
ನವದೆಹಲಿ: ನವದೆಹಲಿಯ ಜನನಿಬಿಡ ಪ್ರದೇಶವಾದ ತಿಲಕ್ ನಗರದಲ್ಲಿ ಯುವಕನೊಬ್ಬ ನಡು ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಅಶ್ಲೀಲವಾಗಿ ನಿಂದನೆ ಮಾಡಿರುವ ಘಟನೆಯೊಂದು ಭಾನುವಾರ ನಡೆದಿದ್ದು. ಈ ಘಟನೆಯೀಗ ಸಾಮಾಜಿಕ ಜಾಲತಾಣದಾದ್ಯಂತ ಚರ್ಚೆಯಾಗುತ್ತಿದೆ.
ದೆಹಲಿಯ ಜನನಿಬಿಡ ಪ್ರದೇಶವಾಗಿರುವ ತಿಲಕ್ ನಗರದ ರಸ್ತೆಯಲ್ಲಿ ಕೆಂಪು ಸಿಗ್ನಲ್ ಇದ್ದ ಕಾರಣ ಮಹಿಳೆ ರಸ್ತೆ ದಾಟಲು ಹೋಗಿದ್ದಾರೆ. ಇದೇ ವೇಳೆ ರಾಯಲ್ ಎನ್ಫೀಲ್ಡ್ ನ ಬೈಕ್ ನಲ್ಲಿದ್ದ ಯುವಕ ಸಿಗ್ನಲ್ ಬ್ರೇಕ್ ಮಾಡಿ ಬಂದಿದ್ದಾನೆ. ಈ ವೇಳೆ ಮಹಿಳೆ ಸಿಗ್ನಲ್ ತೋರಿಸಿ ಸ್ವಲ್ಪ ಸಮಯ ಕಾಯಿರಿ ಎಂದು ಹೇಳಿದ್ದಾಳೆ. ಇದಕ್ಕೆ ಕೋಪಗೊಂಡ ಯುವಕ ಅಶ್ಲೀಲವಾಗಿ ಮಹಿಳೆಯನ್ನು ನಿಂದಿಸಿದ್ದಾನೆ.
ಸಿಗ್ನಲ್ ಬಳಿ 20 ಕ್ಕೂ ಹೆಚ್ಚು ಮಂದಿ ಇದ್ದರು ಯಾರೊಬ್ಬರು ನನ್ನ ಸಹಾಯಕ್ಕೆ ಬರಲೇ ಇಲ್ಲ. ಯುವಕನ ಫೋಟೋ ತೆಗೆದುಕೊಂಡು ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಹೇಳಿದೆ. ಇದಕ್ಕೆ ಅಂಜದ ಆ ಯುವಕ ನಿನ್ನಿಂದ ಏನು ಮಾಡಲು ಸಾಧ್ಯವೋ ಮಾಡಿಕೋ. ದೂರು ನೀಡಿ ನೋಡು. ನಂತರ ನಾನೇನು ಮಾಡುತ್ತೇನೆಂದು ನೋಡು ಎಂದು ಬೆದರಿಸಿದ್ದಾನೆ. ಅಲ್ಲದೆ, ಫೋಟೋಗೆ ಪೋಸ್ ಕೂಡ ನೀಡಿದ.ಇಂದು ನನ್ನೊಂದಿಗೆ ಈ ರೀತಿಯಾಗಿ ಮಾತನಾಡಿದ ವ್ಯಕ್ತಿ ಮುಂದೊಂದು ದಿನ ಮತ್ತೊಂದು ಹೆಜ್ಜೆ ಮುಂದಿಡಬಲ್ಲ. ಹೀಗಾಗಿ ಯುವಕನಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತನ್ನ ಫೇಸ್ ಬುಕ್ ನ ಗೋಡೆಯಲ್ಲಿ ಬರೆದುಕೊಂಡು ಅಸಮಾಧಾನದಿಂದ ತನ್ನ ಅಳಲನ್ನು ತೋಡಿಕೊಂಡಿದ್ದಳು.
ಮಹಿಳೆಯ ಈ ಅಸಮಾಧಾನ ಬರಹವೀಗ ಸಾಮಾಜಿಕ ಜಾಲತಾಣದಾದ್ಯಂತ ಸುದ್ದಿಯಾಗುತ್ತಿದ್ದು, ನಿನ್ನೆಯಷ್ಟೇ ಮಹಿಳೆ ಹಾಕಿದ ಬರಹಕ್ಕೆ 75ಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು 14,500 ಜನರು ಶೇರ್ ಮಾಡಿದ್ದಾರೆ. ಅಲ್ಲದೆ, ಯುವಕನ ವಿರುದ್ಧ ಸಾಮಾಜಿಕ ಜಾಲತಾಣದಾದ್ಯಂತ ಹಲವು ವಿರೋಧಗಳು ವ್ಯಕ್ತವಾಗುತ್ತಿದೆ.
ಯುವತಿಯ ಈ ಅಸಮಾಧಾನಕ್ಕೆ ಇದೀಗ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನು ಖಂಡಿಸಿದ್ದಾರೆ. ಅಲ್ಲದೆ, ಮಹಿಳೆಯ ಸಹಾಯಕ್ಕೆ ಬಾರದಿರುವ ದೆಹಲಿ ಜನತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯಿಂದಾಗಿ ಮಹಿಳೆ ಹೆದರದೆ ಯುವಕನ ವಿರುದ್ಧ ದೂರು ದಾಖಲಿಸಿರುವ ಶ್ಲಾಘನೀಯ ಎಂದು ಹೇಳಿದ್ದಾರೆ.
ಯುವತಿ ನೀಡಿದ ದೂರಿನ ಅನ್ವಯ ದೆಹಲಿ ಪೊಲೀಸರು ತನಿಖೆ ನಡೆಸಿದ್ದು, ಇದೀಗ ಯುವಕನನ್ನು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement