

ಚಂಡೀಗಢ: ವಿದ್ಯುತ್ ಚಾಲಿತ ರೈಲಿಗೆ ಎದುರಿನಿಂದ ಬಂದ ಎಕ್ಸ್ ಪ್ರೆಸ್ ರೈಲು ಡಿಕ್ಕಿ ಹೊಡೆದು ಚಾಲಕ ಸೇರಿದಂತೆ ಇಬ್ಬರು ಸಾವಿಗೀಡಾಗಿ ಸುಮಾರು 100 ಮಂದಿ ಗಾಯಗೊಂಡಿರುವ ಘಟನೆ ಹರ್ಯಾಣದ ಪಲ್ವಾಲ್ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ನಡೆದಿದೆ.
ಬೆಳಗಿನ ಜಾವ ದಟ್ಟ ಮಂಜು ಮುಸುಕಿದ್ದರಿಂದ ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ರೈಲಿನ ಚಾಲಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದುರ್ಘಟನೆ ನಡೆದ ಸ್ಥಳ ದೆಹಲಿಯಿಂದ 80 ಕಿ.ಮೀ ದೂರದಲ್ಲಿದೆ.
ರೈಲಿನ ಹಳಿಯಲ್ಲಿ ನಿಂತಿದ್ದ ವಿದ್ಯುತ್ ಚಾಲಿತ ಷಟಲ್ ರೈಲು ಹೊರಟು ಮುಂದಿನಿಂದ ಬರುತ್ತಿದ್ದ ಎಕ್ಸ್ ಪ್ರೆಸ್ ರೈಲಿಗೆ ಹೋಗಿ ಡಿಕ್ಕಿ ಹೊಡೆದಿದೆ. ದಟ್ಟವಾಗಿ ಮಂಜು ಮುಸುಕಿದ್ದರಿಂದ ಮುಂದೆ ರೈಲು ಇರುವುದು ಗೊತ್ತಾಗಲಿಲ್ಲ. ಸುರಕ್ಷತೆ ಮತ್ತು ಪ್ರಾಣಾಪಾಯ ಕಾರ್ಯಗಳನ್ನು ರೈಲ್ವೆ ಮತ್ತು ಜಿಲ್ಲಾಡಳಿತ ತಕ್ಷಣವೇ ಕೈಗೆತ್ತಿಗೊಂಡಿದೆ. ಗಾಯಗೊಂಡವರನ್ನು ಪಲ್ವಾಲ್ ಮತ್ತು ಫರೀದಾಬಾದ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕತ್ತರ್ ಅವರು ಪಲ್ವಾಲ್ ಉಪ ಆಯುಕ್ತ ಅವರೊಂದಿಗೆ ಮಾತುಕತೆ ನಡೆಸಿ ಪರಿಹಾರ ಕಾರ್ಯಗಳನ್ನು ತಕ್ಷಣವೇ ಕೈಗೆತ್ತಿಕೊಳ್ಳುವಂತೆ ಸೂಚಿಸಿದ್ದಾರೆ.