

ನವದೆಹಲಿ: ನಾನು ಮುಖ್ಯಮಂತ್ರಿಯಾಗಲು ಸಿದ್ಧವಿಲ್ಲ ಎಂದು ಹೇಳುವ ಮೂಲಕ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು, ತಾವು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ವದಂತಿಗೆ ಶನಿವಾರ ತೆರೆ ಎಳೆದಿದ್ದಾರೆ.
ಶೀಘ್ರದಲ್ಲೇ ತಾವು ಕಣಿವೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತೀರಿ ಎಂಬ ಮಾತುಗಳು ಕೇಳಿ ಬರುತ್ತಿವೆಯಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಫ್ತಿ, 'ಇಲ್ಲ. ನಾನು ಸಿಎಂ ಆಗುವುದಿಲ್ಲ' ಎಂದು ಸ್ಪಷ್ಟಪಡಿಸಿದರು.
ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಹಾಗೂ ಮೆಹಬೂಬಾ ಅವರ ತಂದೆ ಮುಫ್ತಿ ಮೊಹಮ್ಮದ್ ಸಹೀದ್ ಅವರು, ಪುತ್ರಿಯನ್ನು ಮುಖ್ಯಮಂತ್ರಿ ಮಾಡುವ ಚಿಂತನೆಯಲ್ಲಿದ್ದರು. ಆದರೆ ಇದಕ್ಕೆ ತಾನು ಒಪ್ಪಿಲ್ಲ ಎಂದು ಮೆಹಬೂಬಾ ತಿಳಿಸಿದ್ದಾರೆ.
ನನ್ನ ತಂದೆ ಜಮ್ಮು ಮತ್ತು ಕಾಶ್ಮೀರ ಜನತೆಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ತನ್ನ ಮಗಳನ್ನು ಮುಖ್ಯಮಂತ್ರಿ ಮಾಡಲು ಈ ಮೈತ್ರಿ ಮಾಡಿಕೊಂಡಿಲ್ಲ ಎಂದು ಪಿಡಿಪಿ ಅಧ್ಯಕ್ಷೆ ಹೇಳಿದ್ದಾರೆ.