

ನವದೆಹಲಿ: ``ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವು ಮುಂದೊಂದು ದಿನ ಒಂದಾಗಲಿದ್ದು, ಅಖಂಡ ಭಾರತ ನಿರ್ಮಾಣವಾಗಲಿದೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಪಾಕ್ ಭೇಟಿಯ ಬೆನ್ನಲ್ಲೇ ಅಲ್ ಜಜೀರಾ ಸುದ್ದಿವಾಹಿನಿಯ ಹೆಡ್ ಟು ಹೆಡ್ ಕಾರ್ಯಕ್ರಮದಲ್ಲಿ ಇವರು ಮಾತನಾಡಿದ್ದಾರೆ. ``60 ವರ್ಷಗಳ ಹಿಂದೆ ವಿವಿಧ ಐತಿಹಾಸಿಕ ಕಾರಣಗಳಿಂದಾಗಿ ಪ್ರತ್ಯೇಕವಾಗಿದ್ದ ಭಾರತ-ಬಾಂಗ್ಲಾ-ಪಾಕಿಸ್ತಾನವು ಸದ್ಭಾವನೆಯ ನೆಲೆಯಲ್ಲಿ ಮತ್ತೆ ಒಂದಾಗಲಿದ್ದು, ಅಖಂಡ ಭಾರತದ ಕನಸು ನನಸಾಗಲಿದೆ ಎಂದು ಆರೆಸ್ಸೆಸ್ ನಂಬಿದೆ. ನಾನು ಕೂಡ ಇದನ್ನೇ ನಂಬಿದ್ದೇನೆ,'' ಎಂದಿದ್ದಾರೆ.
ಜತೆಗೆ, ``ನನ್ನ ಮಾತಿನ ಅರ್ಥ, ನಾವು ಯಾವುದೋ ದೇಶದೊಂದಿಗೆ ಯುದ್ಧ ಸಾರುತ್ತೇವೆ ಎಂದಲ್ಲ. ಬದಲಿಗೆ, ಎಲ್ಲರ ಸಹಮತದೊಂದಿಗೆ ಈ ಕಲ್ಪನೆ ಸಾಕಾರವಾಗಲಿದೆ,'' ಎಂದೂ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಪ್ರಶಸ್ತಿ ವಾಪ್ಸಿ ಕುರಿತ ಪ್ರಶ್ನೆಗೆ ಉತ್ತರಿಸಿದ ರಾಮ್ ಮಾಧವ್, ``ಪ್ರಶಸ್ತಿ ವಾಪ್ಸಿಯು ಸರ್ಕಾರ ಮತ್ತು ಭಾರತದ ವರ್ಚಸ್ಸನ್ನು ಹಾಳುಮಾಡಲೆಂದು ಆರಂಭಿಸಿದ ಚಳವಳಿ. ಅಲ್ಲದೇ ಇವರ ಪ್ರತಿಭಟನೆಯ ಸ್ವರೂಪವೇ ಸರಿಯಿಲ್ಲ,'' ಎಂದಿದ್ದಾರೆ. ಮೋದಿ ಪಾಕ್ ಭೇಟಿಗೆ ಬಹುಪರಾಕ್: ಪ್ರಧಾನಿ ನರೇಂದ್ರ ಮೋದಿ ಅವರ ದಿಢೀರ್ ಪಾಕ್ ಭೇಟಿಗೆ ಎಲ್ಲ ದಿಕ್ಕುಗಳಿಂದಲೂ ಮೆಚ್ಚುಗೆಯ ಮಳೆಯೇ ಹರಿದುಬಂದಿದೆ. ಪಾಕಿಸ್ತಾನದ ಪ್ರತಿಪಕ್ಷಗಳೂ ಪಕ್ಷಭೇದ ಮರೆತು ಮೋದಿ ಭೇಟಿಯನ್ನು ಸ್ವಾಗತಿಸಿದ್ದು, ಶುಕ್ರವಾರದ ಬೆಳವಣಿಗೆಗೆ ಅಮೆರಿಕ ಹಾಗೂ ವಿಶ್ವಸಂಸ್ಥೆಯಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಮೋದಿ ಭೇಟಿಯನ್ನು ಎರಡೂ ದೇಶಗಳ ಸಂಬಂಧ ಸುಧಾರಣೆಯಲ್ಲಿ ಹೊಸ ಅಧ್ಯಾಯ ಎಂದು ಬಣ್ಣಿಸಲಾಗಿದ್ದು, ಮೋದಿ ಅವರ ಅನಿರೀಕ್ಷಿತ ನಿರ್ಧಾರಕ್ಕೆ ಎಲ್ಲರೂ ಬಹುಪರಾಕ್ ಹೇಳಿದ್ದಾರೆ.
