ಮೋದಿ ಒಂದೇ ಒಂದು ಭರವಸೆ ಈಡೇರಿಸಿದ್ದರೂ ರಾಜಕೀಯ ನಿವೃತ್ತಿ: ಲಾಲು ಪ್ರಸಾದ್ ಯಾದವ್

ನರೇಂದ್ರ ಮೋದಿ ನೀಡಿದ್ದ ಭರವಸೆಗಳಲ್ಲಿ ಅವರು ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದರೂ ತಾವು ರಾಜಕೀಯ ನಿವೃತ್ತಿ ಹೊಂದುವುದಾಗಿ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದಾರೆ...
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)
ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (ಸಂಗ್ರಹ ಚಿತ್ರ)

ಪಾಟ್ನಾ: ಲೋಕಸಭಾ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಗಳಲ್ಲಿ ಅವರು ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದರೂ ತಾವು ರಾಜಕೀಯ ನಿವೃತ್ತಿ  ಹೊಂದುವುದಾಗಿ ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಪಾಟ್ನಾದಲ್ಲಿ ಚುನಾವಣಾ ಪ್ರಚಾರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಲಾಲು ಪ್ರಸಾದ್ ಯಾದವ್ ಅವರು, "ಲೋಕಸಭಾ  ಚುನಾವಣೆಗೂ ಮೊದಲು ನರೇಂದ್ರ ಮೋದಿ ಭಾರತಕ್ಕೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳುತ್ತಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದು 14 ತಿಂಗಳುಗಳೇ ಕಳೆದರೂ ಯಾವುದೇ  ರೀತಿಯ ಅಭಿವೃದ್ಧಿ ಕೆಲಸಗಳೂ ಆಗಿಲ್ಲ. ಅವರು ಪ್ರಧಾನಿಯಾದ 14 ತಿಂಗಳಲ್ಲಿ ಅವರು ನೀಡಿದ್ದ ಭರವಸೆಗಳ ಪೈಕಿ ಯಾವುದಾದರೂ ಒಂದೇ ಒಂದು ಭರವಸೆಯನ್ನು ಈಡೇರಿಸಿದ್ದರೆ ನಾನು  ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ" ಎಂದು ಹೇಳಿದರು.

"ಕಪ್ಪುಹಣ ಕುರಿತು ಮಾರುದ್ದ ಭಾಷಣ ಮಾಡುತ್ತಿದ್ದ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನು..? ವಿದೇಶಿ ಬ್ಯಾಂಕುಗಳಲ್ಲಿ ಭಾರತೀಯ ಸಾವಿರಾರು ಕೋಟಿ ಕಪ್ಪುಹಣ  ಇದೆ. ತಾವು ಅಧಿಕಾರಿಕ್ಕೆ ಬಂದರೆ ಅದನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು. ಕಪ್ಪುಹಣ ಹೊಂದಿರುವ ಪಟ್ಟಿಯಲ್ಲಿ ನನ್ನ ಹೆಸರು ಕೂಡ ಇದೆ ಎಂದು ಆರ್ ಎಸ್ ಎಸ್ ನವರು ಹೇಳಿದ್ದರು.  ಆದರೆ ಆಗಿದ್ದೇನು. ಅಧಿಕಾರಕ್ಕೆ ಬಂದು 15 ತಿಂಗಳುಗಳೇ ಆದರೂ ಈ ಬಗ್ಗೆ ಒಂದೇ ಒಂದು ದಿಟ್ಟ ನಿರ್ಧಾರ ಕೈಗೊಂಡಿಲ್ಲ" ಎಂದು ಲಾಲು ಪ್ರಸಾದ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರ  ವಿರುದ್ಧ ಕಿಡಿ ಕಾರಿದರು.

ಅಲ್ಲದೆ ಗಂಗಾ ಸ್ವಚ್ಛ ಅಭಿಯಾನದ ಕುರಿತು ಮಾತನಾಡಿದ ಲಾಲು ಪ್ರಸಾದ್ ಯಾದವ್, "ಇವರು ಗಂಗಾ ಮಾತೆಗೂ ದ್ರೋಹ ಮಾಡಿದ್ದಾರೆ. ಗಂಗಾ ಮಾತೆಯನ್ನು ಸ್ವಚ್ಛಗೊಳಿಸುತ್ತೇವೆ ಎಂದು  ಹೇಳಿ ಪ್ರಜೆಗಳಿಗೆ ಸುಳ್ಳು ಹೇಳುತ್ತಿದ್ದಾರೆ. ಬೇಕಿದ್ದರೆ ಬನಾರಸ್ ನಲ್ಲಿರುವ ಸ್ಥಳೀಯ ವ್ಯಾಪಾರಿಗಳನ್ನು ಕೇಳಿ. ಬರೀ ಸುಳ್ಳು ಭರವಸೆಗಳನ್ನು ನೀಡುತ್ತಾ ಬಿಜೆಪಿ ಸರ್ಕಾರ ಕಾಲ ಹರಣ ಮಾಡುತ್ತಿದೆ" ಎಂದು ಲಾಲು ಪ್ರಸಾದ್ ಅವರು ಹೇಳಿದ್ದಾರೆ.

ಒಟ್ಟಾರೆ ಬಿಹಾರ ಚುನಾವಣಾ ಕಣ ದಿನಕಳೆದಂತೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರ ನಡುವಿನ ವಾಗ್ದಾಳಿ ಕೂಡ ಮುಂದುವರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com