಿ ಕಂಪೆನಿಗೆ ಪತ್ರ ಬರೆದಿದ್ದೆ. ಆದರೆ ಅವಕಾಶ ಇದುವರೆಗೆ ನೀಡಿಲ್ಲ. ನನ್ನ ಕಾಲೇಜಿನ ಸ್ನೇಹಿತರು, ನೆಂಟರು, ಅಕ್ಕಪಕ್ಕದವರೆಲ್ಲ ಯಾವಾಗ ನೀನು ಹೃತಿಕ್ ರೋಷನ್ ನನ್ನು ಭೇಟಿಯಾಗುವುದು ಎಂದು ಕೇಳುತ್ತಿರುತ್ತಾರೆ. ಇದರಿಂದ ನನ್ನ ಮನಸ್ಸಿಗೆ ಬಹಳ ಕಿರಿಕಿರಿಯಾಗುತ್ತದೆ. ನಾನು ಸುಳ್ಳುಗಾರ್ತಿ ಎಂದು ಸಮಾಜದ ಜನ ನನ್ನನ್ನು ಬಿಂಬಿಸುತ್ತಾರೆ. ನನಗೀಗ ಬೇರೆ ದಾರಿಯಿಲ್ಲ. ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆ ಎಂದು ಶಿಖಾ ಮೊಂಗ ಹೇಳುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com