

ಅಹಮದಾಬಾದ್: ಪಟೇಲ್ ಸಮುದಾಯಕ್ಕೆ ಹಿಂದುಳಿದ ವರ್ಗದಡಿ ಮೀಸಲಾತಿ ನೀಡುವುದಕ್ಕೆ ಆಗ್ರಹಿಸಿ ಗುಜರಾತ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವರೆಗೆ ಆರು ಮಂದಿ ಹತ್ಯೆಗೀಡಾಗಿದ್ದಾರೆ.
ಪ್ರತಿಭಟನೆ ನೇತೃತ್ವ ವಹಿಸಿರುವ ಹಾರ್ದಿಕ್ ಪಟೇಲ್ ನನ್ನನು ಬಂಧಿಸಲಾಗಿರುವ ಪರಿಣಾಮ ಹಿಂಸಾಚಾರ ಉಂಟಾಗಿದ್ದು, ಆರು ಮಂದಿ ಹತ್ಯೆಗೀಡಾಗಿದ್ದಾರೆ. ಮೀಸಲಾತಿ ಬೇಡಿಕೆ ಗುಜರಾತ್ ನಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಿದ್ದು ಅಹಮದಾಬಾದ್, ಸೂರತ್, ಮೆಹ್ಸಾನ, ರಾಜ್ ಕೋಟ್, ಪಠಾಣ್ ನಗರಗಳಲ್ಲಿ ಕರ್ಫ್ಯೂ ಮುಂದುವರೆದಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಹಿನ್ನೆಲೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮಹಾತ್ಮಾ ಗಾಂಧಿ, ಸರ್ದಾರ್ ವಲ್ಲಭ ಭಾಯ್ ಪಟೇಲ್ ನಂತಹ ಮಹಾತ್ಮರ ನಾಡಿನಲ್ಲಿ ಹಿಂಸಾಚಾರಕ್ಕೆ ಅವಕಾಶ ನೀಡಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದರು. ಇದೇ ವೇಳೆ ಪ್ರತಿಭಟನೆ ನೇತೃತ್ವ ವಹಿಸಿರುವ ಹಾರ್ದಿಕ್ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೂ ಮೂವರನ್ನು ಹತ್ಯೆ ಮಾಡಲಾಗಿದೆ. ಈ ಘಟನೆಗೂ ಮುನ್ನ ಮಾತನಾಡಿದ್ದ ಹಾರ್ದಿಕ್ ಪಟೇಲ್, ಪೊಲೀಸರು, ಮಹಿಳೆಯರು ಮತ್ತು ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಮುಂದಿನ ಪರಿಣಾಮಗಳಿಗೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯೇ ಕಾರಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದರು.
ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆಗೆ ಮೊರೆ: ಪ್ರತಿಭಟನೆ ಕಾವು ಏರುತ್ತಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯಗಳನ್ನು ತಡೆಗಟ್ಟಲು ಗುಜರಾತ್ ಸರ್ಕಾರ ಸೇನೆಯನ್ನು ಕರೆಸಿದೆ.