ಶುಕ್ರವಾರ ಪ್ರಧಾನಿ ಮೋದಿ ಆಫ್ಘನ್‍ನಿಂದ ಭಾರತಕ್ಕೆ ವಾಪಸಾಗುವ ದಾರಿ ಮಧ್ಯೆ ಲಾಹೋರ್‍ನಲ್ಲಿಳಿದು, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರೊಂದಿಗೆ ಸುಮಾರು ಎರಡು ಗಂಟೆ ಕಳೆದು, ಎಲ್ಲರಲ್ಲೂ ದಿಗ್ಭ್ರಾಂತರನ್ನಾಗಿಸಿದ್ದರು. ಪಾಕ್ ಪ್ರತಿಪಕ್ಷಗಳಿಂದ ಸ್ವಾಗತ: ಮೋದಿ ಅವರ ಭೇಟಿಯನ್ನು ಪಾಕಿಸ್ತಾನದ ಬಹುತೇಕ ಪಕ್ಷಗಳು ಸ್ವಾಗತಿಸಿವೆ. ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ಸೈಯದ್ ಖುರ್ಷಿದ್ ಶಾ, ``ಮೋದಿ ಭೇಟಿಯನ್ನು ನಾವು ಬೆಂಬಲಿಸುತ್ತೇವೆ'' ಎಂದರೆ, ಪಿಪಿಪಿ ಮುಖ್ಯಸ್ಥ ಬಿಲಾವಲ್ ಭುಟ್ಟೋ ಜರ್ದಾರಿ, ``ನರೇಂದ್ರಮೋದಿಯವರೇ ಪಾಕಿಸ್ತಾನಕ್ಕೆ ಸ್ವಾಗತ. ನಿರಂತರ ಮಾತುಕತೆಯೇ ಎಲ್ಲ ಸಮಸ್ಯೆಗಳ ಪರಿಹಾರಕ್ಕಿರುವ ಏಕೈಕ ಮಾರ್ಗ,'' ಎಂದು ಟ್ವೀಟಿಸಿದ್ದಾರೆ.
ಇವರಲ್ಲದೇ ಪಾಕಿಸ್ತಾನ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮಾ್ರನ್ ಖಾನ್, ರಕ್ಷಣಾ ಸಚಿವ ಖ್ವಾಜಾ ಆಸಿಫ್, ಅವಾಮಿ ನ್ಯಾಷನಲ್ ಪಾರ್ಟಿ ನಾಯಕ ಜಹೀದ್ ಖಾನ್, ಮಾನವ ಹಕ್ಕುಗಳ ಹೋರಾಟಗಾರರಾದ ಅಸ್ಮಾ ಜಹಾಂಗಿರ್, ರಕ್ಷಣಾ ತಜ್ಞ ಏರ್ ವೈಸ್ ಮಾರ್ಷಲ್ (ನಿವೃತ್ತ) ಶಹೀದ್ ಲತೀಫ್ ಸೇರಿದಂತೆ ಅನೇಕರು ಮೋದಿ ಭೇಟಿಯನ್ನು ಶ್ಲಾಘಿಸಿದ್ದಾರೆ.
ಇದೇ ವೇಳೆ, ಜಮಾತ್-ಇ-ಇಸ್ಲಾಮಿ ಮುಖ್ಯಸ್ಥ ಸಿರಾಜುಲ್ ಹಖ್ ಮತ್ತು ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಮಾತ್ರ ಮೋದಿ ಭೇಟಿಯನ್ನು ವಿರೋಧಿಸಿದ್ದಾರೆ. ಮೋದಿ ಅವರಿಗೆ ಅದ್ಭುತ ಸ್ವಾಗತ ಕೋರುವ ಮೂಲಕ ಷರೀಫ್ ಅವರು ನೈಜ ಹಾಗೂ ದೇಶಭಕ್ತ ಪಾಕಿಸ್ತಾನೀಯರ ಮನನೋಯಿಸಿದ್ದಾರೆ ಎಂದು ಸಯೀದ್ ಹೇಳಿದ್ದಾನೆ.
ಈ ನಡುವೆ, ಪಾಕಿಸ್ತಾನ ಹಾಗೂ ಅಮೆರಿಕದ ಮಾಧ್ಯಮಗಳೂ ಇದೊಂದು ಉತ್ತಮ ಬೆಳವಣಿಗೆ ಎಂದಿವೆ. ಅಮೆರಿಕ ಹಾಗೂ ವಿಶ್ವಸಂಸ್ಥೆ, ಎರಡೂ ದೇಶಗಳ ಸುಧಾರಿತ ಸಂಬಂಧದಿಂದ ಆ ಇಡೀ ಪ್ರದೇಶಗಳಿಗೆ ಲಾಭವಾಗಲಿದೆ ಎಂದಿವೆ. ದ್ವಿಪಕ್ಷೀಯ ಸಂಬಂಧವನ್ನು ಹೀಗೇ ಮುಂದುವರಿಸಿಕೊಂಡು ಹೋಗಿ, ಅದನ್ನು ಇನ್ನಷ್ಟು ಬಲಪಡಿಸಿ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸಲಹೆ ನೀಡಿದ್ದಾರೆ.