
ಶಿಮ್ಲಾ: ಭಾರತದಲ್ಲಿ ಶೇ.75 ರಷ್ಟು ಬಿಡಿ ಸಿಗರೇಟುಗಳು ಮಾರಾಟವಾಗುತ್ತಿದೆ. ಭಾರತದ 5 ಬಿಲಿಯನ್ ಡಾಲರ್ ಮಾರುಕಟ್ಟೆಯಲ್ಲಿ ಶೇ.30 ರಷ್ಟು ಮೌಲ್ಯದ ಬಿಡಿ ಸಿಗರೇಟು ಮಾರಾಟ ನಡೆಯುತ್ತಿದೆ ಎಂದು ಅಂತಾರಾಷ್ಟ್ರೀಯ ಪತ್ರಿಕೆ ಹೇಳಿದೆ.
ಬಿಡಿ ಸಿಗರೇಟುಗಳ ಮಾರಾಟ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಉತ್ತಮವಾದದ್ದಲ್ಲ ಎಂದು ಪತ್ರಿಕೆ ನಡೆಸಿರುವ ಅಧ್ಯಯನ ತಿಳಿಸಿದೆ. ಭಾರತದ 10 ಪ್ರಮುಖ ಪ್ರದೇಶಗಳಲ್ಲಿ ಸಿಗರೇಟು ಮಾರಾಟದ ಬಗ್ಗೆ ಅಧ್ಯಯನ ನಡೆಸಲಾಗಿದ್ದು, ಶೇ.75 ರಷ್ಟು ಬಿಡಿ ಸಿಗರೇಟುಗಳೇ ಮಾರಾಟವಾಗುವುದು ಎಂಬ ಅಂಶ ಕ್ಯಾನ್ಸರ್ ನ ತಡೆಗಟ್ಟುವ ನಿಟ್ಟಿನಲ್ಲಿ ಪ್ರಕಟವಾಗುತ್ತಿರುವ ಏಷ್ಯನ್ ಪೆಸಿಫಿಕ್ ಜರ್ನಲ್ ನಿಂದ ಬಯಲಾಗಿದೆ.
ಅಗರ್ತಲಾ, ಬರೋಡ, ಚೆನೈ, ದೆಹಲಿ, ಗೋವಾ, ಇಂಡೋರ್, ಜೈಪುರ, ಜೋರ್ಹತ್, ಪಾಟ್ನಾ ಮತ್ತು ಶಿಮ್ಲಾಗಳಲ್ಲಿ ಸಿಗರೇಟು ಮಾರಾಟದ ಬಗ್ಗೆ ಅಧ್ಯಯನ ನಡೆಸಲಾಗಿದೆ. ಬಿಡಿ ಸಿಗರೇಟು ಮಾರಾಟವನ್ನು ಭಾರತ ಸರ್ಕಾರ ನಿಷೇಧಿಸಬೇಕು ಎಂದು ಅಧ್ಯಯನದ ವರದಿಯಲ್ಲಿ ಸಲಹೆ ನೀಡಲಾಗಿದೆ. ಈಗಲೂ ಬಿಡಿ ಸಿಗರೇಟುಗಳ ಮಾರಾಟದ ಮೇಲೆ ನಿಷೇಧವಿದೆ. ಆದರೆ ಅದನ್ನು ಯಾರೂ ಪಾಲಿಸುತ್ತಿಲ್ಲ ಎಂಬುದು ಗಮನಾರ್ಹ ಅಂಶ.
ಭಾರತದ ತಂಬಾಕು ನಿಯಂತ್ರಣ ಕಾನೂನಿನ ಪ್ರಕಾರ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಚಿತ್ರಸಹಿತವಾದ ಆರೋಗ್ಯ ಎಚ್ಚರಿಕೆ ನೀಡುವುದು ಕಡ್ಡಾಯವಾಗಿದೆ. ಆದರೆ ಬಿಡು ಸಿಗರೇಟುಗಳ ಮಾರಾಟ ಈ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಸಹ ಸಂಶೋಧಕ ರವೀಂದ್ರ ಕುಮಾರ್ ಹೇಳಿದ್ದಾರೆ. ಬಿಡಿ ಸಿಗರೇಟು ಮಾರಾಟದಿಂದ ತಂಬಾಕು ಕಂಪನಿಗಳಿಗೆ ಲಾಭವಾಗುತ್ತದೆ. ಆದರೆ ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದ್ದಲ್ಲ ಎಂದು ಅಧ್ಯಯನ ವರದಿ ಎಚ್ಚರಿಸಿದೆ.
Advertisement